Advertisement

ಕೆಂಗೇರಿ: ಸಾಹಸ ಸಿಂಹ ಡಾ.ವಿಷ್ಣುವರ್ಧನ್‌ ಅವರ 72ನೇ ಹುಟ್ಟುಹಬ್ಬವನ್ನು ಭಾನುವಾರ ಅವರ ಅಭಿಮಾನಿಗಳು ವಿವಿಧ ಸಾಮಾಜಿಕ ಕಾರ್ಯಗಳ ಮೂಲಕ ಆಚರಿಸಿದರು. ವಿಷ್ಣು ಅವರ 72ನೇ ಜನ್ಮದಿನಾಚರಣೆ ಹಿನ್ನೆಲೆ ಅವರು ಅಭಿನಯದ ವಿಶೇಷ ಸಿನಿಮಾಗಳ ಐವತ್ತು ಕಟೌಟ್‌ಗಳನ್ನು ಅಭಿಮಾನ್‌ ಸ್ಟುಡಿಯೋ ಮುಂದೆ ನಿಲ್ಲಿಸಿದ್ದು ವಿಶೇಷವಾಗಿತ್ತು.

Advertisement

ಯಜಮಾನ, ಸಾಹಸ ಸಿಂಹ, ಕೃಷ್ಣ ನೀ ಬೇಗನೆ ಬಾ, ಜಯಸಿಂಹ, ವೀರಪ್ಪ ನಾಯಕ, ಜನನಾಯಕ, ದಾದ, ಕೃಷ್ಣ ರುಕ್ಮಿಣಿ, ಹೃದಯ ಗೀತೆ,ದೇವ, ಮತ್ತೆ ಹಾಡಿತು ಕೋಗಿಲೆ, ಲಯನ್‌ಜಗಪತಿ ರಾವ್‌, ರಾಜಧೀರಾಜಾ, ರಾಯರು ಬಂದರು ಮಾವನ ಮನೆಗೆ, ಮಹಾಕ್ಷತ್ರಿಯ,ಮುತ್ತಿನ ಹಾರ, ದಣಿ, ಜನನಿ ಜನ್ಮಭೂಮಿ, ಸೂರ್ಯ ವಂಶ, ಸೂರಪ್ಪ, ದಿಗ್ಗಜರು,ಕೋಟಿಗೊಬ್ಬ, ಸಿಂಹಾದ್ರಿಯ ಸಿಂಹ, ರಾಜನರಸಿಂಹ, ಆಪ್ತಮಿತ್ರ, ಸಾಹುಕಾರ, ವರ್ಷ, ಕರ್ನಾಟಕ ಸುಪುತ್ರ, ಹಲೋ ಡ್ಯಾಡಿ, ಅಪ್ಪಾಜಿ, ಸ್ಕೂಲ್‌ ಮಾಸ್ಟರ್‌, ಆಪ್ತರಕ್ಷಕ, ಚಿನ್ನದಂತ ಮಗ, ವಿಷ್ಣುಸೇನಾ, ನಾಗರಹಾವು, ಗಂಧದ ಗುಡಿ, ಶುಭ ಮಿಲನ ಚಿತ್ರಗಳ ಕಟೌಟ್‌ಗಳು ಅಭಿಮಾನ್‌ ಸ್ಟುಡಿಯೋದ ಮುಂದೆ ರಾರಾಜಿಸಿವೆ.

ಈ ಮೂಲಕ ವಿಷ್ಣುದಾದಾನ ಫ್ಯಾನ್ಸ್‌ ಹೊಸ ದಾಖಲೆ ಬರೆದಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಒಂದೇ ಸ್ಥಳದಲ್ಲಿ ಈ ರೀತಿ ಐವತ್ತು ಕಟೌಟ್‌ ನಿಲ್ಲಿಸಿದ್ದು ಇದೇ ಮೊದಲ ಬಾರಿಗೆ ಅನ್ನೋದು ವಿಶೇಷ.

ಕಟೌಟ್‌ಗಳನ್ನು ಕಂಡು ಪುಳಕಿತರಾದ ಅಭಿಮಾನಿಗಳು ಕುಟುಂಬ ಸಮೇತರಾಗಿ, ಸ್ನೇಹಿತರೊಂದಿಗೆ ಬಂದು ತಮಗಿಷ್ಟದ ವಿಷ್ಣು ಭಾವಚಿತ್ರದ ಎದುರು ಸೆಲ್ಫೀ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ವಿವಿಧ ಭಾಗಗಳಿಂದ ಬಂದಿದ್ದ ಅಭಿಮಾನಿಗಳು ಬೆಳಗ್ಗಿನಿಂದಲೇ ಸರತಿ ಸಾಲಿನಲ್ಲಿ ನಿಂತು ವಿಷ್ಣು ಸಮಾಧಿ ದರ್ಶನ ಪಡೆದು ಪುನೀತರಾದರು.

ಹುಟ್ಟುಹಬ್ಬಕ್ಕಾಗಿಯೇ ಅಭಿಮಾನಿಗಳು ಸ್ಟುಡಿಯೋ ಬಳಿ ರಕ್ತದಾನ, ಅನ್ನದಾನ, ನೇತ್ರದಾನ ಸೇರಿದಂತೆ ಹಲವು ಸಾಮಾಜಿಕ ಕೆಲಸಗಳನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆಯಿಂದಲೇ ಅಭಿಮಾನ ಸ್ಟುಡಿಯೋಗೆ ಆಗಮಿಸಿರುವ ಅಭಿಮಾನಿಗಳು ನೆಚ್ಚಿನ ನಟನಿಗೆ ಪೂಜೆ ಸಲ್ಲಿಸಿದ್ದಾರೆ. ರಾಜ್ಯಾದ್ಯಂತ ಸಾವಿರಾರು ಅಭಿಮಾನಿಗಳು ಸಮಾಧಿ ಬಳಿ ಜಮಾಯಿಸಿದ್ದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ.

Advertisement

ಜನಜಂಗುಳಿ :

ಸುಮಾರು 40 ಸಾವಿರಕ್ಕೂ ಹೆಚ್ಚು ಮಂದಿ ಸ್ಟುಡಿಯೋಗೆ ಆಗಮಿಸಿದ ಹಿನ್ನೆಲೆಯಲ್ಲಿ ಜೆಎಸ್‌ ಎಸ್‌ ಕಾಲೇಜು ಆವರಣದಿಂದ ಬಿಜಿಎಸ್‌ಕಾಲೇಜು ಆವರಣದವರೆಗೆ ಬೆಳಗ್ಗಿನಿಂದ ಸಂಜೆಯವರೆಗೆ ಟ್ರಾμಕ್‌ ಜಾಮ್‌ ಉಂಟಾಗಿತ್ತು. ರಸ್ತೆಯುದ್ದಕ್ಕೂ ಬಾನೆತ್ತರಕ್ಕೆ ಚಾಚಿದಭಾವಚಿತ್ರಗಳು, ನಿಲ್ಲದ ಜಯಘೋಷ, ವಯಸ್ಸಿನ ಅಂತರವಿಲ್ಲದೆ ಸರತಿ ಸಾಲಿನಲ್ಲಿ ನಿಂತ ಅಭಿಮಾನಿಬಳಗ, ಕಿಲೋಮೀಟರ್‌ ವರೆಗೂ ವಾಹನಗಳು ಸಾಲುಗಟ್ಟಿದ್ದ ದೃಶ್ಯಗಳು ಕಂಡುಬಂದವು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next