Advertisement

“ರಾಮ’ವಾಸ್ತವ್ಯ

09:25 PM Jul 26, 2019 | mahesh |

ಇದು ಹಿರಿಯ ನಟ ನೀರ್ನಳ್ಳಿ ರಾಮಕೃಷ್ಣರ ವನವಾಸಿಯಾದ ಕತೆ. ಬೆಂಗಳೂರೆಂಬ ವೈಭವಯುತ ನಗರವನ್ನು ತೊರೆದು, ಶಿರಸಿಯ ತಮ್ಮ ಹುಟ್ಟೂರಿನಲ್ಲಿ, ಮೊಬೈಲನ್ನು ಆಚೆಗೆಲ್ಲೋ ಬಿಟ್ಟು, ಬಿಳಿ ಬಟ್ಟೆ ತೊಟ್ಟು, ಹಸಿರಿನ ನಡುವೆ ಅವರೀಗ ಇನ್ನಷ್ಟು ಹಸನ್ಮುಖಿ. ಶೂಟಿಂಗ್‌ ಇದ್ದಾಗ ಬೆಂಗಳೂರು ಮುಖಿ. ಊರು ಸೇರಿದಾಗ, ಬಹುಮುಖಿ. ತಾರೆಯೊಬ್ಬರು, ಬದುಕಿನ ನೆಮ್ಮದಿಗೆ ಕಂಡುಕೊಂಡ ಈ ಮಾರ್ಗ ವೇ ಒಂದು ವಿಸ್ಮಯ…

Advertisement

ಭೂಮಿ ದುಂಡಗಿದೆ, ಮತ್ತೆ ಆರಂಭಕ್ಕೇ ಬಂದು ಸೇರಬಹುದು ಎಂಬುದಕ್ಕೆ ನಾನೂ ಸಾಕ್ಷಿ. ಬೆಂಗಳೂರಿನ ಹೊಗೆ, ಆ ವಾಹನ ದಟ್ಟಣೆ, ಸರ್ಕಲ್ಲು, ಸಿಗ್ನಲ್ಲು, ಟ್ರಾಫಿಕ್ಕು, ದಟ್ಟ ಹೊಗೆ, ಉಸ್ಸಪ್ಪಾ… ಇಲ್ಲಿ ನೋಡಿ, ರಾಶಿ ರಾಶಿ ಖುಷಿ ಇದೆ. ಇಡೀ ದಿನ ಇಲ್ಲೇ ಕಳೆದರೂ ಬೇಸರ ಎಂಬುದೇ ಇಲ್ಲ. ಈ ನೆಮ್ಮದಿ ಆ ಮಹಾನಗರಿಯಲ್ಲಿಲ್ಲ…- ದಟ್ಟ ಹಸಿರು ಬೆಟ್ಟಗಳ ನಡುವೆ, ತೋಟದಲ್ಲಿ ಕಟ್ಟಿಕೊಂಡ ಪುಟ್ಟ ಮನೆ “ಜಟಗ’. ಅದರ ಬಾಗಿಲಿನಲ್ಲಿ ನಿಂತಿದ್ದ ಚಿತ್ರನಟ ನೀರ್ನಳ್ಳಿ ರಾಮಕೃಷ್ಣ ಈಗ ಅಪ್ಪಟ ಹಳ್ಳಿಗ. ಅಂದು ತೆರೆಯ ಮೇಲೆ “ತಾಳಿ ಕಟ್ಟುವ ಶುಭವೇಳೆ’ ಎಂದು ನರ್ತಿಸಿ ಹಾಡುವಾಗ, ಅವರ ಕಣ್ಣಾಳದಲ್ಲಿದ್ದ ದೊಡ್ಡ ಆಲದ ಮರ, ಅಕ್ಕ-ತಂಗಿ ಗಿಣಿ, ಪುಷ್ಪ ವಿಮಾನದಿ ಬಂದ ಉಡುಗೊರೆ, ಗೋವುಗಳು, ಜಿಂಕೆಗಳು, ಪುಟಾಣಿ ಮೊಲಗಳೆಲ್ಲ ಅವರ ಅಕ್ಕಪಕ್ಕವೇ ಮಂಗಳವಾದ್ಯ ನುಡಿಸುತ್ತಿರುವಂತೆ ಭಾಸವಾಯಿತು.

ಅವರ ಮಾತು ಅರಳುತ್ತಲೇ ಇತ್ತು. “ಈ ಕ್ಷೇತ್ರವನ್ನೂ, ಈ ಮನೆಯನ್ನೂ, ನನ್ನನ್ನೂ ಜಟಗ ಕಾಯುತ್ತಾನೆ, ಅಪ್ಪನ ಕಾಲದಿಂದಲೂ ನಮ್ಮನ್ನು ಕಾಯೋ ದೇವರು ಎಂದೇ ಜಟಗನನ್ನು ಪೂಜಿಸಿಕೊಂಡು ಬಂದಿದ್ದೇವೆ. ಈ ಮನೆಗೂ “ಜಟಗ’ ಎಂದೇ ಹೆಸರಿಟ್ಟಿದ್ದೇವೆ. ಗಿಡಗಳು, ಇಲ್ಲಿಗೆ ಬರೋ ಪಕ್ಷಿಗಳು, ನಾನೇ ಸಾಕುತ್ತಿರುವ ತುಡವಿ ಜೇನು, ಅದರ ಸವಿ, ಈಗಲೂ ಇರುವ ಹಲಸಿನ ಹಣ್ಣು, ವೆರೈಟಿ ಮಾವಿನ ಹಣ್ಣುಗಳು, ಬಾಗಿ ನಿಂತ ಬಾಳೆ, ಮುಗಿಲವೀರನಂಥ ಅಡಕೆ ಮರ, ಬೆಣ್ಣೆ ಹಣ್ಣು, ಚಿಕ್ಕು ಹಣ್ಣು- ಹೀಗೆ ಬಹು ವೆರೈಟಿ ಗಿಡಗಳು ಇಲ್ಲಿವೆ. ಅಮ್ರುಪಾಲಿ ಮಾವು ಈ ಭೂಮಿಗೆ ಯಾಕೋ ಸೆಟ್ಟೇ ಆಗುತ್ತಿಲ್ಲಪ್ಪ ಎನ್ನುತ್ತಲೇ, ಸುತ್ತಲಿನ ಹಸಿರು ಪರಿಸರ ತೋರಿಸುತ್ತಾ, ಪ್ರಗತಿಪರ ರೈತ ಸೀತಾರಾಮ ಹೆಗಡೆ, ಎಂ.ಎನ್‌. ಹೆಗಡೆ ಹೊಸ್ಮನೆ ಅವರ ಕೃಷಿ ಸಲಹೆ, ಪತ್ನಿ ಮಂಗಲಾರ ನಿರಂತರ ಪ್ರೋತ್ಸಾಹ, ಕುಟುಂಬದವರ ಪ್ರೀತಿ ನೆನೆದರು. ನಡು ನಡುವೆ ಸಿನಿಮಾದ ಕಥೆಗಳೂ ಬಿಚ್ಚಿಕೊಂಡವು.

ಅದು ನೀರ್ನಳ್ಳಿ…
ಮಲೆನಾಡಿನ ಶಿರಸಿ ಸಮೀಪದ ಪುಟ್ಟ ಊರು. ಕೃಷಿಕರ ಹಾಗೂ ಕಲಾವಿದರ ನೆಲೆವೀಡು. ಈ ಊರಿನ ರಾಮಕೃಷ್ಣ, ಇಡೀ ರಾಜ್ಯಕ್ಕೆ “ನೀರ್ನಳ್ಳಿ ರಾಮಕೃಷ್ಣ’ ಎಂದೇ ಪರಿಚಿತರು. ಗುಬ್ಬಿ ವೀರಣ್ಣರ ರಂಗ ಸಖ್ಯ, ಪುಟ್ಟಣ್ಣ ಕಣಗಾಲ್‌ರ ಗರಡಿಯಲ್ಲಿ ಬೆಳೆದು ಸಿನಿಮಾದಲ್ಲಿ ಅಚ್ಚಳಿಯದ ಹೆಸರು ಮಾಡಿದವರು ನಮ್ಮ ರಾಮಕೃಷ್ಣ. ದೊಡ್ಡ ದೊಡ್ಡ ತಾರೆಗಳ ಜೊತೆ ಮಿಂಚಿ, ಈಗ ಸಾಕಷ್ಟು ಬೇಡಿಕೆ ನಡುವೆಯೂ ಹಳ್ಳಿಯಲ್ಲಿ, ಮೊಬೈಲನ್ನು ಆಚೆಗೆಲ್ಲೋ ಬಿಟ್ಟು ಓಡಾಡುತ್ತಿದ್ದಾರೆ. ಬಿಳಿ ಅಂಗಿ, ಬಿಳಿ ಪೈಜಾಮದ ಅವತಾರ. “ಬಬ್ರುವಾಹನ’ದಲ್ಲಿ ನಾವು ನೀವೆಲ್ಲ ಕಂಡ ಅದೇ ಕೃಷ್ಣನ ನಗು. ರಾಮಕೃಷ್ಣರು ಬದಲಾಗಿಲ್ಲ.

“ಎಲ್ಲ ಬಿಟ್ಟು ಭಂಗಿ ನೆಟ್ಟ - ಎಂಬ ಗಾದೆ ಇದೆ. ಎಲ್ಲವನ್ನೂ ಮಾಡಿ ಕೊನೆಗೆ ಕೆಲಸ ಇಲ್ಲದೇ ಬಂದ ಎಂಬುದಕ್ಕೆ ಇರೋ ನಾಣ್ಣುಡಿ. ಆದರೆ, ನಿಜ ಹೇಳೆ¤àನೆ, ನನಗೆ ಇಲ್ಲಿ ಸಿಗೋ ಖುಷಿ ಬೇರೆಲ್ಲೂ ಸಿಗಲ್ಲ. ಶೂಟಿಂಗ್‌ ಇದ್ದಾಗ ಇಲ್ಲಿಂದಲೇ ಹೋಗಿ ಬರುವೆ. ಮುಂದಿನ ವಾರ ಮತ್ತೆ ಸಿನಿಮಾದ ಡಬ್ಬಿಂಗ್‌ಗೆ ಹೋಗಿ ಹೋಗಬೇಕು. ಈ ಹಸಿರು, ಇಲ್ಲಿ ಬರೋ ಪಕ್ಷಿಗಳು, ಇಲ್ಲಿನ ವೈವಿಧ್ಯತೆ ಬಿಟ್ಟಿರಲು ಮನಸ್ಸಾಗದು’- ತೋಟದ ಕಪ್ಪುಗಳನ್ನು ಜಿಗಿಯುತ್ತಾ, ಈ ಮಾತು ಹೇಳುವಾಗ ಅವರು ತೊಟ್ಟ ಬಿಳಿ ಬಣ್ಣ, ಸುತ್ತಲಿನ ಹಸಿರಿನೊಂದಿಗೆ ಶ್ರುತಿ ಹಾಡುತ್ತಿತ್ತು.

Advertisement

ಗದಾಯುದ್ಧದ ಭೀಮನೂ…
“ಸಿನಿಮಾಕ್ಕೆ ಹೋಗಬೇಕು ಎಂದು ಯಾವತ್ತೂ ಇರಲಿಲ್ಲ. ಪ್ರಾಥಮಿಕ ಶಾಲೆಗೆ ಹೋಗುವಾಗಲೇ ಹೊಸ್ತೋಟ ಮಂಜುನಾಥ ಭಾಗವತರಲ್ಲಿ ಯಕ್ಷಗಾನ ಕಲಿತೆ. ಗದಾಯುದ್ಧದ ಭೀಮನಾಗಿ, ದುರ್ಯೋದನನ ತೊಡೆ ಮುರಿದಿದ್ದೆ. ಮೀಸೆ ಮೂಡುವ ಮುನ್ನವೇ ನಾಟಕ ಆಡುವ ಖಯಾಲಿ ಬೆಳೆದಿತ್ತು. ಮಾಪಾರಿ, ಎಸ್‌.ಜಿ. ಪ್ರಾಥಃಕಾಲರು ಬಣ್ಣ ಹಚ್ಚಿಸಿದರು. ಗುಬ್ಬಿ ವೀರಣ್ಣ ಕಂಪನಿಯ ನಾಟಕ ಬಂದಾಗ ಅದರಲ್ಲಿದ್ದ ಕಲಾವಿದರನ್ನೂ ಪರಿಚಯ ಮಾಡಿಕೊಂಡೆ, ಎಸ್ಸೆಸ್ಸೆಲ್ಸಿ ಮುಗಿಸು, ಪಿಯುಸಿ ಮುಗಿಸು, ಬಿಎ ಮುಗಿಸಿ ಬಾ ಎಂದು ವೀರಣ್ಣನವರ ಹಿರೇ ಮಗಳು ಸುವರ್ಣಮ್ಮ ಹೇಳುತ್ತಿದ್ದರು. ನನ್ನ ಸಾಕು ಮಗನೆಂದೂ ಅವರು ಆಗಾಗ ಹೇಳುತ್ತಿದ್ದರು’.

“1973- 74ರ ವೇಳೆ. ಆಗ ನಡೆಯುತ್ತಿದ್ದ ಲವಕುಶದಂಥ ನಾಟಕದ ಕಥೆಗಳು ಇಂಟ್ರೆಸ್ಟಿಂಗ್‌ ಆಗಿದ್ದವು. ಅಲ್ಲಿ ಮಾಣಿ ಪಾತ್ರದಿಂದ ಲಕ್ಷ್ಮಣನ ಪಾತ್ರದ ತನಕವೂ ನಾನು ಮಾಡಿದ್ದೆ. ಮುಂದೆ ಸುವರ್ಣಮ್ಮವರೇ ನನಗೆ ಡಾ. ರಾಜಕುಮಾರ್‌ ಅವರನ್ನೂ ಪರಿಚಯಿಸಿದರು’ ಎಂದು ಹಳೇ ಕಥೆಯ ಸುರುಳಿ ಬಿಚ್ಚಿದರು.

“ಅಣ್ಣಾವ್ರು ಬಬ್ರುವಾಹನ ಸಿನಿಮಾದಲ್ಲಿ ಕೃಷ್ಣನ ಪಾತ್ರ ಮಾಡಿಸಿದರು. ಆಗೆಲ್ಲ, ಬಣ್ಣ ಹಚ್ಚಿ ಮೇಕಪ್‌ ನೋಡಿ ಒಕೆ ಅನ್ನುತ್ತಿದ್ದರು. ಬಬ್ರುವಾಹನ ಚಿತ್ರದಲ್ಲಿ ನನಗೆ ಕೊಟ್ಟಿದ್ದು 5 ಸಾವಿರ ರೂ. ಸಂಬಳ. ನಂತರ ಸಿಕ್ಕಿದ್ದು, ಲೆಕ್ಕ ಇಡದಷ್ಟು ಸಿನಿಮಾಗಳ ಪಾತ್ರ. ನಾನು ನಮ್ಮೂರಿನ ಮೊದಲ ಬಿ.ಎ. ಪದವೀಧರ. “ಪಡುವಾರಳ್ಳಿ ಪಾಂಡವರು’ ಚಿತ್ರದಲ್ಲೂ ಅದೇ ಮಾದರಿ ಪಾತ್ರ ಸಿಕ್ಕಿತ್ತು. ಸಿನಿಮಾಕ್ಕೆ ಹೋಗದಿದ್ದರೆ ಸೊಸೈಟಿ ಸೆಕ್ರೇಟರಿಯೋ, ಶಾಲಾ ಮೇಸ್ಟ್ರೋ ಆಗ್ತಿದ್ದೆ. ನಾವೇನಾಗ್ತಿದ್ದೇವೋ, ಅದರಲ್ಲಿ ಖುಷಿ ಕಂಡುಕೊಂಡರೆ ಸಮಸ್ಯೆ ಇರೋಲ್ಲ’- ಎನ್ನುವಾಗ, ಅವರ ಕೈ ಬೆರಳು ಠಕ್‌ ಠಕ್‌ ಸದ್ದು ಮಾಡಿತು. “ಈ ಹಲಸಿನ ಕಾಯಿ, ಬೆಂಗ್ಳೂರ್‌ಗೆ ಹೋಗ್ಬರೋಷ್ಟರಲ್ಲಿ ಹಣ್ಣಾಗಿರುತ್ತೆ’ ಅಂದರು.

ನೀರ್ನಳ್ಳಿಯಲ್ಲಿ ಹುಟ್ಟಿದ್ದರಿಂದಲೋ ಏನೋ? ನೀರಿನ ಮೇಲೆ ಅವರಿಗೆ ಅಪಾರ ಪ್ರೀತಿ. ಸಣ್ಣವರಿದ್ದಾಗ ಸಾಬೂನಿನ ಕೊಟ್ಟೆಗೆ ನೀರು ತುಂಬಲು ಹೋಗಿ ಹೊಂಡಕ್ಕೆ ಬಿದ್ದ ನೆನಪು, ಪಾತರಗಿತ್ತಿಯ ಬಾಲ ಹಿಡಿದ ಚಿತ್ರಗಳೆಲ್ಲ ಅವರ ಕಣ್ಣನ್ನು ತುಂಬಿಕೊಂಡಿದ್ದವು.

“ನಾನು ಮನೆಗೆ ಹಿರಿಯ ಮಗ. ಸಣ್ಣವನಿದ್ದಾಗ ದನ ಕಾಯುತ್ತಿದ್ದೆ. ಅಡಕೆ ಸುಲಿಯೋದು, ಬೇಯಿಸೋದು, ತೋಟದ ಕೆಲಸ, ನೆಟ್ಟಿ ಮಾಡೋದು, ಕೊಟ್ಟಿಗೆಗೆ ಸೊಪ್ಪು ತಂದು ಜಾನುವಾರುಗಳ ಕಾಲುಬುಡಕ್ಕೆ ಹಾಕೋದು- ಎಲ್ಲವನ್ನೂ ಮಾಡಿದ್ದೆ. ಬೆಂಗಳೂರಿಗೆ ಹೋದ ಬಳಿಕ ರಾಜಕುಮಾರರು ತೋಟದಲ್ಲಿ ಕೆಲಸ ಮಾಡುವುದನ್ನು ನೋಡಿ, ನನ್ನ ಬಾಲ್ಯದ ದಿನಗಳು ನೆನಪಾಗುತ್ತಿದ್ದವು. ನನಗೆ ಅಣ್ಣಾವ್ರೇ ಆದರ್ಶ. ನಾನೂ ಒಂದು ತೋಟ ಮಾಡ್ಬೇಕು ಅನ್ನೋ ಕನಸು ಚಿಗುರೊಡೆದಿದ್ದು ಕೂಡ ಆಗಲೇ. ಆರು ವರ್ಷಗಳ ಹಿಂದೆ ಊರಲ್ಲಿ ಮೂರೂವರೆ ಎಕರೆ ಭೂಮಿ ಖರೀದಿಸಿದೆ. ಅದೇ ಇದು. ಇಲ್ಲಿ ಮಲ್ಲಿಕಾ, ಗಿಡಗನಮನೆ ಸೇರಿದಂತೆ 250ಕ್ಕೂ ಅಧಿಕ ಮಾವಿನ ಗಿಡಗಳುಂಟು. ಕಂಚಿ, ಲಿಂಬು, ಗಸಗಸೆಯ ಕಂಪು ಇಲ್ಲೇ ಇದೆ. ಈ ಪೇರಲ, ಚಿಕ್ಕು ಅವ್ರು ನೀಡಿದ್ದು, ಆ ಹೂವು, ಮಾದು ಗಿಡ ಇವ್ರು ಕೊಟ್ಟಿದ್ದು’ ಎಂದು ಗಿಡದ ಪರಿಚಯ ಹೇಳತೊಡಗಿದರು.

“ಇಲ್ಲಿ ಕಟ್ಟಿಕೊಂಡ ಮನೆಯಲ್ಲಿ ವಾಸ್ತವ್ಯಕ್ಕೆ ಬೇಕಾದ ಎಲ್ಲ ಸೌಲಭ್ಯ ಇದೆ. ಮಕ್ಕಳು ವಿದೇಶದಿಂದ ಬಂದರೆ, ಇಲ್ಲೇ ಉಳಿತಾರೆ’ ಎನ್ನುವಾಗ, ಮನೆಯತ್ತ ಅವರ ತೋರ್ಬೆರಳು ನೆಟ್ಟಿತ್ತು.

ಚಿಕ್ಕವನಿದ್ದಾಗ ಜೇನು ಕೃಷಿ ಮಾಡಿದ್ದರಂತೆ. ಜೇನುಪೆಟ್ಟಿಗೆಯ ಪಕ್ಕ ನಿಂತು ಆ ನೆನಪು ತೆಗೆದರು. ಗಸಗಸೆ ಹೂವಿನ ಜೇನುತುಪ್ಪ ಸೂಪರ್ರಂತೆ. “ತುಪ್ಪ ತೆಗೆಯುವಾಗ ಅದೆಷ್ಟು ಸಲ ಈ ಜೇನಿನಿಂದ ಹೊಡೆಸಿಕೊಂಡಿದ್ದೀನೋ’ ಎನ್ನುತ್ತಾ, ಕೈ ತೋರಿಸಿದರು. “ಗಸಗಸೆಯ ಹೂವಿಗೆ ಬಾರದ ಪಕ್ಷಿಗಳೇ ಇಲ್ಲ. ಮನೆ ಎದುರಿಗೆ ಈ ಗಿಡ ಹೂವಾದಾಗ ಅದನ್ನು ನೋಡೋದೇ ಆನಂದ’ ಎಂದು ಕಿಟಕಿಯಾಚೆಗೆ ದೃಷ್ಟಿ ನೆಟ್ಟರು. ಇಲ್ಲೇ ತೆಂಗು ಹಾಕಿದ್ದೆ, ಹಂದಿ ಹಾಳು ಮಾಡಿತು. ನಂಜನಗೂಡು ರಸಬಾಳೆ ಗಡ್ಡೆ ತಂದಿದ್ದೆ, ಹಂದಿ ಉಳಿಸಲೇ ಇಲ್ಲ, ಏನ್ಮಾಡಲಿ?’ ಎನ್ನುವಾಗಲೆಲ್ಲ ಒಬ್ಬ ರೈತನಿಗೆ ಕವಿಯುವಂಥ ದುಃಖದ ಕಾರ್ಮೋಡ, ಅವರ ಮುಗುಳು ಮೊಗವನ್ನು ಆಳಲೆತ್ನಿಸುತ್ತಿತ್ತು.

ಮತ್ತೆ ಬೆಂಗಳೂರು ನೆನಪಾಯಿತು. “ಲಕ್ಷ್ಯ’ ಸಿನಿಮಾದ ಡಬ್ಬಿಂಗ್‌ ನಡೆಯುತ್ತಿದೆ. ಮೊನ್ನೆ ಮೊನ್ನೆಯಷ್ಟೇ “ಯಾನ’ವೂ ಟಾಕೀಸಿಗೆ ಬಂತು. “ಅಲ್ಲಿಗೆ ಹೋದರೂ, ಪುನಃ ನನ್ನ ಯಾನ ಇಲ್ಲಿಗೇ’ ಅಂದರು. ಅವರ ಕೈಯಲ್ಲಿದ್ದ ಗುದ್ದಲಿ, ಮಣ್ಣು ಅಗೆಯುತ್ತಿತ್ತು. ಯಾಕೋ ಅಣ್ಣಾವ್ರ ನೆನಪಾಯಿತು.

ರಾಮನ ಭಂಟ “ಮಾರುತಿ 800′ ಮಹಿಮೆ!
“ಏನ್‌ ಸಾರ್‌, ಇನ್ನೂ ಇದೇ ಕಾರಾ?’ - ಎಷ್ಟೋ ಜನ ಕೇಳ್ತಾರೆ. 1986ರಲ್ಲಿ ಮಾರುತಿ 800 ಬಂದಾಗ 75 ಸಾವಿರ ರೂ. ಕೊಟ್ಟು ಖರೀದಿಸಿದೆ. ನನಗೆ ಕಾರು ಕೊಡಿಸಿದ ಚಂದ್ರಣ್ಣ, ಕ್ಯಾನ್ಸರ್‌ ಆಗಿ ಹೋಗಿಬಿಟ್ಟರು. ಜಗ್ಗೇಶನ ಸಿನಿಮಾದಲ್ಲಿ ಯಾವುದೋ ಹುಡುಗಿ ಪಟಾಯಿಸಿದ್ರೆ, ಈ ಕಾರು ನಿಂಗೇ ಕೊಡ್ತೀನಿ ಅಂತ ಡೈಲಾಗ್‌ ಹೊಡೆದಿದ್ದು ಬಿಟ್ಟರೆ ಇದನ್ನು ವಾಸ್ತವವಾಗಿ ಮಾರಲು ಯೋಚಿಸಿಯೇ ಇಲ್ಲ. ಸಮಸ್ತ ಕರ್ನಾಟಕ, ತಿರುಪತಿ, ಮಂತ್ರಾಲಯವನ್ನೂ ನೋಡಿ ಬಂದಿದೆ ಈ ಕಾರು.

ರವಿಚಂದ್ರನ್‌, ಶಂಕರನಾಗ್‌, ಅಂಬರೀಶ್‌, ಇದರ ಡ್ರೈವಿಂಗ್‌ ಸೀಟಲ್ಲಿ ಕೂತಿದ್ದರು. ರವಿಚಂದ್ರನ್‌ ಅವರ ನಾಲ್ಕೈದು ಚಿತ್ರದಲ್ಲಿ “ಸಿಕೆಪಿ 3695′ ಆ್ಯಕ್ಟಿಂಗ್‌ ಮಾಡಿದೆ. ಅಂದು ಯಾರ ಬಳಿಯೂ ಮಾರುತಿ ಕಾರು ಇರಲಿಲ್ಲ. ನನ್ನದೇ ಮೊದಲು ಎಂಬ ಹೆಮ್ಮೆ. ಆಗೆಲ್ಲ ಪ್ರೊಡಕ್ಷನ್‌ ಸೆಕ್ಷನ್‌ನಿಂದಲೇ ಕಾರಿನ ವ್ಯವಸ್ಥೆ ಆಗುತ್ತಿತ್ತು. ಇದೇ ಕಾರು ಕೆ.ಬಾಲಚಂದರ್‌ ನಿರ್ದೇಶನದ ನಾಲ್ಕೈದು ತಮಿಳು ಸಿನಿಮಾದಲ್ಲಿ ನಟಿಸಲು ನನ್ನನ್ನು ಕರೆದೊಯ್ದಿತ್ತು. ಗ್ಯಾರೇಜಿಗೆ ಹೋದರೆ, “ಕಾರ್‌ಗೆ ನಮಸ್ಕಾರ ಮಾಡಿ, ರಿಪೇರಿ ಮಾಡಪ್ಪಾ’ ಅಂತೀನಿ. ಕಾರಣ, ಇದು ಮೆಕ್ಯಾನಿಕ್‌ಗಿಂತ ವಯಸ್ಸಿನಲ್ಲಿ ಹಿರಿಯ!

ಯಶ್‌ ಕೊಟ್ಟ ಸಂಪಿಗೆ
ಇದು ಯಶ್‌ ಕೊಟ್ಟ ಸಂಪಿಗೆ ಗಿಡ. ಅವರ ಮದ್ವೆ ಆಹ್ವಾನಕ್ಕೆ ಬಂದಾಗ ಕೊಟ್ಟಿದ್ದರು. ಅದನ್ನು ಬೆಂಗಳೂರಲ್ಲಿ ಎಲ್ಲಿ ನೆಡಲಿ? ಇಲ್ಲಿ ಬೆಳೆಸುತ್ತಿದ್ದೇನೆ. ಮೊನ್ನೆ ಯಶ್‌ ಸಿಕ್ಕಾಗ, “ನಿಮ್ಮ ಗಿಡ ಬೆಳೆಯುತ್ತಿದೆ’ ಎಂದು ಹೇಳಿದೆ, “ಅದನ್ನು ನೋಡಲು ಬರ್ತಿನಿ’ ಅಂದಿದ್ದಾರೆ.

ವ‌ರದಹಳ್ಳಿ ಶ್ರೀಧದರೆಂದರೆ ಹುಚ್ಚು…
ಸಾಗರ ಸಮೀಪದ ವರದಹಳ್ಳಿಯ ಶ್ರೀಧರರೆಂದರೆ ಭಕ್ತಿ, ಪ್ರೀತಿ, ಒಂಥರಾ ಹುಚ್ಚು. ಅವರಿಂದ ಹೀನಗಾರದಲ್ಲಿ ತೀರ್ಥ ಪಡೆದಿದ್ದನ್ನು, ಎಂದಿಗೂ ಮರೆಯಲಾರೆ. ವರದಹಳ್ಳಿಯ ಗುಡ್ಡದ ಮೇಲೆ “ಅಮೃತ ಘಳಿಗೆ’ ಚಿತ್ರ ತೆಗೆಯುವಾಗ, ನನ್ನಾಳದಲ್ಲಿ ಶ್ರೀಧರರ ನೆನಪೇ ಇತ್ತು. ಅವರ ಆಶೀರ್ವಾದದಿಂದ ಇವೆಲ್ಲ ಸಾಧ್ಯವಾಗಿದೆ.

– ರಾಘವೇಂದ್ರ ಬೆಟ್ಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next