ಮೈಸೂರು: ಜನತಂತ್ರ ವ್ಯವಸ್ಥೆಯಲ್ಲಿ ಬಹುಮತವಿರುವ ಸರಕಾರ ಉರುಳಿ ಹೋಗಬಾರದು. ಆದರೆ, ಈಗಿನ ಸರಕಾರದಲ್ಲಿ ಸಿದ್ದರಾಮಯ್ಯನವರೇ ಪೂರ್ಣ ಅವಧಿಯವರೆಗೆ ಮುಖ್ಯಮಂತ್ರಿಯಾಗಿರುತ್ತಾರೆ ಎನ್ನುವುದು ಯಾವ ಗ್ಯಾರಂಟಿ? ಹೈಕಮಾಂಡ್ ಮಟ್ಟದಲ್ಲಿ ಆಗಲೇ ತೀರ್ಮಾನವಾಗಿದೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಹೇಳಿದರು.
ಖಾಸಗಿ ಹೊಟೇಲ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಬಹುಮತ ಪಡೆಯಲು ಸಿದ್ದರಾಮಯ್ಯನವರಷ್ಟೇ ಪಾತ್ರ ಡಿಕೆಶಿ ಅವರದ್ದೂ ಇದೆ. ಡಿಕೆಶಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಸರಕಾರವನ್ನು ಅಸ್ತಿತ್ವಕ್ಕೆ ತರಲು ಅವರು ಬಂಡವಾಳ ಹೂಡಿಕೆ ಮಾಡಿಲ್ಲವೇ? ಆದ್ದರಿಂದ ಮುಖ್ಯಮಂತ್ರಿ ಮಾಡದಿದ್ದರೆ ಡಿಕೆಶಿ ಸುಮ್ಮನೆ ಬಿಡುತ್ತಾರಾ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯಗೆ ಆಗ ಇಲ್ಲದ ಒಕ್ಕಲಿಗರ ಮೇಲಿನ ಪ್ರೀತಿ ಈಗೇಕೆ: ವಿಶ್ವನಾಥ್ ಪ್ರಶ್ನೆ
ಮೈಸೂರು: ಇಂದು ಒಕ್ಕಲಿಗರ ಪರ ಮಾತನಾಡುವ ಸಿಎಂ ಸಿದ್ದರಾಮಯ್ಯ, 2019ರ ಲೋಕಸಭಾ ಚುನಾವಣೆಯಲ್ಲಿ ಮೈಸೂರಿನಿಂದ ಸ್ಪರ್ಧಿಸಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಯಾಕೆ ಟಿಕೆಟ್ ನೀಡಲಿಲ್ಲ? ಆಗ ಇಲ್ಲದ ಒಕ್ಕಲಿಗರ ಮೇಲಿನ ಪ್ರೀತಿ ಈಗ ಯಾಕೆ ಎಂದು ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಪ್ರಶ್ನಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತ್ಯತೀತ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ, ಇಂದು ಜಾತಿ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ಒಕ್ಕಲಿಗರ ಪರ ಇದ್ದೇವೆ ಎಂದು ತೋರಿಸಿಕೊಳ್ಳುತ್ತಿದ್ದಾರೆ. ಆದರೆ 2019ರಲ್ಲಿ ಸಮ್ಮಿಶ್ರ ಸರಕಾರವಿದ್ದಾಗ ದೇವೇಗೌಡರು ಮೈಸೂರಿನಿಂದ ಟಿಕೆಟ್ ಕೇಳಿದ್ದರು. ಟಿಕೆಟ್ ಕೊಟ್ಟಿದ್ದರೆ ಗೆಲ್ಲುತ್ತಿದ್ದರು. ಆದರೆ ಸಿದ್ದರಾಮಯ್ಯ ಅವಕಾಶ ನೀಡಲಿಲ್ಲ. ಪರಿಣಾಮ ದೇವೇಗೌಡರು ತುಮಕೂರಿನಲ್ಲಿ ಸ್ಪರ್ಧಿಸಿ ಸೋತರು. ಅವರ ಸೋಲಿಗೆ ಕಾಂಗ್ರೆಸ್ ನಾಯಕರು ಕಾರಣ ಎಂದರು.