ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ “ಆದರ್ಶ ರೈತ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ “ಆದರ್ಶ ರೈತ’ ಸಿನಿಮಾದ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇತ್ತೀಚೆಗೆ ಸಿನಿಮಾದ ಲಿರಿಕಲ್ ವಿಡಿಯೋವನ್ನು ಬಿಡುಗಡೆ ಮಾಡಿದೆ.
“ಕುಮುದ ಆರ್ಟ್ಸ್ ಕ್ರಿಯೇಷನ್ಸ್’ ಬ್ಯಾನರಿನಲ್ಲಿ ಡಾ. ಅಮರನಾಥ ರೆಡ್ಡಿ ವಿ. ನಿರ್ಮಿಸಿ ಮತ್ತು ನಾಯಕ ನಟನಾಗಿ ಅಭಿನಯಿಸಿರುವ “ಆದರ್ಶ ರೈತ’ ಸಿನಿಮಾಕ್ಕೆ ರಾಜೇಂದ್ರ ಕೊಣಿದೆಲ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.
ಇದೇ ವೇಳೆ ಮಾತನಾಡಿದ ನಿರ್ದೇಶಕ ರಾಜೇಂದ್ರ ಕೊಣಿದೆಲ, “ರೈತರ ಸಂಕಷ್ಟ ಮತ್ತು ಸಮಸ್ಯೆಗಳನ್ನು ಇಟ್ಟುಕೊಂಡು ಆರಂಭದಲ್ಲಿ ಒಂದು ಶಾರ್ಟ್ ಫಿಲಂ ನಿರ್ಮಿಸಬೇಕು ಎಂದುಕೊಂಡಿದ್ದೆವು. ಆದರೆ ಕಥೆಯ ಎಳೆ ತುಂಬಾ ಚೆನ್ನಾಗಿದ್ದ ಕಾರಣ, ನಿರ್ಮಾಪಕರ ಆಸೆಯಂತೆ ಅದನ್ನೇ ಸಿನಿಮಾ ಮಾಡುವಂತಾಯಿತು. ರೈತರ ಜೀವನದ ಮೇಲೆ ಬೆಳಕು ಚೆಲ್ಲುವಂತಹ, ಸಮಾಜಕ್ಕೆ ಸಂದೇಶ ನೀಡುವಂತಹ ಸಿನಿಮಾ ಇದಾಗಿದೆ’ ಎಂದು ಸಿನಿಮಾದ ಹಿಂದಿನ ಕಥೆ ತೆರೆದಿಟ್ಟರು.
ನಟನೆ ಮತ್ತು ನಿರ್ಮಾಣದ ಬಗ್ಗೆ ಮಾತನಾಡಿದ ಡಾ. ಅಮರನಾಥ ರೆಡ್ಡಿ, “ನಾವು ಮೂಲತಃ ರೈತಾಪಿ ಕುಟುಂಬದಿಂದ ಬಂದವರು. ಆರಂಭದಿಂದಲೂ ಸಿನಿಮಾದ ಕಡೆಗೆ ಒಲವಿತ್ತು. ಆದರೆ ಕಾರಣಾಂತರಗಳಿಂದ ಸಿನಿಮಾ ಮಾಡಲಾಗಿರಲಿಲ್ಲ. ರೈತರ ಜೀವನವನ್ನು ಸಿನಿಮಾ ಮೂಲಕವೇ ಹೇಳಬೇಕು ಎಂಬ ಉದ್ದೇಶದಿಂದ ಈಗ “ಆದರ್ಶ ರೈತ’ ಸಿನಿಮಾವನ್ನು ನಿರ್ಮಿಸಿ, ಅದರಲ್ಲಿ ರೈತನಾಗಿ ಅಬಿನಯಿಸಿದ್ದೇನೆ. ರೈತರ ಸಮಸ್ಯೆಗಳ ಜೊತೆಗೆ ಒಂದಷ್ಟು ಸಂದೇಶ ಕೂಡ ಸಿನಿಮಾದಲ್ಲಿದೆ. ಜೊತೆಗೆ ಆಡಿಯನ್ಸ್‌ಗೆ ಇಷ್ಟವಾಗುವಂಥ ಮನರಂಜನಾತ್ಮಕ ಅಂಶಗಳೂ ಸಿನಿಮಾದಲ್ಲಿದೆ’ ಎಂದು ವಿವರಣೆ ನೀಡಿದರು.
2 ವರ್ಷಗಳ ಹಿಂದೆ ಶುರುವಾದ “ಆದರ್ಶ ರೈತ’ ಸಿನಿಮಾವನ್ನು ಚಿಂತಾಮಣಿ ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಡಾ. ಅಮರನಾಥ ರೆಡ್ಡಿ ಅವರೊಂದಿಗೆ ರೇಖಾದಾಸ್, ಖುಷಿ ಮೆಹ್ತಾ, ಸೂಫಿಯಾ, ಸಿದ್ದಾರ್ಥ, ಸುಜಾತಾ ಮೈಸೂರು ಮೊದಲಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ., ಶೀಘ್ರದಲ್ಲಿಯೇ ಸಿನಿಮಾವನ್ನು ತೆರೆಗೆ ತರುವ ಯೋಚನೆಯಲ್ಲಿದೆ ಚಿತ್ರತಂಡ.
ಕ್ಲೈಮ್ಯಾಕ್ಸ್‌ಮುಗಿಸಿದ ಕಾಟೇರ: ದರ್ಶನ್ ನಾಯಕರಾಗಿರುವ “ಕಾಟೇರ’ ಚಿತ್ರ ಈಗಾಗಲೇ ನೂರು ದಿನಗಳ ಚಿತ್ರೀಕರಣ ಪೂರೈಸಿದೆ. ಇನ್ನು ಚಿತ್ರದ ಮೂರು ಹಾಡುಗಳ ಚಿತ್ರೀಕರಣವಷ್ಟೇ ಬಾಕಿ ಇದೆ. ಈ ಚಿತ್ರವನ್ನು ರಾಕ್‌ಲೈನ್ ವೆಂಕಟೇಶ್ ನಿರ್ಮಿಸುತ್ತಿದ್ದಾರೆ. ಈ ಸಿನಿಮಾ ಆಗಲು ಕಾರಣ ಕೂಡಾ ದರ್ಶನ್ ಅಂತೆ. “ನಾನು ಒಳ್ಳೆಯ ಕಥೆಯ ಹುಡುಕಾಟದಲ್ಲಿದ್ದಾಗ ದರ್ಶನ್ ಅವರೇ “ಹೀಗೊಂದು ಕಥೆ ಇದೆ. ಒಮ್ಮೆ ಕೇಳಿ’ ಎಂದರು. ಅದರಂತೆ ತರುಣ್ ಸುಧೀರ್ ಬಂದು ನರೇಶನ್ ಕೊಟ್ಟಾಗ ಖುಷಿಯಾಗಿ ಈ ಸಿನಿಮಾ ಮಾಡಲು ಒಪ್ಪಿಕೊಂಡೆ. ನನಗೆ ಯಾವುದೇ ತೊಂದರೆಯಾಗ ದಂತೆ ಇಡೀ ತಂಡ ಸಿನಿಮಾ ಮಾಡುತ್ತಿದೆ’ ಎಂದರು ರಾಕ್‌ಲೈನ್ ವೆಂಕಟೇಶ್.