ಹರಿಹರ: ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಮಂಗಳವಾರ ನಡೆದ ಮೂರನೇ ವಾಲ್ಮೀಕಿ ಜಾತ್ರೆಯಲ್ಲಿ ಸಹಸ್ರಾರು ಅಭಿಮಾನಿಗಳ ಹರ್ಷೋದ್ಘಾರದ ಮಧ್ಯೆ ಚಿತ್ರ ನಟ ಕಿಚ್ಚ ಸುದೀಪ್ ಅವರಿಗೆ ಪ್ರಥಮ ವಾಲ್ಮೀಕಿ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅಸಂಖ್ಯ ಅಭಿಮಾನಿ ಗಳನ್ನು ಕಂಡು ಪುಳಕಿತ ರಾದ ಸುದೀಪ್, ಇಷ್ಟೊಂದು ಸಂಖ್ಯೆಯಲ್ಲಿ ಜನ ಸೇರುತ್ತಾರೆ ಎಂದು ಕೊಂಡಿರಲಿಲ್ಲ ಎಂದು ಮಾತು ಆರಂಭಿಸುವಷ್ಟರಲ್ಲಿ ಅಭಿಮಾನಿಗಳ ಕೇಕೆ, ಕುಣಿತ ಹೆಚ್ಚಾಯಿತು. ನಾನು ಚಿತ್ರರಂಗದವನು, ಚಿತ್ರರಂಗವೇ ನನಗೆ ಜಗತ್ತು ಎಂದಷ್ಟೇ ಹೇಳಿ ಸುದೀಪ್ ಮಾತು ಮುಗಿಸಿದರು.
ಅಭಿಮಾನಿಗಳು ಅತಿರೇಕದ ವರ್ತನೆ ತೋರಿದ್ದರಿಂದ ಸುದೀಪ್ ಅವರನ್ನು ಹೆಲಿಪ್ಯಾಡ್‌ಗೆ ಕಳುಹಿಸಲಾಯಿತು. ಸಿಎಂ ಬಂದು ಹೋದ ನಂತರ ಸುದೀಪ್ ಹೆಲಿಕಾಪ್ಟರ್ ನಲ್ಲಿ ಆಗಮಿಸಿದರು. ಆಗ ಜನರು ಹುಚ್ಚೆದ್ದು ಕುಣಿಯುತ್ತಾ, ಕೇಕೆ ಹಾಕತೊಡಗಿದರು. ಸಿಎಂ ಇದ್ದಾಗ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದ ಪೊಲೀಸರು, ನಂತರ ನಿರ್ಲಕ್ಷ್ಯ ತೋರಿದ್ದರಿಂದ ಅಭಿಮಾನಿಗಳ ಮಹಾಪೂರವನ್ನು ನಿಯಂತ್ರಿಸಲಾಗಲಿಲ್ಲ.
ಸುದೀಪ್ ವೇದಿಕೆ ಏರುತ್ತಿದ್ದಂತೆ ಅಭಿಮಾನಿಗಳು ವೇದಿಕೆಯತ್ತ ಅಕ್ಷರಶಃ ದಾಳಿ ಇಟ್ಟರು. ವೇದಿಕೆ ಪಕ್ಕದ ಪ್ರೆಸ್ ಗ್ಯಾಲರಿಯಲ್ಲಿದ್ದ ಮಾಧ್ಯಮದವರು ತಮ್ಮ ಲ್ಯಾಪ್‌ಟಾಪ್, ಪರಿಕರ ಎತ್ತಿಕೊಂಡು ಓಡಿದರು. ಈ ಗಡಿಬಿಡಿಯಲ್ಲಿ ಹಲವರ ಎಲೆಕ್ಟ್ರಾನಿಕ್ ಸಲಕರಣೆಗಳು ಕಳೆದು ಹೋದವು. ಪೊಲೀಸರು 3-4 ಸಲ ಲಘು ಲಾಠಿ ಪ್ರಹಾರ ನಡೆಸಿದರೂ ಜನ ಸಮೂಹ ಬಗ್ಗಲಿಲ್ಲ. ವೇದಿಕೆ ಸುತ್ತ ಹಾಕಿದ್ದ ಕುರ್ಚಿಗಳು ಮುರಿದವು. ಮಕ್ಕಳು, ಮಹಿಳೆಯರು ನೂಕು, ನುಗ್ಗಾಟದಿಂದ ತಲ್ಲಣಗೊಂಡರು. ಕಳೆದ ಎರಡು ಬಾರಿಯ ಜಾತ್ರೆಯಲ್ಲಿ ಸುದೀಪ್ ಆಗಮಿಸಿದಾಗ ಅಭಿಮಾನಿಗಳ ಅತಿ ಉತ್ಸಾಹವನ್ನು ಕಂಡಿದ್ದ ಪೊಲೀಸರು, ಈ ಬಾರಿ ಮುನ್ನೆಚ್ಚರಿಕೆ ಕೈಗೊಳ್ಳುವಲ್ಲಿ ವಿಫಲರಾದರು.