ಬೆಂಗಳೂರು: ಮನೆಯೂಟಕ್ಕೆ ಅನುಮತಿ ಕೋರಿ ನಟ ದರ್ಶನ್ (Darshan) ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ಮನೆಯ ಊಟ, ಹಾಸಿಗೆ ಹಾಗೂ ಬಟ್ಟೆಯನ್ನು ತರಿಸಲು ಅನುಮತಿ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಗುರುವಾರ (ಜು.25ರಂದು) ಅರ್ಜಿಯ ವಿಚಾರಣೆಯನ್ನು ನಡೆಸಿದ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯ ಮನೆ ಊಟ , ಹಾಸಿಗೆ, ಬಟ್ಟೆಯನ್ನು ತರುವಂತಿಲ್ಲ ಎನ್ನುವ ಮೂಲಕ ಅರ್ಜಿಯನ್ನು ವಜಾಗೊಳಿಸಿ ಆದೇಶ ನೀಡಿದೆ.
ದರ್ಶನ್ ಕೊಲೆ ಆರೋಪಿ ಆಗಿರುವುದರಿಂದ ಅವರಿಗೆ ಈ ಸೌಲಭ್ಯವನ್ನು ನೀಡಲು ಆಗುವುದಿಲ್ಲವೆಂದು ಕೋರ್ಟ್ ಹೇಳಿದೆ. ಜೈಲು ನಿಯಾಮವಳಿ 728ರ ಪ್ರಕಾರ ಕೊಲೆ ಆರೋಪಿಗಳಿಗೆ ಈ ಸೌಲಭ್ಯಗಳನ್ನು ನೀಡಲು ಸಾಧ್ಯವಿಲ್ಲವೆಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಜೈಲಿನಲ್ಲಿ ನೀಡುವ ಊಟದಿಂದ ಅತಿಸಾರ, ಅಜೀರ್ಣ ಸಮಸ್ಯೆ ಉಂಟಾಗುತ್ತಿದೆ ಹೀಗಾಗಿ ತಮಗೆ ಮನೆಯ ಊಟ ನೀಡಬೇಕೆಂದು ಅರ್ಜಿಯಲ್ಲಿ ಹೇಳಿದ್ದರು.
ಈ ಸಂಬಂಧ ಈಗಾಗಲೇ ದರ್ಶನ್ ಹೈಕೋರ್ಟ್‌ಗೂ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ಜು.29ರಂದು ನಿಗದಿಯಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್, ಪವಿತ್ರಾ ಗೌಡ ಸೇರಿ 17 ಮಂದಿಯನ್ನು ಆ.1ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.