Advertisement
ಕೃಷ್ಣ ಮಠದಿಂದ 1 ಕಿ.ಮೀ ದೂರವಿರುವ ಜೋಡುಕಟ್ಟೆ ಬಳಿಯಿಂದ ಶನಿವಾರ ಬೆಳಗಿನ ಜಾವ 1.55ಕ್ಕೆ ಮೆರವಣಿಗೆ ಆರಂಭವಾಯಿತು. ಸಂಪ್ರದಾಯದಂತೆ ಉಡುಪಿಯಿಂದ 20 ಕಿ.ಮೀ ದೂರದ ದಂಡತೀರ್ಥದಲ್ಲಿ ಅದಮಾರು ಪರ್ಯಾಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಪವಿತ್ರ ತೀರ್ಥ ಸ್ನಾನ ಪೂರೈಸಿ ಜೋಡುಕಟ್ಟೆಗೆ ಆಗಮಿಸಿದರು.
ಶ್ರೀಪಾದರನ್ನು ಅಷ್ಟಮಠದ ಇತರೆ ಮಠಾಧೀಶರು ಬರಮಾಡಿಕೊಂಡರು. ಜೋಡುಕಟ್ಟೆ ಮಂಟಪದಲ್ಲಿ ಪಟ್ಟದ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಪರ್ಯಾಯ ಮೆರವಣಿಗೆ ಆರಂಭಗೊಂಡಿತು. ಕೆ.ಎಂ. ಮಾರ್ಗ, ತಾ. ಕಚೇರಿ ರಸ್ತೆಯ ಮೂಲಕ ರಥಬೀದಿಗೆ ಸಾಗಿತು. ವಿವಿಧ ಸ್ತಬ್ಧಚಿತ್ರಗಳು, ಕಲಾ ತಂಡಗಳು ಮೆರವಣಿಗೆಯಲ್ಲಿ ಒಳಗೊಂಡಿದ್ದು ಸಾಂಪ್ರ ದಾಯಿಕತೆಗೆ ಆದ್ಯತೆ ನೀಡಲಾಗಿತ್ತು. ವೇದಘೋಷ, ಲಕ್ಷ್ಮೀಶೋಭಾನೆ, ಕಾಳಿಯಮರ್ದನ ಶ್ರೀಕೃಷ್ಣ ದೇವರು, ಶ್ರೀ ರಾಮ ಮಂದಿರದಲ್ಲಿ ಪೂಜಿಸುತ್ತಿರುವ ಪೇಜಾವರ ಶ್ರೀಗಳು, ಬೆಳ್ಳಿರಥದಲ್ಲಿ ಶ್ರೀ ಕೃಷ್ಣ, ಆಂಜನೇಯ, ತುಳಸಿ ಅರ್ಚನೆಯ ಬೆಳ್ಳಿ ರಥ, ನವದುರ್ಗೆಯರು, ವೃಂದಾವನ ಆಕೃತಿಯ ವಾಹನದಲ್ಲಿ ಮಹಿಳೆಯರ ತಂಡದ ಭಜನೆ, ಕುಂಜಾರುಬೆಟ್ಟ, ಮಧ್ವಾಚಾರ್ಯರು, ದೇಸೀಯ ಗೋವಿನ ತಳಿ, ಹಳ್ಳಿ ಜೀವನ, ತುಳುನಾಡ ಸಂಸ್ಕೃತಿ, ಪ್ಲಾಸ್ಟಿಕ್ ಭೂತ, ಇಸ್ರೋ ವೀಕ್ಷಣೆ, ನಾಡ ದೋಣಿ ಇವು ಟ್ಯಾಬ್ಲೋಗಳಲ್ಲಿ ಪ್ರತಿಬಿಂಬಿಸಿದವು. ನಗರಸಭೆಯ ಸ್ವತ್ಛತೆಯ ಟ್ಯಾಬ್ಲೋ, ಕೃಷಿ ಇಲಾಖೆಯ ಕೃಷಿಯ ಸೊಬಗಿನ ಟ್ಯಾಬ್ಲೋ, ಪ್ರವಾಸೋದ್ಯಮ ಇಲಾಖೆಯ ತುಳುನಾಡ ಸೃಷ್ಟಿ, ಜಿಲ್ಲಾ ಪಂಚಾಯತ್ ವತಿಯಿಂದ ವಿಶೇಷ ಭಜನೆ ತಂಡಗಳು ರಂಗು ತುಂಬಿದವು.
Related Articles
Advertisement
ತಟ್ಟಿರಾಯ, ಒಂಟೆ, ಕುದುರೆ, ಮುಖವರ್ಣಿಕೆಗಳು, ವಿದ್ಯಾರ್ಥಿಗಳ ಕೃಷ್ಣ ಗೋಪಿಕೆಯರ ನೃತ್ಯ, ಸ್ಥಳೀಯ ಶಿಕ್ಷಣ ಸಂಸ್ಥೆಗಳ ಭಾರತ ಸೇವಾದಳ ರೇಂಜರ್ ಆ್ಯಂಡ್ ರೋವರ್ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸುವಿಕೆ ಮೆರುಗು ಹೆಚ್ಚಿಸಿದವು.
ಬೆಂಕಿ ಜ್ವಾಲೆಯ ಪ್ರದರ್ಶನಪುತ್ತೂರು ಅಂಬಾಗಿಲು ಜನತಾ ವ್ಯಾಯಾಮ ಶಾಲೆಯ ತಂಡದವರು ಜೋಡುಕಟ್ಟೆ ಬಳಿ ವಿವಿಧ ಕಸರತ್ತುಗಳನ್ನು ನಡೆಸಿ ಮೆರವಣಿಗೆಯ ಮುಂಭಾಗದಲ್ಲಿ ಬಂದರು. ಮಾನವ ನಿರ್ಮಿತ ಗೋಪುರ ನಿರ್ಮಿಸಿ ಬೆಂಕಿ ಜ್ವಾಲೆಯ ಅನೇಕ ಪ್ರದರ್ಶನಗಳನ್ನು ನೀಡಿದರು. ಕಲಾತಂಡಗಳ ಪ್ರದರ್ಶನ
ಮೈಸೂರು ಜಿಲ್ಲೆ ಗೋವಿಂದ ನಾಯ್ಕ ತಂಡದ ಡೊಳ್ಳು ಕುಣಿತ, ಮಂಡ್ಯ ಪಾಂಡವಪುರ ಡಿ.ವಿ. ರುದ್ರಸ್ವಾಮಿ ತಂಡದ ವೀರಗಾಸೆ, ರಾಮನಗರ ಜಿಲ್ಲೆ ಹನುಮಂತನಾಯ್ಕ ತಂಡದ ಪೂಜಾ ಕುಣಿತ, ದಾವಣಗೆರೆ ಜಿಲ್ಲೆ ಎಚ್. ಆರ್. ದೇವಣ್ಣ ತಂಡದ ಕರಡಿ ಮಜಲು, ಚಿತ್ರದುರ್ಗ ಜಿಲ್ಲೆಯ ಮಹಾಂತೇಶ್ ತಂಡದ ಗಾರುಡಿಗೊಂಬೆ ಕುಣಿತ, ದಾವಣೆಗೆರೆ ಜಿಲ್ಲೆ ವಸಂತಕುಮಾರ್ ತಂಡದ ಪುರವಂತಿಕೆ, ಧಾರವಾಡ ಜಿಲ್ಲೆ ಶಂಕರಪ್ಪ ಮಾದರ ತಂಡದ ಪುರವಂತಿಕೆ, ಧಾರವಾಡ ಜಿಲ್ಲೆ ಶಂಕರಪ್ಪ ಮಾದರ ತಂಡದ ಜಗ್ಗಳಿಕೆ ವಾದ್ಯ, ಹಾಸನ ಜಿಲ್ಲೆ ಕುಮಾರಯ್ಯ ತಂಡದ ಚಿಟ್ಟಿಮೇಳ, ಚಿತ್ರದುರ್ಗ ಜಿಲ್ಲೆ ಮೈಲಾರಪ್ಪ ತಂಡದ ಗೊರವರ ಕುಣಿತ, ತುಮಕೂರು ಜಿಲ್ಲೆ ಕುಮಾರಸ್ವಾಮಿ ತಂಡದ ಸೋಮನ ಕುಣಿತ, ಮೈಸೂರು ಜಿಲ್ಲೆ ವಿಶ್ವನಾಥ್ ತಂಡದ ಕಂಸಾಳೆ, ಉಡುಪಿ ಜಿಲ್ಲೆ ಶಂಕರ್ ದಾಸ್ ಚೆಂಡ್ಕಳ ತಂಡದ ಕಂಗೀಲು ನೃತ್ಯ, ಮಂದಾರ್ತಿ ಮಲ್ಲಿಕಾರ್ಜುನ ಕುಡುಬಿ ಜನಪದ ಗುಮಟೆ ನೃತ್ಯ, ಬ್ರಹ್ಮಾವರ ಬಾರ್ಕೂರು ಗಣೇಶ್ ಕೊರಗ ಮತ್ತು ತಂಡದ ಡೋಲು ವಾದ್ಯ, ಕೊಳಲು ವಾದನ ಮನಸೂರೆಗೊಳಿಸಿದವು.