ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಕೇಸಿನ 2ನೇ ಆರೋಪಿ ನಟ ದರ್ಶನ್ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು (ಸೋಮವಾರ) ಹೈಕೋರ್ಟ್‌ನಲ್ಲಿ ನಡೆಯಲಿದೆ.
ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ನ್ಯಾಯಪೀಠದಲ್ಲಿ ಈ ಅರ್ಜಿಯ ವಿಚಾರಣೆ ನಡೆಯಲಿದೆ. ಅ. 22ಕ್ಕೆ ಅರ್ಜಿ ವಿಚಾರಣೆಗೆ
ಬಂದಾಗ, ದರ್ಶನ್ ಆರೋಗ್ಯಕ್ಕೆ ಸಂಬಂಧಿಸಿದ ವೈದ್ಯಕೀಯ ವರದಿ ಸಲ್ಲಿಸುವಂತೆ ಬಳ್ಳಾರಿ ಜೈಲು ಅಧಿಕಾರಿಗಳಿಗೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ದರ್ಶನ್ ಬೆನ್ನುಹುರಿ ನೋವಿನಿಂದ ಬಳಲು ತ್ತಿದ್ದಾರೆ. ಅವರಿಗೆ ಬಳ್ಳಾರಿಯ “ವಿಜಯನಗರ ವೈದ್ಯಕೀಯ ಸಂಸ್ಥೆ’ನಲ್ಲಿ (ವಿಮ್ಸ್) ಎಂಆರ್‌ಐ ಸ್ಕ್ಯಾನ್ ಮಾಡಲಾಗಿದೆ. ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ.
ಹೀಗಾಗಿ, ವೈದ್ಯಕೀಯ ಮತ್ತು ಆರೋಗ್ಯದ ಕಾರಣಕ್ಕಾಗಿ ಜಾಮೀನು ನೀಡಬೇಕು ಎಂದು ದರ್ಶನ್ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ನ್ಯಾಯಾಲಯವನ್ನು ಕೋರಿದ್ದರು.
ಪ್ರಕರಣದಲ್ಲಿ ಪ್ರತ್ಯಕ್ಷ ದರ್ಶಿಗಳ ಹೇಳಿಕೆಯನ್ನು ತಡವಾಗಿ ದಾಖಲಿಸಿಕೊಳ್ಳಲಾಗಿದೆ. ಶವಪರೀಕ್ಷೆ ಯನ್ನು ಸಹ ವಿಳಂಬವಾಗಿ ಮಾಡಲಾಗಿದೆ. ಪ್ರತ್ಯಕ್ಷ ಸಾಕ್ಷಿದಾರರನ್ನು ತನಿಖಾಧಿಕಾರಿಗಳೇ ಸೃಷ್ಟಿ ಮಾಡಿದ್ದಾರೆ. ಪ್ರಕರಣದಲ್ಲಿ ಇತರೆ ಆರೋಪಿಗ ಳೊಂದಿಗೆ ತಾನು ಯಾವುದೇ ಒಳಸಂಚು ರೂಪಿಸಿಲ್ಲ. ತನಿಖೆ ಈಗಾಗಲೇ ಪೂರ್ಣಗೊಂಡಿದ್ದು, ಹೆಚ್ಚಿನ ತನಿಖೆ ಅಗತ್ಯ ಇಲ್ಲವಾಗಿದೆ. ಹಾಗೆಯೇ, ತಾನು ಬೆನ್ನುಹುರಿ ನೋವಿನಿಂದ ಬಳಲುತ್ತಿದ್ದು, ಅಗತ್ಯ ಚಿಕಿತ್ಸೆ ಪಡೆಯಲು ಜಾಮೀನು ಮಂಜೂರು ಮಾಡಬೇಕು ಎಂದು ದರ್ಶನ್ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.