ಬೆಂಗಳೂರು : ನಿನ್ನೆಯಷ್ಟೆ ( ಫೆ.16 ) ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್, ತಮ್ಮ ಜನ್ಮದಿನಕ್ಕೆ ಶುಭ ಕೋರಿದ ಹಾಗೂ ಹುಟ್ಟುಹಬ್ಬದ ನಿಮಿತ್ತ ದಾನ ಧರ್ಮ ಮಾಡಿದ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.
ಅಭಿಮಾನಿಗಳ ಅಚ್ಚುಮೆಚ್ಚಿನ ದಾಸ ಕಳೆದ ಕೆಲ ವರ್ಷಗಳಿಂದ ಅದ್ಧೂರಿ ಬರ್ತ್ ಡೇ ಆಚರಣೆಗೆ ವಿದಾಯ ಹೇಳಿದ್ದಾರೆ. ತಮ್ಮ ಹುಟ್ಟುಹಬ್ಬಕ್ಕೆ ಖರ್ಚು ಮಾಡುವ ಹಣ ಒಳ್ಳೆಯ ಕಾರ್ಯಗಳಿಗೆ ಸದ್ಭಳಕೆ ಮಾಡಿ. ಹಾಗೂ ಈ ಹಣದಲ್ಲಿ ಸಾಧ್ಯವಾದಷ್ಟು ಅನಾಥಾಶ್ರಮ, ವೃದ್ದಾಶ್ರಮಗಳಿಗೆ ದಾನ ಮಾಡಿ ಎಂದು ದಾಸ ಕರೆ ಕೊಟ್ಟಿದ್ದಾರೆ. ದರ್ಶನ್ ಅವರ ಈ ಮಾತು ಪರಿಪಾಲಿಸುತ್ತಿರುವ ಅಭಿಮಾನಿಗಳು, ಈ ಬಾರಿಯೂ ವಿದ್ಯಾರ್ಥಿಗಳಿಗೆ ಪೆನ್ನು-ಪುಸ್ತಕ ಹಾಗೂ ಅನಾಥಾಶ್ರಮಕ್ಕೆ ಸಾಕಷ್ಟು ದಾನ ನೀಡಿದ್ದಾರೆ. ಅದರ ಜತೆಗೆ ತುಮಕೂರಿನ ಸಿದ್ದಗಂಗಾ ಮಠದಲ್ಲಿ ನಿತ್ಯ ನಡೆಯುವ ಅನ್ನದಾಸೋಹಕ್ಕೂ ಸೇವೆ ಮಾಡಿದ್ದಾರೆ.
ತಮ್ಮ ಅಭಿಮಾನಿಗಳ ಈ ಕಾರ್ಯಕ್ಕೆ ದರ್ಶನ ಅವರ ಹೃದಯ ತುಂಬಿ ಬಂದಿದೆ. ಇಂದು ಟ್ವಿಟರ್ ನಲ್ಲಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿರುವ ಅವರು, ಹುಟ್ಟುಹಬ್ಬದ ಪ್ರಯುಕ್ತ ಅನೇಕ ಅನಾಥಾಶ್ರಮ ಹಾಗೂ ವೃದ್ಧಾಶ್ರಮಗಳಲ್ಲಿ ತಮ್ಮ ಕೈಲಾದ ಸೇವೆ ಮಾಡಿದ ಅಭಿಮಾನಿಗಳಿಗೆ ತನ್ನ ಅಭಿನಂದನೆಗಳು. ನಿಮ್ಮ ಪ್ರೀತಿ ವಿಶ್ವಾಸಕ್ಕೆ ಸದಾ ಚಿರಋಣಿ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ದರ್ಶನ್ ಅವರ ರಾಬರ್ಟ್ ಸಿನಿಮಾ ಬರುವ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ. ನಿನ್ನೆಯಷ್ಟೆ ಅವರ ಹುಟ್ಟುಹಬ್ಬದ ಉಡುಗೊರೆಯಾಗಿ ಬಿಡುಗಡೆಯಾಗಿರುವ ಈ ಚಿತ್ರದ ಟ್ರೇಲರ್ ದಾಖಲೆ ಪ್ರಮಾಣದಲ್ಲಿ ಅಮೋಘ ವೀಕ್ಷಣೆಯಾಗುತ್ತಿದೆ.