ಬೆಂಗಳೂರು: ಕನ್ನಡದ ಹಿರಿಯ ನಟ, ಸಾಹಸಸಿಂಹ ವಿಷ್ಣುವರ್ಧನ್ ಅವರು ವಿದ್ಯಾಬ್ಯಾಸ ಮಾಡಿದ್ದ ಹಾಗೂ ಬೆಂಗಳೂರಿನ ಮೊದಲ ಕನ್ನಡ ಶಾಲೆ ಇದೀಗ ಬಾಗಿಲು ಮುಚ್ಚುವ ಸ್ಥಿತಿಗೆ ಬಂದಿದೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ‘ಮಾಡೆಲ್ ಕನ್ನಡ ಹೈಸ್ಕೂಲ್’ ಯನ್ನು ವಿದ್ಯಾರ್ಥಿಗಳಿಲ್ಲದ ಕಾರಣ ಆಡಳಿತ ಮಂಡಳಿ ಶಾಶ್ವತವಾಗಿ ಮುಚ್ಚಲು ನಿರ್ಧರಿಸಿದೆ. ಈ ಶಾಲೆ ಉಳಿಸುವಂತೆ ಕನ್ನಡಿಗರು ಹಾಗೂ ಚಂದನವನದ ತಾರೆಯರು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
ನಟಿ ಪ್ರಣಿತಾ ಸುಭಾಷ್ ಈ ಬಗ್ಗೆ ಸರ್ಕಾರ ಗಮನ ಹರಿಸಬೇಕೆಂದು ಒತ್ತಾಯಿಸಿದ್ದಾರೆ. ಹಾಗೂ ಶಾಲೆ ಪುನರ್ ಪ್ರಾರಂಭಕ್ಕೆ ತಮ್ಮ ಚಾರಿಟೇಬಲ್ ಟ್ರಸ್ಟ್ ನಿಂದ ಸಾದ್ಯವಾದಷ್ಟು ನೆರವು ನೀಡುವುದಾಗಿ ಘೋಷಿಸಿದ್ದಾರೆ. ಇದೀಗ ಕನ್ನಡ ಚಿತ್ರರಂಗದ ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಿಷಭ್ ಶೆಟ್ಟಿ ಕೂಡ ಪ್ರಣಿತಾ ಅವರ ಜತೆ ಧ್ವನಿಗೂಡಿಸಿದ್ದಾರೆ.
ಇಂದು ಈ ಬಗ್ಗೆ ಟ್ವಿಟ್ ಮಾಡಿರುವ ರಿಷಭ್, ಬೆಂಗಳೂರಿನ ಮೊದಲ ಕನ್ನಡ ಮಾಧ್ಯಮ ಶಾಲೆ, ಹಾಗೆಯೇ ಡಾ. ವಿಷ್ಣುವರ್ಧನ್ ರವರು ಓದಿರುವ ಸಂಸ್ಥೆಯು ಮುಚ್ಚುತಿರುವುದು ಬೇಸರ ತಂದಿದೆ. ಈ ವಿಷಯದ ಬಗ್ಗೆ ರಾಜ್ಯ ಸರ್ಕಾರವು ಗಮನಹರಿಸಬೇಕೆಂದು ದಯಮಾಡಿ ಕೇಳಿಕೊಳ್ಳುತ್ತೇನೆ ಎಂದಿದ್ದಾರೆ.
ಸುಮಾರು 150 ವರ್ಷಗಳ ಇತಿಹಾಸ ಹೊಂದಿರುವ ಈ ಶಾಲೆಯಲ್ಲಿ, ಕಳೆದ ಮೂರು ವರ್ಷದಿಂದ ವಿದ್ಯಾರ್ಥಿಗಳ ದಾಖಲಾತಿ ಆಗಿಲ್ಲ. ಹೀಗಾಗಿ ವಿದ್ಯಾರ್ಥಿಗಳ ಕೊರತೆ ಕಾರಣದಿಂದ, ಆಡಳಿತ ಮಂಡಳಿ ಶಾಲೆ ಮುಚ್ಚಲು ಮುಂದಾಗಿದೆ.
ಬೆಂಗಳೂರಿನ ಮೊದಲ ಕನ್ನಡ ಮಾಧ್ಯಮ ಶಾಲೆ ಮತ್ತು ಅತ್ಯಂತ ಪುರಾತನ ಶಾಲೆ ಎಂಬ ಹೆಗ್ಗಳಿಕೆ ಹೊಂದಿರುವ ಈ ಶಾಲೆಯನ್ನು ಮುಚ್ಚುವ ನಿರ್ಧಾರಕ್ಕೆ ನಟಿ ಪ್ರಣಿತಾ ಸುಭಾಷ್ ಹಾಗೂ ರಿಷಭ್ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.