Advertisement

ಅದಮಾರು ಮಠ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ

11:15 PM Jul 04, 2019 | sudhir |

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಮುಂದಿನ ಜ. 18 ರಂದು ನಡೆಯುವ ಅದಮಾರು ಮಠದ ಪರ್ಯಾಯೋತ್ಸವಕ್ಕೆ ಪೂರ್ವಭಾವಿಯಾದ ಮೂರನೆಯ ಮುಹೂರ್ತ ಕಟ್ಟಿಗೆ ಮುಹೂರ್ತವು ಗುರುವಾರ ಬೆಳಗ್ಗೆ ನಡೆಯಿತು.

Advertisement

ಮೊದಲು ಅದಮಾರು ಮಠದಲ್ಲಿ ವಿದ್ವಾಂಸರು, ವೈದಿಕರು, ಗಣ್ಯರು ನವಗ್ರಹ ಪೂಜೆ, ಪ್ರಾರ್ಥನೆಯನ್ನು ನಡೆಸಿದ ಬಳಿಕ ಮೆರವಣಿಗೆಯಲ್ಲಿ ಶ್ರೀ ಚಂದ್ರೇಶ್ವರ,ಶ್ರೀ ಅನಂತೇಶ್ವರ ದೇವಸ್ಥಾನ, ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಪ್ರಾರ್ಥನೆ ನಡೆಸಿದರು. ಅನಂತರ ಕಟ್ಟಿಗೆಯ ಮೆರವಣಿಗೆ ಅದಮಾರು ಮಠದಿಂದ ಶ್ರೀಕೃಷ್ಣ ಮಠದ ಈಶಾನ್ಯ ಮೂಲೆಯಲ್ಲಿರುವ ಕಟ್ಟಿಗೆ ರಥವಿರುವ ಸ್ಥಳಕ್ಕೆ ತೆರಳಿ 9.27ಕ್ಕೆ ಸಿಂಹ ಲಗ್ನದಲ್ಲಿ ಮುಹೂರ್ತ ನಡೆಸಲಾಯಿತು.

ಸಂಪ್ರದಾಯದಂತೆ ಕಡಿಯಾಳಿ, ಕುಂಜಿಬೆಟ್ಟಿನ ಮುಂಡಾಳ ಸಮಾಜ ದವರು ಕಟ್ಟಿಗೆಯ ಮೆರವಣಿಗೆ ನಡೆಸಿ ದರು. ಮೇಸ್ತ್ರಿ ಸುಂದರ ಶೇರಿಗಾರ್‌ ಮತ್ತು ಮುಂಡಾಳ ಸಮಾಜದ ಶೇಷು ಗುರಿಕಾರ್‌, ಒತ್ತು ಗುರಿಕಾರ್‌ ವಾಸು ಬಿ. ನೇತೃತ್ವದಲ್ಲಿ ಮುಹೂರ್ತ ನಡೆಯಿತು.

ನಗರಸಭೆ ಆಯುಕ್ತ ಆನಂದ ಕಲ್ಲೋಳಿಕರ್‌, ಪುರಸಭೆಯ ಮಾಜಿ ಅಧ್ಯಕ್ಷ ಎಂ. ಸೋಮಶೇಖರ ಭಟ್, ವಿಶ್ವ ಹಿಂದೂ ಪರಿಷತ್‌ನ ಪ್ರೊ| ಎಂ.ಬಿ. ಪುರಾಣಿಕ್‌, ವೈ.ಎನ್‌. ರಾಮಚಂದ್ರ ರಾವ್‌, ಮಠದ ದಿವಾನ ಲಕ್ಷ್ಮೀನಾರಾಯಣ ಮುಚ್ಚಿಂತಾಯ, ವಿದ್ವಾಂಸ ಸಗ್ರಿ ರಾಘವೇಂದ್ರ ಉಪಾಧ್ಯಾಯ, ಮಠದ ಶಿಷ್ಯರಾದ ಗಾಳದ ಕೊಂಕಣಿ ಸಮಾಜದ ಗಾಳದ ಅಭ್ಯುದಯ ಸಂಘದ ಅಧ್ಯಕ್ಷ ನರಸಿಂಹ ನಾಯ್ಕ, ಕೋಶಾಧಿಕಾರಿ ಚಂದ್ರಶೇಖರ್‌ ಬಪ್ಪಾಲ್, ಸದಸ್ಯ ಮಿಥಿಲೇಶ್‌ ಮಣ್ಣಗುಡ್ಡೆ, ಮಾಜಿ ಅಧ್ಯಕ್ಷ ಉಮಾನಾಥ ನಾಯ್ಕ, ಉಳ್ಳಾಲ ಮೊದಲಾದವರು ಉಪಸ್ಥಿತರಿದ್ದರು.

ಸ್ವಾಮೀಜಿಯವರು ಬದರಿಯಾತ್ರೆಯಲ್ಲಿ

Advertisement

ಶ್ರೀ ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ಮತ್ತು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಬದರಿ ಯಾತ್ರೆಯಲ್ಲಿದ್ದಾರೆ. ಬಾಳೆ ಮುಹೂರ್ತ, ಅಕ್ಕಿ ಮುಹೂರ್ತ ವಾದ ಬಳಿಕ ಕಟ್ಟಿಗೆ ಮುಹೂರ್ತ ವಾದಿರಾಜ ಸ್ವಾಮಿಗಳ ಸಂಪ್ರದಾಯ ಅನುಸಾರ ನಡೆದಿದೆ. ಈಗಿರುವ ಕಟ್ಟಿಗೆ ರಥವನ್ನು ಪರ್ಯಾಯ ಪಲಿಮಾರು ಮಠದಿಂದ ಖರೀದಿಸಿ ಅದಕ್ಕೇ ಅಲಂಕಾರ ನಡೆಸಲಾಗುತ್ತದೆ. ಕಟ್ಟಿಗೆ ರಥಕ್ಕೆ ಮಾವು ಮತ್ತು ಬೇವಿನ ಮರ ಹೊರತುಪಡಿಸಿ ಇತರ ಮರಗಳನ್ನು ಬಳಸಲಾಗುತ್ತದೆ. ಈಗಾಗಲೇ ಮಠದ ವತಿಯಿಂದ ಸುಮಾರು 2,000 ಸಸ್ಯಗಳನ್ನು ಮಠದ ಜಾಗ ಮತ್ತು ಆಸಕ್ತ ಸಂಘ ಸಂಸ್ಥೆಗಳ ಆವರಣದಲ್ಲಿ ನೆಡಲಾಗಿದೆ ಎಂದು ಧಾರ್ಮಿಕ ವಿಧಿಗಳನ್ನು ನಡೆಸಿದ ಅದಮಾರು ಮಠದ ಪುರೋಹಿತರಾದ ಶಿಬರೂರು ವಾಸುದೇವ ಆಚಾರ್ಯ ಮತ್ತು ಆನಂದ ಸಮಿತಿಯ ಗೋವಿಂದರಾಜ್‌ ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next