Advertisement

ಉದ್ಯಮಿ ಜಾರ್ಜ್‌ ಸೊರೊಸ್‌ ವಿರುದ್ಧ ಕಿಡಿ

12:02 AM Feb 18, 2023 | Team Udayavani |

ಹೊಸದಿಲ್ಲಿ: ಮ್ಯೂನಿಚ್‌ನ ಭದ್ರತಾ ಸಮಾವೇಶದಲ್ಲಿ ಕೋಟ್ಯಧಿಪತಿ ಉದ್ಯಮಿ ಹಾಗೂ ಹೂಡಿಕೆದಾರ ಜಾರ್ಜ್‌ ಸೊರೊಸ್‌ ಅವರು ನೀಡಿರುವ ಹೇಳಿಕೆ ಭಾರೀ ವಿವಾದ ಸೃಷ್ಟಿಸಿದ್ದು, ಸೊರೊಸ್‌ ವಿರುದ್ಧ ಆಡಳಿತಾರೂಢ ಬಿಜೆಪಿ ಮುಗಿಬಿದ್ದಿದೆ.

Advertisement

“ಅದಾನಿ ಸಮೂಹ ಸಂಸ್ಥೆಗಳ ಮುಖ್ಯಸ್ಥ ಗೌತಮ್‌ ಅದಾನಿ ಅವರು ಷೇರು ಮಾರುಕಟ್ಟೆ ತಿರುಚುವಿಕೆಯಂಥ ಕೆಲಸದಲ್ಲಿ ತೊಡಗಿರುವುದು ಭಾರತದಲ್ಲಿ ಪ್ರಜಾಸತ್ತೆಯ ಪುನರುತ್ಥಾನಕ್ಕೆ ಕಾರಣವಾಗಬಹುದು.

ಈ ವಿಚಾರದಲ್ಲಿ ಪ್ರಧಾನಿ ಮೋದಿ ಅವರು ಮೌನ ಮುರಿಯಬೇಕು ಮತ್ತು ವಿದೇಶಿ ಹೂಡಿಕೆದಾರರ ಪ್ರಶ್ನೆಗಳಿಗೆ ಉತ್ತರಿಸಬೇಕು’ ಎಂದು ಸೊರೊಸ್‌ ಹೇಳಿದ್ದರು. ಇದಕ್ಕೆ ವ್ಯಾಪಕ ಆಕ್ರೋಶ ಹೊರಹಾಕಿರುವ ಬಿಜೆಪಿ, “ಸೊರೊಸ್‌ ಅವರು ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಯತ್ನಿಸುತ್ತಿದ್ದಾರೆ. ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತ್ರವಲ್ಲದೆ ಭಾರತೀಯ ಪ್ರಜಾಸತ್ತೆ ಮೇಲೂ ದಾಳಿ ನಡೆಸಿದ್ದಾರೆ’ ಎಂದು ಕಿಡಿಕಾರಿದೆ.

ಸೊರೊಸ್‌ ಹೇಳಿದ್ದೇನು?: ಗುರುವಾರ ಮ್ಯೂನಿಚ್‌ನಲ್ಲಿ ಮಾತನಾಡಿದ 92 ವರ್ಷ ಸೊರೊಸ್‌, “ಮೋದಿ ಮತ್ತು ಅದಾನಿ ಬಹಳ ಆಪ್ತರು. ಅವರ ಹಣೆಬರಹವೂ ಒಂದಕ್ಕೊಂದು ಸಂಬಂಧ ಹೊಂದಿರು ವಂಥದ್ದು. ಅದಾನಿ ಷೇರು ಮಾರುಕಟ್ಟೆ ತಿರುಚುವಿಕೆಯಲ್ಲಿ ತೊಡಗಿದ ಕಾರಣ ಷೇರುಗಳು ಪತನ ಹೊಂದಿದವು. ಈ ವಿಷಯದಲ್ಲಿ ಮೋದಿ ಮೌನಕ್ಕೆ ಶರಣಾಗಿದ್ದಾರೆ. ಆದರೆ ವಿದೇಶಿ ಹೂಡಿಕೆದಾರರು ಮತ್ತು ಸಂಸತ್‌ಗೆ ಅವರು ಉತ್ತರಿಸ ಲೇಬೇಕು’ ಎಂದಿದ್ದರು.

ಸ್ಮತಿ ಇರಾನಿ ಆಕ್ರೋಶ: ಈ ಹಿನ್ನೆಲೆ ದಿಲ್ಲಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವೆ ಸ್ಮತಿ ಇರಾನಿ, “ಆರ್ಥಿಕ ಯುದ್ಧಾಪರಾಧಿ’ ಆಗಿರುವ ಸೊರೊಸ್‌ ಈಗ ಭಾರತದ ವಿರುದ್ಧ ತನ್ನ ದುರುದ್ದೇಶವನ್ನು ಸಾಧಿಸಲು ಹೊರಟಿದ್ದಾರೆ. ಬ್ಯಾಂಕ್‌ ಆಫ್ ಇಂಗ್ಲೆಂಡ್‌ನ‌ ಪತನಕ್ಕೆ ಕಾರಣವಾದ ವ್ಯಕ್ತಿಯು, ಭಾರತದ ಪ್ರಜಾಸತ್ತೆಯನ್ನು ನಾಶ ಮಾಡಲು ಮುಂದಾ ಗಿದ್ದಾರೆ. ತಮ್ಮಿಷ್ಟದ ವ್ಯಕ್ತಿಗಳು ಅಧಿಕಾರದಲ್ಲಿ ಇರಬೇಕು ಎಂಬ ಉದ್ದೇಶದಿಂದ ಬೇರೆ ಬೇರೆ ದೇಶಗಳ ಸರಕಾರ ಗಳನ್ನು ಪತನಗೊಳಿಸಲು ಇಂಥ ಶಕ್ತಿಗಳು ಪ್ರಯತ್ನ ಪಡುತ್ತಲೇ ಇರುತ್ತವೆ ಎಂದಿದ್ದಾರೆ. ಸೊರೊಸ್‌ ಪರ ಯಾವುದೇ ರಾಜಕೀಯ ಪಕ್ಷಗಳು ಮಾತನಾಡಿ ದರೂ ಅವರ ಬಣ್ಣವನ್ನು ದೇಶದ ಮತದಾರರು ಬಯಲು ಮಾಡಲಿದ್ದಾರೆ ಎಂದೂ ಇರಾನಿ ಎಚ್ಚರಿಸಿದ್ದಾರೆ.

Advertisement

ಶಿವಸೇನೆ ನಾಯಕಿ ಪ್ರಿಯಾಂಕಾ ಚತುರ್ವೇದಿ ಪ್ರತಿಕ್ರಿಯಿಸಿ, “ಸೊರೊಸ್‌ ಹೇಳಿಕೆ ಖಂಡಿಸಲೆಂದೇ ಇಡೀ ಬಿಜೆಪಿಯ ಟ್ರೋಲ್‌ ಸಚಿವಾಲಯಗಳು ಪತ್ರಿಕಾಗೋಷ್ಠಿ ನಡೆಸುತ್ತವೆ. ಇಸ್ರೇಲ್‌ನ ಪೆಗಾಸಸ್‌ ಭಾರತದ ಚುನಾವಣ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಿದ್ದರ ಬಗ್ಗೆ ಸಚಿವರು ಏನೂ ಮಾತನಾಡಿಲ್ಲವೇಕೆ? ಅದು ನಿಜಕ್ಕೂ ದೇಶದ ಪ್ರಜಾಸತ್ತೆಗೆ ಅತೀ ದೊಡ್ಡ ಅಪಾಯ ಉಂಟುಮಾಡಿತ್ತಲ್ಲವೇ’ ಎಂದು ಪ್ರಶ್ನಿಸಿದ್ದಾರೆ.

ಅದಾನಿ ಪ್ರಕರಣವು ಭಾರತದಲ್ಲಿ ಪ್ರಜಾಸತ್ತಾತ್ಮಕ ಪುನರುತ್ಥಾನಕ್ಕೆ ಕಾರಣವಾಗುತ್ತದೋ, ಇಲ್ಲವೋ ಎನ್ನುವುದು ಕಾಂಗ್ರೆಸ್‌, ಇತರ ವಿಪಕ್ಷಗಳು ಹಾಗೂ ನಮ್ಮ ಚುನಾವಣಾ ಪ್ರಕ್ರಿಯೆಯನ್ನು ಅವಲಂಬಿಸಿದೆ. ಅದಕ್ಕೂ ಸೊರೊಸ್‌ಗೂ ಸಂಬಂಧ ವಿಲ್ಲ. ಅವರು ಹಸ್ತಕ್ಷೇಪ ಮಾಡಬೇಕಾಗಿಲ್ಲ.
-ಜೈರಾಂ ರಮೇಶ್‌ ಕಾಂಗ್ರೆಸ್‌ ನಾಯಕ

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next