ಬೆಂಗಳೂರು/ಮೈಸೂರು: ಸಾಹಸ ಸಿಂಹ ವಿಷ್ಣುವರ್ಧನ್ ಅವರ ಅಭಿಮಾನಿಗಳ ಸತತ 13 ವರ್ಷಗಳ ಹೋರಾಟ, ನಿರಂತರ ಪ್ರಯತ್ನದ ಬಳಿಕ ಬಹುದಿನಗಳ ಕನಸು ಇಂದು(ಭಾನುವಾರ) ಈಡೇರುತ್ತಿದೆ. ಅದು ಸ್ಮಾರಕದ ಲೋಕಾರ್ಪಣೆ ಮೂಲಕ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಮಾರಕವನ್ನು ಜ.29 ರಂದು ಮಧ್ಯಾಹ್ನ 12.30ಕ್ಕೆ ಉದ್ಘಾಟಿಸುವರು.
ಡಾ.ವಿಷ್ಣುವರ್ಧನ್ ಅವರ ಪತ್ನಿ ಚಲನಚಿತ್ರ ಕಲಾವಿದೆ ಭಾರತಿ, ಅಳಿಯ ಅನಿರುದ್ಧ, ಜನಪ್ರತಿನಿಧಿಗಳು, ಕಲಾವಿದರು, ವಿಷ್ಣುವರ್ಧನ್ ಅವರ ಅಭಿಮಾನಿಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
3 ಎಕರೆ ಜಾಗದಲ್ಲಿ ಸ್ಮಾರಕ
ಡಾ.ವಿಷ್ಣುವರ್ಧನ್ ಸ್ಮಾರಕವು ಐದು ಎಕರೆ ಜಾಗದಲ್ಲಿದೆ. ಇದರಲ್ಲಿ ಮೂರು ಎಕರೆ ಜಾಗದಲ್ಲಿ ಸ್ಮಾರಕವನ್ನು ನಿರ್ಮಿಸಲಾಗಿದೆ. ಸ್ಮಾರಕ ನಿರ್ಮಾಣಕ್ಕೆ ಈವರೆಗೂ ಸುಮಾರು 11 ಕೋಟಿ ರೂ. ವೆಚ್ಚವಾಗಿದೆ. ಇನ್ನೂ ಮೂರೂವರೆ ಕೋಟಿ ರೂ. ಬಿಡುಗಡೆಗೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ವಿಷ್ಣುವರ್ಧನ್ ಸ್ಮಾರಕದಲ್ಲಿ ವಿಷ್ಣುವರ್ಧನ್ ಅವರು ನಟಿಸಿರುವ ಚಲನಚಿತ್ರಗಳು ಹಾಗೂ ಅವರ ಜೀವನ ಚರಿತ್ರೆಯ ಸುಮಾರು 680 ಛಾಯಾಚಿತ್ರಗಳು, ಪೋಸ್ಟರ್‌ಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಕ್ಯಾಂಟೀನ್ ಸೌಲಭ್ಯವೂ ಇಲ್ಲಿದೆ.
ವಿಷ್ಣುವರ್ಧನ್ ಅವರ 7 ಅಡಿ ಎತ್ತರದ ಕೃಷ್ಣ ಶಿಲೆಯಲ್ಲಿ ನಿರ್ಮಿಸಲಾಗಿರುವ ಪ್ರತಿಮೆಯೂ ಭಾನುವಾರ ಅನಾವರಣಗೊಳ್ಳಲಿದೆ.
Related Articles
ಡಾ.ವಿಷ್ಣುವರ್ಧನ್ ಅವರ ಪಾರ್ಥಿವ ಶರೀರದ ಸ್ವಲ್ಪ ಚಿತಾಭಸ್ಮವನ್ನು ಕಳಶದಲ್ಲಿ ಸಂಗ್ರಹಿಸಿಡಲಾಗಿದೆ. ವಿಷ್ಣು ಸ್ಮಾರಕದಲ್ಲಿ ಚಿತಾಭಸ್ಮವಿರುವ ಕಳಶದ ಮೇಲೆ ವಿಷ್ಣುವರ್ಧನ್ ಅವರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ರಾಜ್ಯ ಸರ್ಕಾರದ ಡಾ.ವಿಷ್ಣುವರ್ಧನ್ ಪ್ರತಿಷ್ಠಾನ ಈ ಸ್ಮಾರಕವನ್ನು ನಿರ್ವಹಿಸಲಿದೆ. ಮುಖ್ಯಮಂತ್ರಿಗಳೇ ಈ ಪ್ರತಿಷ್ಠಾನದ ಅಧ್ಯಕ್ಷರು. ಭಾರತಿ ವಿಷ್ಣುವರ್ಧನ್ ಹಾಗೂ ಅವರ ಅಳಿಯ ಅನಿರುದ್ಧ ಅವರು ಪ್ರತಿಷ್ಠಾನದ ಸದಸ್ಯರಾಗಿದ್ದಾರೆ.
ವಿಷ್ಣುವರ್ಧನ್ ಸ್ಮಾರಕದಲ್ಲಿ ಸುಮಾರು 250 ಆಸೀನರಾಗುವ ಸಾಮರ್ಥ್ಯದ ಸಭಾಂಗಣವನ್ನು ನಿರ್ಮಿಸಲಾಗಿದೆ. ವಿಷ್ಣುವರ್ಧನ್ ಸ್ಮಾರಕದಲ್ಲಿ ಕೇಂದ್ರ ಸರ್ಕಾರದ ಫಿಲಂ ಆ್ಯಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಶಾಖೆಯನ್ನು ಆರಂಭಿಸುವ ಪ್ರಯತ್ನಗಳು ನಡೆದಿವೆ. ಫಿಲಂ ಆ್ಯಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಶಾಖೆ ದಕ್ಷಿಣ ಭಾರತದಲ್ಲಿಯೇ ಇಲ್ಲ. ಈ ಕುರಿತು ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ ಅವರು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ರಾಜ್ಯ ಸರ್ಕಾರದ ಈ ಜಾಗದಲ್ಲಿ ಕೇಂದ್ರ ಸರ್ಕಾರದ ಈ ಸಂಸ್ಥೆಯನ್ನು ಆರಂಭಿಸಬೇಕೆಂಬುದು ಅನಿರುದ್ಧ ಅವರ ಪ್ರಯತ್ನವಾಗಿದೆ. ಸ್ಮಾರಕದಲ್ಲಿ ರಂಗ ತರಬೇತಿಗಳು, ನಾಟಕೋತ್ಸವ, ಚಲನಚಿತ್ರೋತ್ಸವ, ಸಿನಿಮಾ ತರಬೇತಿ ಶಿಬಿರಗಳನ್ನು ಆಯೋಜಿಸುವ ಉದ್ದೇಶ ಹೊಂದಲಾಗಿದೆ.
ವಾಹನ ಜಾಥಾ, ಕುಂಭ ಮೇಳ:
ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ ಹಿನ್ನೆಲೆಯಲ್ಲಿ ವಾಹನ ಜಾಥಾ, ಕುಂಭ ಮೇಳ, ದೀಪೋತ್ಸವ, ಜಾನಪದ ಮೇಳ, ಕಟೌಟ್ ಜಾತ್ರೆ ಹೀಗೆ ಇನ್ನು ಹಲವು ಕಾರ್ಯಕ್ರಮಗಳನ್ನ ಕೂಡ ವಿಷ್ಣುಸೇನಾ ಸಮಿತಿ ಸದಸ್ಯರು ಹಮ್ಮಿಕೊಂಡಿದ್ದಾರೆ. ಇಂದು ಬೆಳಗ್ಗೆ 6.30ರ ಹೊತ್ತಿಗೆ ಅಭಿಮಾನ್ ಸ್ಟುಡಿಯೋದಿಂದ ವಿಷ್ಣು ಅಭಿಮಾನಿಗಳು ಮೈಸೂರಿನತ್ತ ಸಾಗುತ್ತಾರೆ. ಮೈಸೂರಿನಲ್ಲಿ ಸೇರುವ ವಿಷ್ಣು ಎಲ್ಲ ಅಭಿಮಾನಿಗಳು ಮೈಸೂರಿನ ಕೋಟೆ ಆಂಜನೇಯ ಟೆಂಪಲ್ ನಿಂದ ವಿಷ್ಣು ಸ್ಮಾರಕದವರೆಗೂ ಮೆರವಣಿಗೆ ಹೊರಡಲಿದ್ದಾರೆ.
ಡಾ. ವಿಷ್ಣುವರ್ಧನ್ ಅವರ ಸ್ಮಾರಕವು ಉದ್ಘಾಟನೆಯಾಗುತ್ತಿರುವುದು ಬಹಳ ಸಂತೋಷವಾಗುತ್ತಿದೆ. ಹದಿಮೂರು ವರ್ಷಗಳ ಹೋರಾಟದ ಫಲ ಇದು. ರಾಜ್ಯ ಸರ್ಕಾರ ಡಾ. ವಿಷ್ಣುವರ್ಧನ್ ಪ್ರತಿಷ್ಠಾನ ಈ ಸ್ಮಾರಕವನ್ನು ನಿರ್ಮಿಸಿದೆ. ಇದು ಸರ್ಕಾರದ ಟ್ರಸ್ಟ್. ರಾಜ್ಯ ಸರ್ಕಾರದ್ದೇ ಮಾಲೀಕತ್ವ.
-ಅನಿರುದ್ಧ, ಕಲಾವಿದ, ವಿಷ್ಣುವರ್ಧನ್ ಅವರ ಅಳಿಯ
ಇದನ್ನೂ ಓದಿ: ಕ್ಯಾಮೇನಹಳ್ಳಿ ಶ್ರೀಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವಕ್ಕೆ 25 ಸಾವಿರಕ್ಕೂ ಅಧಿಕ ಭಕ್ತರ ದಂಡು