ಹೊಸದಿಲ್ಲಿ : ಲೋಕಸಭೆಗೆ ಹೊಸದಾಗಿ ಚುನಾಯಿತರಾಗಿರುವ ಬಿಜೆಪಿ ಸಂಸದ ಸನ್ನಿ ದೇವಲ್ ಅವರು ತನ್ನ ಗುರುದಾಸ್‌ಪುರ ಸಂಸದೀಯ ಕ್ಷೇತ್ರದ ಸಕಲ ಸಂಗತಿ, ಸಮಸ್ಯೆಗಳನ್ನು ನಿಭಾಯಿಸಲು ತನ್ನ ಪ್ರತಿನಿಧಿಯೊಬ್ಬರನ್ನು ನೇಮಿಸಿರುವುದು ವ್ಯಾಪಕ ವಿವಾದ, ಟೀಕೆ, ಖಂಡನೆಗೆ ಅವಕಾಶ ಮಾಡಿಕೊಟ್ಟಿದೆ.
ಚಿತ್ರನಟನಾಗಿದ್ದು ರಾಜಕಾರಣಿಯಾಗಿ ಪರಿವರ್ತಿತರಾಗಿರುವ ಸನ್ನಿ ದೇವಲ್ ತಮ್ಮ ಅಧಿಕೃತ ಲೆಟರ್ ಹೆಡ್ ನಲ್ಲಿ ಕಳೆದ ಜೂನ್ 26ರಂದು ಬರೆದಿರುವ ಪತ್ರದಲ್ಲಿ ಹೀಗೆ ಹೇಳಿದ್ದಾರೆ :
“ನನ್ನ ಗುರುದಾಸ್‌ಪುರ ಸಂಸದೀಯ ಕ್ಷೇತ್ರದ ಸಕಲ ಸಭೆಗಳಲ್ಲಿ ನನ್ನ ಪರವಾಗಿ ಭಾಗವಹಿಸಲು, ಮತ್ತು ಕ್ಷೇತ್ರದ ಯಾವತ್ತೂ ಸಂಗತಿಗಳು ಮತ್ತು ಸಮಸ್ಯೆಗಳನ್ನು ನಿಭಾಯಿಸಿ ಕೆಲಸ ಕಾರ್ಯ ಕೈಗೊಳ್ಳಲು, ನಾನು ಈ ಮೂಲಕ ಪಂಜಾಬ್ ನ ಮೊಹಾಲಿ ಜಿಲ್ಲೆಯ ಪಲಹೇರಿ ಗ್ರಾಮದ ನಿವಾಸಿ, ಸುಪೀಂದರ್ ಸಿಂಗ್ ಅವರ ಪುತ್ರ ಗುರುಪ್ರೀತ್ ಸಿಂಗ್ ಪಲಹೇರಿ ಅವರನ್ನು ನನ್ನ ಪ್ರತಿನಿಧಿಯಾಗಿ, ನೇಮಿಸಿದ್ದೇನೆ’.
ಸನ್ನಿ ದೇವಲ್ ಅವರ ಈ ಪ್ರತಿನಿಧಿ ನೇಮಕಾತಿ ಪತ್ರ ಬಹಿರಂಗವಾಗುತ್ತಲೇ ಕಾಂಗ್ರೆಸ್ ಪಕ್ಷ ಅವರನ್ನು ಕಟವಾಗಿ ಟೀಕಿಸಿದೆ.
‘ದೇವಲ್ ಅವರನ್ನು ಮತದಾರರು ಆಯ್ಕೆ ಮಾಡಿರುವುದು ಕೇವಲ ಅವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳುವುದಕ್ಕಾಗಿ ಎಂಬುದೀಗ ಸಾಬೀತಾಗಿದೆ. ಮಾರ್ಕೆಟಿಂಗ್ ತತ್ವ ಪ್ರಕಾರ ಗ್ರಾಹಕ ಯಾವತ್ತೂ ಸರಿ; ಅಂತೆಯೇ ಪ್ರಜಾಸತ್ತೆಯಲ್ಲಿ ಮತದಾರನೇ ಸರಿ; ಇದನ್ನು ಈಗ ಎಲ್ಲರೂ ಒಪ್ಪಬೇಕಾಗುತ್ತದೆ. ಮತದಾರರು ಸನ್ನಿ ದೇವಲ್ ಅವರಿಂದ, ಸೆಲ್ಫಿ ಬಿಟ್ಟರೆ ಬೇರೇನನ್ನೂ ಬಯಸಿರಲಿಲ್ಲ ಎಂಬುದೀಗ ಸ್ಪಷ್ಟವಾಗಿದೆ’ ಎಂದು ಕಾಂಗ್ರೆಸ್ ನಾಯಕ ಸುನೀಲ್ ಜಾಖಡ್ ಹೇಳಿದ್ದಾರೆ.