ಇಡುಕ್ಕಿ: ಮಲಯಾಳಿ ನಟ-ಗಾಯಕ ಮತ್ತು ಬಿಗ್ ಬಾಸ್ನಲ್ಲಿ ಸ್ಪರ್ಧಿಯಾಗಿದ್ದ ಪಿ.ಎಸ್. ಫರೀದುದ್ದೀನ್ ಅವರನ್ನು ನಿಷೇಧಿತ ಮಾದಕ ದ್ರವ್ಯ ಹೊಂದಿದ್ದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ರವಿವಾರ(ನ17) ತಿಳಿಸಿದ್ದಾರೆ.
ಶನಿವಾರ ರಾತ್ರಿ ಈ ಬೆಟ್ಟದ ಜಿಲ್ಲೆಯ ಪುಲ್ಲಿಕ್ಕಾನಂನಲ್ಲಿ ಎಂದಿನಂತೆ ವಾಹನ ತಪಾಸಣೆಯ ವೇಳೆ ಪಾರೀಕುಟ್ಟಿ ಎಂದು ಜನಪ್ರಿಯವಾಗಿರುವ ನಟ ಮತ್ತು ಅವರ ಸ್ನೇಹಿತರೊಬ್ಬರನ್ನು ಎಂಡಿಎಂಎ ಮತ್ತು ಗಾಂಜಾದೊಂದಿಗೆ ಬಂಧಿಸಲಾಗಿದೆ.
ಫರೀದುದ್ದೀನ್ ಹಲವಾರು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು, ಜನಪ್ರಿಯ ಟಿವಿ ಶೋ ಬಿಗ್ ಬಾಸ್ನ ಒಂದು ಸೀಸನ್ನಲ್ಲಿ ಭಾಗವಹಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲೂ ಭಾರೀ ಸಂಖ್ಯೆಯ ಹಿಂಬಾಲಕರು ಇದ್ದಾರೆ.
ವಶಪಡಿಸಿಕೊಳ್ಳಲಾದ ಮಾದಕ ದ್ರವ್ಯಗಳು ವಾಣಿಜ್ಯ ಪ್ರಮಾಣದ್ದಾಗಿದ್ದು, 10 ರಿಂದ 20 ವರ್ಷಗಳವರೆಗೆ ಜೈಲು ಶಿಕ್ಷೆಗೆ ಗುರಿಯಾಗಬಹುದು, ಎಂದು ಅಧಿಕಾರಿಗಳು ಹೇಳಿದ್ದಾರೆ. ತನಿಖೆ ಮುಂದುವರಿದಿದ್ದು, ಇತರ ವಿವರಗಳು ಲಭ್ಯವಾಗಬಹುದು ಎಂದು ತಿಳಿಸಿದ್ದಾರೆ.
ನಟ ಮತ್ತು ಅವರ ಸ್ನೇಹಿತ ಇಬ್ಬರನ್ನೂ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಬಕಾರಿ ಮೂಲಗಳು ತಿಳಿಸಿವೆ.