ಬೆಂಗಳೂರು : ಕನ್ನಡ ಚಿತ್ರಗಳಲ್ಲಿ ಮತ್ತು ಕಿರುತೆರೆಯಲ್ಲಿ ನಟಿಸಿದ್ದ ಯುವ ನಟ ನಿತಿನ್ ಗೋಪಿ ಅವರು 39 ರ ಹರೆಯದಲ್ಲೇ ಹೃದಯಾಘಾತದಿಂದ ಶುಕ್ರವಾರ (ಜೂನ್ 2) ಕೊನೆಯುಸಿರೆಳೆದಿದ್ದಾರೆ.
ಬೆಂಗಳೂರಿನ ಇಟ್ಟುಮಡುವಿನ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದ ನಿತಿನ್ ಅವರಿಗೆ ಬೆಳಗಿನ ಜಾವ 4 ಗಂಟೆಗೆ ಹೃದಯಾಘಾತವಾಗಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಇಹಲೋಕ ತ್ಯಜಿಸಿದ್ದರು ಎಂದು ತಿಳಿದು ಬಂದಿದೆ.
ಕೊಳಲು ವಾದಕರಾಗಿ ಹೆಸರು ಮಾಡಿದ್ದ ಗೋಪಿ ಅವರ ಪುತ್ರ ನಿತಿನ್ ಅವರು ಡಾ.ವಿಷ್ಣುವರ್ಧನ್ ಅವರೊಂದಿಗೆ ‘ಹೆಲೋ ಡ್ಯಾಡಿ’ ಚಿತ್ರದಲ್ಲಿ ನಟಿಸಿ ಹೆಸರು ಗಳಿಸಿದ್ದರು. ಅದಲ್ಲದೆ ಕೆರಳಿದ ಕೇಸರಿ, ಮುತ್ತಿನಂಥ ಹೆಂಡತಿ, ನಿಶ್ಯಬ್ಧ, ಚಿರಬಾಂಧವ್ಯ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು.
ಹಲವು ಧಾರಾವಾಹಿಗಳಲ್ಲಿ ನಟಿಸಿ ನಿರ್ದೇಶನವನ್ನೂ ಮಾಡಿದ್ದರು. ಅವಿವಾಹಿತರಾಗಿದ್ದ ನಿತಿನ್ ತಂದೆ ಮತ್ತು ತಾಯಿಯೊಂದಿಗೆ ವಾಸವಾಗಿದ್ದರು. ನಿಧನಕ್ಕೆ ಬಣ್ಣದ ಲೋಕದ ಗಣ್ಯರು ಸೇರಿ ಆಪ್ತರು ತೀವ್ರ ಕಂಬನಿ ಮಿಡಿದಿದ್ದಾರೆ.