ಹುಬ್ಬಳ್ಳಿ: ಉದ್ಯಮಿ ಗೌತಮ್ ಅದಾನಿ ಅವರು ರಾಜ್ಯದಲ್ಲಿ ಸುಮಾರು 50 ಸಾವಿರ ಕೋಟಿ ರೂ.ಗಳ ಬಂಡವಾಳ ಹೂಡಿಕೆಗೆ ಮುಂದಾಗಿದ್ದು, ಉದ್ಯಮ ವಲಯದಲ್ಲಿ ಇದು ದೊಡ್ಡ ನೆಗೆತಕ್ಕೆ ಕಾರಣವಾಗಲಿದೆ.
ಕರ್ನಾಟಕ ಪ್ರಸ್ತುತ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿರುವುದು ಹೆಮ್ಮೆಯ ಸಂಗತಿ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ಟೈ ಹುಬ್ಬಳ್ಳಿ ಆಯೋಜಿಸಿದ್ದ ಟೈಕಾನ್ ಹಾಗೂ ಮಹಿಳಾ ಉದ್ಯಮ ಶೃಂಗಸಭೆ ಉದ್ಘಾಟನ ಸಮಾರಂಭದಲ್ಲಿ ಮಾತನಾಡಿದ ಅವರು, ಗೌತಮ್ ಅದಾನಿ ಅವರು ಸುಮಾರು ಐದು ಸಾವಿರ ಕೋಟಿ ರೂ.ಗಳ ಹೂಡಿಕೆಗೆ ಮುಂದಾಗಿದ್ದರು.
ಆದರೆ ರಾಜ್ಯದಲ್ಲಿರುವ ಉದ್ಯಮಸ್ನೇಹಿ ವಾತಾವರಣ, ಸೌಲಭ್ಯಗಳ ಕುರಿತು ಅವರಿಗೆ ಮನವರಿಕೆ ಮಾಡಿದ್ದರಿಂದ ಇದೀಗ ಸುಮಾರು 50 ಸಾವಿರ ಕೋಟಿ ರೂ. ಬೆಂಗಳೂರು-ಮಂಗಳೂರು ಕೈಗಾರಿಕಾ ಕಾರಿಡಾರ್ ವ್ಯಾಪ್ತಿಯಲ್ಲಿ ಹೂಡಿಕೆಗೆ ಮುಂದಾಗಿದ್ದಾರೆ.
“ಉದ್ಯಮಿಯಾಗು ಉದ್ಯೋಗ ನೀಡು’ ಯೋಜನೆಗೆ ಮುಂದಿನ ತಿಂಗಳಲ್ಲಿ ಬೆಳಗಾವಿಯಿಂದ ಚಾಲನೆ ನೀಡಲಾಗುವುದು. ಈ ಕುರಿತು ಶೀಘ್ರದಲ್ಲೇ ದಿನಾಂಕ ಘೋಷಿಸಲಾಗುವುದು ಎಂದರು.