Advertisement

Rukmini Vasanth: ‘ಬಘೀರ’ನ ಸ್ನೇಹದರಸಿ ನಾನು…

01:35 PM Oct 30, 2024 | Team Udayavani |

ನಟಿ ರುಕ್ಮಿಣಿ ವಸಂತ, ಕನ್ನಡ ಸಿನಿಮಾಗಳಲ್ಲಿ ಈವರೆಗೆ ನಟಿಸಿದ್ದು ಬೆರಳೆಣಿಕೆಯ ಸಿನಿಮಾಗಳಲ್ಲಾದರೂ, ಪ್ರಬುದ್ಧ ಅಭಿನಯಕ್ಕೆ ಗುರುತಿಸಿಕೊಂಡವರು. ಶ್ರೀಮುರುಳಿ ಅವರ ಬಹು ನಿರೀಕ್ಷಿತ “ಬಘೀರ’ ಸಿನಿಮಾದಲ್ಲಿ ನಾಯಕಿಯಾಗಿರುವ ನಟಿ ರುಕ್ಮಿಣಿ, ಚಿತ್ರ ಹಾಗೂ ಪಾತ್ರದ ಕುರಿತು ಮಾತನಾಡಿದ್ದಾರೆ.

Advertisement

” ಬಘೀರ ಚಿತ್ರದಲ್ಲಿ ನಿಮ್ಮ ಪಾತ್ರವೇನು?

ಸಿನಿಮಾದಲ್ಲಿ ನನ್ನ ಪಾತ್ರದ ಹೆಸರು ಸ್ನೇಹಾ, ವೃತ್ತಿಯಿಂದ ವೈದ್ಯೆ. ಸಿನಿಮಾದ ಒಂದೆರಡು ಹಾಡು, 5-6 ದೃಶ್ಯಗಳಲ್ಲಿ ಬಂದು ಹೋಗುವ ಪಾತ್ರ ನನ್ನದಲ್ಲ. ನನ್ನ ಪಾತ್ರಕ್ಕೆ ಡಾ. ಸೂರಿ ಅವರು ಗತ್ತು, ತೂಕ ಕೊಟ್ಟಿದ್ದಾರೆ. ಕಥೆ ಸಾಗುವಲ್ಲಿ ನನ್ನ ಪಾತ್ರವೂ ಮುಖ್ಯ. ಪಾತ್ರಕ್ಕೆ ಮಾನಸಿಕ ಸಿದ್ಧತೆ ಮಾತ್ರ ಅವಶ್ಯಕತೆಯಿತ್ತು. ಇದು ನನ್ನ ಬೇರೆ ರೀತಿಯ ಪ್ರಯತ್ನ ಹಾಗಾಗಿ ಸಣ್ಣ ಅಂಜಿಕೆ ಕೂಡ ಇದೆ.

ಶ್ರೀಮುರುಳಿ ಜೊತೆ ಕೆಲಸ ಮಾಡಿದ ಅನುಭವವೇನು?

ಶ್ರೀಮುರುಳಿ ಅವರು ಶ್ರಮಜೀವಿ. ಸದಾ ಪಾಸಿಟಿವ್‌ ಆಗಿ ಇರುತ್ತಾರೆ. ಡಯಟ್‌, ವರ್ಕೌಟ್‌ ವಿಷಯದಲ್ಲಿ ಅವರು ಬಹಳ ಕಠಿಣ. ಇದೇ ನನಗೆ ಒಂದು ಪ್ರೇರಣೆಯ ಅಂಶ. ಈ ಸಿನಿಮಾ ಮೂಲಕ ಪ್ರಕಾಶ್‌ ರೈ, ಸುಧಾರಾಣಿ, ಅಚ್ಯುತ್‌, ರಂಗಾಯಣ ರಘು ಅವರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ಅವರಿಂದ ಹೊಸ ವಿಷಯಗಳನ್ನು ಕಲಿತೆ.

Advertisement

ಹೊಂಬಾಳೆ ಸಂಸ್ಥೆ ಸಿನಿಮಾ ಎಂದಾಗ ನಿಮ್ಮ ಪ್ರತಿಕ್ರಿಯೆ ಏನಿತ್ತು?

ಹೊಂಬಾಳೆ ಸಂಸ್ಥೆಯ ಜೊತೆ ಇದು ನನ್ನ ಮೊದಲ ಪ್ರಾಜೆಕ್ಟ್. ಕಥೆ ಬಗ್ಗೆ ಯೋಚನೆ ಮಾಡುತ್ತಿರುವಾಗ ಹೊಂಬಾಳೆ ಸಂಸ್ಥೆಯ ನಿರ್ಮಾಣ ಎಂದು ತಿಳಿದು ಸಂತಸವಾಯಿತು. ಇಲ್ಲಿ ಕೆಲಸ ಮಾಡುವುದು ಹೆಮ್ಮೆಯ ವಿಷಯ. ಕಲಾವಿದರಿಗೆ ಗೌರವ, ಅನುಕೂಲ ಒದಗಿಸುವ ಸಂಸ್ಥೆಯಿದು.

ಬಘೀರ ಸಿನಿಮಾದಿಂದ ನಿಮ್ಮ ನಿರೀಕ್ಷೆಯೇನು?

ಯಾವುದೇ ಸಿನಿಮಾ ಆಗಲಿ ನಾನು ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳುವುದಿಲ್ಲ. ಬಘೀರ ಸಿನಿಮಾ ಜನರಿಗೆ ಇಷ್ಟವಾಗಬಹುದು. ಏಕೆಂದರೆ, ಇದು ಹೊಸ ರೀತಿಯ ಪ್ರಯತ್ನ. ನನ್ನ ಪ್ರಕಾರ, ನಾವು ಒಳ್ಳೆಯ ಕಥೆ ಜನರಿಗೆ ಹೇಳುತ್ತೇವೆ. ಇದರ ಹೊರತಾಗಿ ನಾವು ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳಬಾರದು. ಸಿನಿಮಾದ ಯಶಸ್ಸು ನಮಗೆ ಅಚ್ಚರಿಯಾಗಬೇಕು.

ಟ್ರೇಲರ್‌ಗೆ ಯಾವ ರೀತಿ ಪ್ರತಿಕ್ರಿಯೆ ಸಿಕ್ಕಿದೆ?

ಟ್ರೇಲರ್‌ನ ಕೆಲ ತುಣುಕುಗಳು ಪ್ರೇಕ್ಷಕರನ್ನು ಆಕರ್ಷಿಸಿವೆ. “ನಾನು ಇಷ್ಟಪಟ್ಟಿದ್ದ ವೇದಾಂತ್‌ ನೀನಲ್ಲ’ ಎಂಬ ಸಂಭಾಷಣೆ, ಏನಿದರ ಕಥೆ, ಅವರ ಸಂಬಂಧ ಹೇಗೆ ಬದಲಾಗುತ್ತದೆ… ಹೀಗೆ ನನ್ನ ಪಾತ್ರದ ಬಗ್ಗೆ ಜನರಲ್ಲಿ ಕುತೂಹಲ ಮೂಡಿದೆ. ಯಾವ ದೃಷ್ಟಿಯಿಂದ ಬಘೀರ ಭಿನ್ನವಾಗಿದೆ? ಪ್ರಶಾಂತ್‌ ನೀಲ್‌ ಅವರ ಕಥೆ, ಡಾ. ಸೂರಿ ಅವರ ಚಿತ್ರಕಥೆ, ನಿರ್ದೇಶನ, ಹೊಂಬಾಳೆ ಸಂಸ್ಥೆಯ ಗುಣಮಟ್ಟ, ಶ್ರೀಮುರುಳಿ ಅವರ ಹೊಸ ಅವತಾರ, ತಾಂತ್ರಿಕ ಶ್ರೀಮಂತಿಕೆ, ಆ್ಯಕ್ಷನ್‌ ಥ್ರಿಲ್ಲರ್‌ ಹಾಗೂ ಸೂಪರ್‌ ಹೀರೋ ಪರಿಕಲ್ಪನೆ ಈ ಎಲ್ಲ ಕಾರಣಗಳಿಂದ ” ಬಘೀರ” ವಿಭಿನ್ನವಾಗಿರಲಿದೆ.

ನಿತೀಶ ಡಂಬಳ

Advertisement

Udayavani is now on Telegram. Click here to join our channel and stay updated with the latest news.

Next