Advertisement

ಅದಾನಿ ಯುಪಿಸಿಎಲ್‌ : ಸದ್ಯದಲ್ಲೇ ಸಿಮೆಂಟ್‌ ಉತ್ಪಾದನೆ

03:11 PM May 22, 2017 | Team Udayavani |

ಪಡುಬಿದ್ರಿ: ಸದ್ಯೋ ಭವಿಷ್ಯದಲ್ಲಿ ಸುಮಾರು 1,000 ಕೋಟಿ ರೂ. ಹೂಡಿಕೆಯೊಂದಿಗೆ ಯುಪಿಸಿಎಲ್‌ ಯೋಜನಾ ಪ್ರದೇಶದೊಳಗೆಯೇ ಅದಾನಿ ಸಿಮೆಂಟ್‌ ಕಂಪೆನಿಯ ಸ್ಥಾಪನೆಯಾಗಲಿರುವುದಾಗಿ ಅದಾನಿ ಯುಪಿಸಿಎಲ್‌ ಕಂಪೆನಿಯ ಜಂಟಿ ಅಧ್ಯಕ್ಷ ಕಿಶೋರ್‌ ಆಳ್ವ “ಉದಯವಾಣಿ’ಗೆ ತಿಳಿಸಿದ್ದಾರೆ. 

Advertisement

ಅದಾನಿ ಯುಪಿಸಿಎಲ್‌ ಯೋಜನೆ ವಿಸ್ತರಣೆ ಸಂದರ್ಭದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು. ಯೋಜನಾ ಪ್ರದೇಶದೊಳಗಿನ ಸುಮಾರು 10 ಎಕ್ರೆ ಪ್ರದೇಶದಲ್ಲಿ ತಲೆ ಎತ್ತಲಿರುವ ಈ ಸಿಮೆಂಟ್‌ ಕಂಪೆನಿಯ ಮೂಲಕ ಯುಪಿಸಿಎಲ್‌ ವಿದ್ಯುತ್‌ ಸ್ಥಾವರದಲ್ಲಿನ ಶೇ. ನೂರಕ್ಕೆ ನೂರರಷ್ಟು ಹಾರುಬೂದಿಯನ್ನು ಸಿಮೆಂಟ್‌ ಉತ್ಪಾದನೆಗಾಗಿ ಬಳಸಿಕೊಳ್ಳಲಾಗುವುದು. ಈ ಯೋಜನೆಯಿಂದಾಗಿ ಸುಮಾರು 500ರಷ್ಟು ಸ್ಥಳೀಯ ಯುವಕ ಯುವತಿ ಯರಿಗೆ ಉದ್ಯೋಗಾವಕಾಶ ಸೃಷ್ಟಿಯಾಗಲಿದ್ದು ವಾರ್ಷಿಕ 2 ಮಿಲಿಯ ಟನ್‌ ಸಿಮೆಂಟ್‌ ಉತ್ಪಾದನೆಯ ಸಾಮರ್ಥ್ಯವನ್ನು ಹೊಂದಲಾಗಿದೆ ಎಂದೂ ಕಿಶೋರ್‌ ಆಳ್ವ ವಿವರಿಸಿದ್ದಾರೆ.

ಸುಲಭವಾಗಿ ಲಭ್ಯವಾಗುವ ಸಗಟು ಪದಾರ್ಥ
ಈ ಯೋಜನೆಯ ಸಗಟು ಪದಾರ್ಥಗಳಾದ “ಕ್ಲಿಂಕರ್’ ಈಗಾಗಲೇ ಸ್ಥಾವರದೊಳಕ್ಕಿರುವ ರೈಲು ಮಾರ್ಗವಾಗಿ ಸ್ಥಾವರಕ್ಕೆ ಬರಲಿದ್ದು “ಜಿಪ್ಸಮ್‌’ ಯುಪಿಸಿಎಲ್‌ನಲ್ಲಿ ಅಳವಡಿಸಲಾಗಿರುವ ಎಫ್‌ಜಿಡಿಯಿಂದಲೇ ಲಭ್ಯವಾಗಲಿದೆ ಎಂದೂ ಕಿಶೋರ್‌ ಆಳ್ವ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಯುಪಿಸಿಎಲ್‌ ಎಜಿಎಂ ಗಿರೀಶ್‌ನಾವಡ, ಹಿರಿಯ ಪ್ರಬಂಧಕ ರವಿ ಜೀರೆ, ತೋನ್ಸೆ ಜಯಕೃಷ್ಣ ಶೆಟ್ಟಿ, ಪೈಯ್ನಾರು ಶಿವರಾಮ ಶೆಟ್ಟಿ, ಕೊಳಚೂರುಗುತ್ತು ಜಗನ್ನಾಥ ಶೆಟ್ಟಿ, ತೋನ್ಸೆ ದಿವಾಕರ ಶೆಟ್ಟಿ, ತೋನ್ಸೆ ಮನಕರ್‌ ಶೆಟ್ಟಿ ಉಪಸ್ಥಿತರಿದ್ದರು.

ಸದ್ಯಕ್ಕೆ ಯುಪಿಸಿಎಲ್‌ನ ಪ್ರತೀ ಒಂದು ಘಟಕದಿಂದ ಪ್ರತ್ಯೇಕವಾಗಿ 14 ಮಿಲಿಯ ಯುನಿಟ್‌ (ಎರಡೂ ಘಟಕದಿಂದ 28 ಮಿಲಿಯ ಯುನಿಟ್‌) ವಿದ್ಯುತ್‌ ಪ್ರತಿದಿನ ಉತ್ಪಾದನೆಯಾಗುತ್ತಿದ್ದು 3 ಲಕ್ಷ ಟನ್‌ ಹಾರುಬೂದಿ ವಾರ್ಷಿಕ ಉತ್ಪಾದನೆಯಾಗುತ್ತಿದೆ. ಇನ್ನೆರಡು 800 ಮೆ.ವಾ.ಗಳ ವಿದ್ಯುತ್‌ ಘಟಕಗಳೊಂದಿಗೆ ಯೋಜನೆ ವಿಸ್ತರಣೆಯಾದ ಬಳಿಕ ವಾರ್ಷಿಕ 1.2 ಮಿಲಿಯ ಟನ್‌ ಹಾರುಬೂದಿ ಉತ್ಪಾದನೆಯಾಗಲಿದ್ದು ಶೇ. 20 ಹಾರುಬೂದಿಯನ್ನು ಹೊರಗಿನವರಿಗೂ ಮಿಕ್ಕುಳಿದ ಶೇ. 80ನ್ನು ಪೂರ್ತಿಯಾಗಿ ಅದಾನಿ ಸಿಮೆಂಟ್‌ ಸ್ಥಾವರಕ್ಕೆ ಬಳಸಿಕೊಳ್ಳಲಾಗುವುದೆಂದು ಅದಾನಿ ಯುಪಿಸಿಎಲ್‌ ವರದಿ ತಿಳಿಸಿದೆ. 

Advertisement

– ಆರಾಮ

Advertisement

Udayavani is now on Telegram. Click here to join our channel and stay updated with the latest news.

Next