ಮುಂಬೈ: ಬಾಲಿವುಡ್ ನಟಿ ಜಿಯಾ ಖಾನ್ ನೇಣಿಗೆ ಶರಣಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಯಾ ಬಾಯ್ ಫ್ರೆಂಡ್, ನಟ ಸೂರಜ್ ಪಾಂಚೋಲಿಯನ್ನು ಮುಂಬೈನ ಸಿಬಿಐ ವಿಶೇಷ ಕೋರ್ಟ್ ಶುಕ್ರವಾರ (ಎ.28) ಖುಲಾಸೆಗೊಳಿಸಿದೆ.
ಇದನ್ನೂ ಓದಿ:Election 2023: ಪ್ರಧಾನಿ ಮೋದಿ ವಿಷದ ಹಾವಾದರೆ, ಸೋನಿಯಾ ಗಾಂಧಿ ವಿಷಕನ್ಯೆಯೇ? ಯತ್ನಾಳ್
2013ರ ಜೂನ್ 3ರಂದು ಮುಂಬೈನ ಜುಹೂವಿನಲ್ಲಿರುವ ಮನೆಯಲ್ಲಿ ಜಿಯಾ ಖಾನ್(25ವರ್ಷ) ನೇಣಿಗೆ ಶರಣಾಗಿದ್ದರು. ಘಟನೆ ಸಂದರ್ಭದಲಿ ಜಿಯಾ ಖಾನ್ ಬರೆದ ಆರು ಪುಟಗಳ ಡೆತ್ ನೋಟ್ ನಲ್ಲಿ ಬಾಯ್ ಫ್ರೆಂಡ್ ಹೆಸರನ್ನು ಉಲ್ಲೇಖಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನೇಣಿಗೆ ಶರಣಾಗಲು ಪ್ರಚೋದನೆ ನೀಡಿರುವ ಆರೋಪದಡಿ ನಟ ಸೂರಜ್ ಪಾಂಚೋಲಿಯನ್ನು ಪೊಲೀಸರು ಬಂಧಿಸಿದ್ದರು.
ತನ್ನ ಮಗಳು ಜಿಯಾ ಸಾವಿಗೆ ಶರಣಾಗಲು ಸೂರಜ್ ಪಾಂಚೋಲಿಯೇ ಕಾರಣ ಎಂದು ತಾಯಿ ರಬಿಯಾ ಖಾನ್ ಆರೋಪಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ಸೂರಜ್ ಪಾಂಚೋಲಿ(32ವರ್ಷ)ಯನ್ನು ಖುಲಾಸೆಗೊಳಿಸಲಾಗಿದೆ ಎಂದು ವಿಶೇಷ ಸಿಬಿಐ ಕೋರ್ಟ್ ನ ಜಡ್ಜ್ ಎ.ಎಸ್.ಸಯ್ಯದ್ ಆದೇಶ ನೀಡಿದ್ದಾರೆ.
ನಟ ಆದಿತ್ಯ ಪಾಂಚೋಲಿ ಮತ್ತು ಜರೀನಾ ವಹಾಬ್ ದಂಪತಿಯ ಪುತ್ರನಾಗಿರುವ ಸೂರಜ್ ಪಾಂಚೋಲಿ ವಿರುದ್ಧದ ಈ ಪ್ರಕರಣದಲ್ಲಿ ಆತ ದೋಷಿ ಎಂದಾಗಿದ್ದರೆ 10 ವರ್ಷಗಳ ಶಿಕ್ಷೆ ಎದುರಿಸಬೇಕಾಗಿತ್ತು. ಪ್ರಕರಣದ ತೀರ್ಪಿನ ಸಂದರ್ಭದಲ್ಲಿ ಪಾಂಚೋಲಿ ತಾಯಿ ಕೋರ್ಟ್ ಗೆ ಆಗಮಿಸಿದ್ದರು ಎಂದು ವರದಿ ತಿಳಿಸಿದೆ.