ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿದಂತೆ 15 ಮಂದಿಯನ್ನು ಪೊಲೀಸರು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಕೊಲೆಯಾಗುವ ಸಂದರ್ಭದಲ್ಲಿ ಪವಿತ್ರಾ ಗೌಡ, ದರ್ಶನ್ ಕೂಡ ಇದ್ದರು ಎನ್ನಲಾಗಿದ್ದು, ಈ ಪ್ರಕರಣದಲ್ಲಿ ಪವಿತ್ರಾ ಎ1, ದರ್ಶನ್ ಎ2 ಆಗಿದ್ದಾರೆ.
ದರ್ಶನ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವ ವಿಚಾರ ಅವರ ಕುಟುಂಬದ ಮೇಲೆ ಕರಿನೆರಳಿನಂತೆ ಪರಿಣಾಮ ಬೀರಿದೆ. ಪತ್ನಿ ವಿಜಯಲಕ್ಷ್ಮೀ ಸೋಶಿಯಲ್ ಮೀಡಿಯಾದಿಂದಲೇ ದೂರವಾಗಿದ್ದಾರೆ. ಇದೀಗ ನಟ ದರ್ಶನ್ ಹೆಚ್ಚಾಗಿ ಪ್ರೀತಿ ಮಾಡುವ ಮಗ ವಿನೀಶ್ ತೂಗುದೀಪ ತಂದೆಯ ಬಂಧನದಿಂದ ಬೇಸರಗೊಂಡು ಪೋಸ್ಟ್ ಮಾಡಿದ್ದಾರೆ.
ವಿನೀಶ್ ಪೋಸ್ಟ್ ನಲ್ಲಿ ಏನಿದೆ?:
“ನನ್ನ ಅಪ್ಪನ ಬಗ್ಗೆ ಕೆಟ್ಟ ಹಾಗೂ ಆಶ್ಲೀಲ ಭಾಷೆಯಲ್ಲಿ ಕಮೆಂಟ್ ಮಾಡಿ ನಿಂದಿಸುತ್ತಿರುವ ನಿಮ್ಮಗೆಲ್ಲರಿಗೆ ಧನ್ಯವಾದ. ನಾನು 15 ವರ್ಷದ ಬಾಲಕನಾಗಿರಬಹುದು ಆದರೆ ನನಗೂ ಭಾವನೆಗಳಿವೆ ಎನ್ನುವುದನ್ನು ನೀವೆಲ್ಲ ಪರಿಗಣಿಸಲೇ ಇಲ್ಲ. ಇಂಥ ಕಷ್ಟದ ಸಮಯದಲ್ಲಿ ನನ್ನ ತಂದೆ -ತಾಯಿಗೆ ನಿಮ್ಮೆಲ್ಲರ ಬೆಂಬಲದ ಅಗತ್ಯವಿದೆ. ನೀವು ನನಗೆ ನಿಂದಿಸಿ ಕಮೆಂಟ್ ಮಾಡುವುದರಿಂದ ಯಾವುದೇ ಬದಲಾವಣೆ ಆಗಲು ಸಾಧ್ಯವಿಲ್ಲ” ಎಂದು ದುಃಖದಲ್ಲಿ ತನ್ನ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಒಬ್ಬ ಖ್ಯಾತ ನಟನಿಂದ ಅಭಿಮಾನಿಯೊಬ್ಬ ಭೀಕರವಾಗಿ ಹತ್ಯೆ ಆಗಿರುವ ವಿಚಾರ ಕೇಳಿ ಕರುನಾಡು ಶಾಕ್ ಆಗಿದೆ. ದರ್ಶನ್ ಗೆಳತಿ ಪವಿತ್ರಾ ಗೌಡ ಅವರಿಗೆ ಆಶ್ಲೀಲ ಮೆಸೇಜ್ ಮಾಡಿದ ಎನ್ನುವ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎನ್ನುವವನನ್ನು ಅಪಹರಿಸಿ, ಶೆಡ್ ವೊಂದರಲ್ಲಿ ಚಿತ್ರಹಿಂಸೆ ಕೊಲೆಗೈದು ಶವವನ್ನು ಮೋರಿಗೆ ಎಸೆಯಲಾಗಿತ್ತು.
ಘಟನೆ ಬಳಿಕ ದರ್ಶನ್ ವಿರುದ್ಧ ರಾಜ್ಯದೆಲ್ಲೆಡೆ ಆಕ್ರೋಶ ಭುಗಿಲೆದ್ದಿದೆ. ಚಿತ್ರರಂಗದಿಂದ ಮೇಲೆ ದರ್ಶನ್ ಅವರನ್ನು ಬ್ಯಾನ್ ಮಾಡಬೇಕೆನ್ನುವ ಒತ್ತಡ ಕೂಡ ಕೇಳಿಬಂದಿದೆ. ಈ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರುವುದಾಗಿ ಫಿಲ್ಮ್ ಚೇಂಬರ್ ಹೇಳಿದೆ.