ನವದೆಹಲಿ:ದೀರ್ಘ ಕಾಲದಿಂದ ಕ್ಯಾನ್ಸರ್ ಮಹಾಮಾರಿ ಜತೆ ಸೆಣಸಾಡುತ್ತಿದ್ದ ಬಾಲಿವುಡ್ ನಟಿ, ರೂಪದರ್ಶಿ ದಿವ್ಯಾ ಚೌಕ್ಸಿ (28ವರ್ಷ) ಸೋಮವಾರ ವಿಧಿವಶರಾಗಿದ್ದಾರೆ. ಇಹಲೋಕ ತ್ಯಜಿಸುವ ಮುನ್ನ ದಿನದವರೆಗೂ ನಟಿ ತನ್ನ ಆರೋಗ್ಯ ಸ್ಥಿತಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದರು ಎಂದು ವರದಿ ತಿಳಿಸಿದೆ.
ಅಲ್ಲದೇ ಸಾಯುವ ಹಿಂದಿನ ದಿನ ಕೊನೆಯದಾಗಿ ಇನ್ ಸ್ಟಾಗ್ರಾಂನಲ್ಲಿ ಬರೆದ ಸಾಲುಗಳು…ಹಾಯ್ ಗೆಳೆಯರೇ ನಾನು ಆಸ್ಪತ್ರೆಗೆ ದಾಖಲಾಗಿದ್ದೇನೆ. ನನಗೆ ಮಾತನಾಡಲು ಸಹ ಆಗುತ್ತಿಲ್ಲ. ನನ್ನೊಳಗಿರುವ ಕ್ಯಾನ್ಸರ್ ಮಹಾಮಾರಿ ನನ್ನ ಕೊಲ್ಲುತ್ತಿದೆ. ನನಗೆ ನೋವಿಲ್ಲದ ಸಾವು ಕರುಣಿಸುವಂತೆ ಪ್ರಾರ್ಥಿಸಿ…ಕ್ಷಮಿಸಿ ನನಗೆ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ…ಎಲ್ಲರಿಗೂ ಪ್ರೀತಿಯ ವಂದನೆಗಳು”!
ಇಹಲೋಕ ತ್ಯಜಿಸುವ ಒಂದು ಗಂಟೆ ಮೊದಲು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದ ಸಂದೇಶ ಇದೀಗ ವೈರಲ್ ಆಗಿದೆ…ನಾನು ಅನುಭವಿಸುತ್ತಿರುವ ನೋವನ್ನು ನಿಮ್ಮ ಜತೆ ಹಂಚಿಕೊಳ್ಳಲು ಪದಗಳೇ ಸಾಲುತ್ತಿಲ್ಲ. ಹೆಚ್ಚು ಕಡಿಮೆ ನಾನು ತಿಂಗಳುಗಳಿಂದ ಈ ಪೋಸ್ಟ್ ಗಳಿಂದ ದೂರವೇ ಉಳಿದಿದ್ದೆ. ನಾನೀಗ ಮಾತನಾಡುವ ಸಮಯ ಬಂದಿದೆ..ನಾನು ಮರಣಶಯ್ಯೆಯಲ್ಲಿದ್ದೇನೆ. ಸಾಧ್ಯವಿಲ್ಲದಿದ್ದರೂ ನಾನು ಇದನ್ನು ಎದುರಿಸುತ್ತೇನೆ. ಮುಂದಿನ ಜನ್ಮದಲ್ಲಿ ನೋವಿಲ್ಲದ ಬದುಕು ನನ್ನದಾಗಲಿ. ದಯವಿಟ್ಟು ಯಾವ ಪ್ರಶ್ನೆಗಳನ್ನೂ ಕೇಳಬೇಡಿ. ನೀವೆಲ್ಲ ನನಗೆ ಎಷ್ಟು ಬೇಕಾದವರು ಎಂಬುದು ದೇವರಿಗೆ ತಿಳಿದಿದೆ” ಎಂಬುದಾಗಿ ಬರದಿದ್ದರು.!
ಈ ಪೋಸ್ಟ್ ಹಾಕಿದ್ದ ಮರುದಿನವೇ ದಿವ್ಯಾ ಕೊನೆಯುಸಿರೆಳೆದಿದ್ದಾರೆ. ಈ ಯುವ ನಟಿ ಪಿತ್ತಜನಕಾಂಗ ಕ್ಯಾನ್ಸರ್ ನಿಂದ ಕಳೆದ ಒಂದೂವರೆ ವರ್ಷದಿಂದ ಬಳಲುತ್ತಿದ್ದರು. ನನ್ನ ಸಹೋದರಿ ದಿವ್ಯಾ ಚೌಕ್ಸಿ ಕ್ಯಾನ್ಸರ್ ನಿಂದಾಗಿ ಅತೀ ಕಿರಿಯ ವಯಸ್ಸಿನಲ್ಲಿಯೇ ಸಾವನ್ನಪ್ಪಿದ್ದಾರೆ ಎಂಬ ಆಘಾತಕಾರಿ ವಿಷಯವನ್ನು ತಿಳಿಸುತ್ತಿದ್ದೇನೆ ಎಂದು ಸಂಬಂಧಿ ಸೌಮ್ಯ ಅಮೀಶ್ ವರ್ಮಾ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಟೆಲಿವಿಷನ್ ಇಂಡಸ್ಟ್ರೀಯಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದ ದಿವ್ಯಾ, ಹಲವಾರು ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲ 2016ರಲ್ಲಿ ಬಿಡುಗಡೆಯಾಗಿದ್ದ “ಹೈ ಅಪನಾ ದಿಲ್ ತೋ ಅವಾರಾ” ಸಿನಿಮಾದಲ್ಲಿಯೂ ನಟಿಸಿದ್ದರು.