ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆಯ ತೀರ್ಪಿನ ಆದೇಶವನ್ನು 57ನೇ ಸಿಸಿಎಚ್ ನ್ಯಾಯಾಲಯವು ಆಗಸ್ಟ್ 31ಕ್ಕೆ ಕಾಯ್ದಿರಿಸಿದೆ. ಅಂದು ಪವಿತ್ರಾ ಗೌಡಗೆ ಜಾಮೀನು ಅಥವಾ ಜೈಲು ಎಂಬುದು ನಿರ್ಧಾರವಾಗಲಿದೆ.
ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡ ಜಾಮೀನು ಅರ್ಜಿ ಸಲ್ಲಿಸಿದ್ದ ಬೆನ್ನಲ್ಲೇ ಇತರ ಆರೋಪಿಗಳಾದ ಅನುಕುಮಾರ್, ವಿನಯ್, ಕೇಶವಮೂರ್ತಿ ಸಹ ಜಾಮೀನಿಗೆ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಆರೋಪಿಗಳಾದ ಪವಿತ್ರಾ ಗೌಡ ಹಾಗೂ ಅನುಕುಮಾರ್ ಜಾಮೀನು ಅರ್ಜಿ ತೀರ್ಪನ್ನು ಆ. 31ಕ್ಕೆ ಕಾಯ್ದಿರಿಸಿದರೆ, ವಿನಯ್ ಹಾಗೂ ಕೇಶವಮೂರ್ತಿ ಜಾಮೀನು ಆದೇಶವನ್ನು ಸೆ. 2ಕ್ಕೆ ಕಾಯ್ದಿರಿಸಲಾಗಿದೆ.
ತನಿಖೆಯು ಅಂತಿಮ ಹಂತದಲ್ಲಿದ್ದು, 10 ದಿನಗಳ ಒಳಗಾಗಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸುವ ಸಾಧ್ಯತೆಗಳಿವೆ ಎಂದು ಎಸ್‌ಪಿಪಿ ನ್ಯಾಯಾಲಯದ ಗಮನಕ್ಕೆ ತಂದರು.
ತನಿಖಾಧಿಕಾರಿಗಳ ಪರ ಎಸ್‌ಪಿಪಿ ಪ್ರಸನ್ನ ಕುಮಾರ್ ವಾದ ಮಂಡಿಸಿ, ಮಹಿಳೆ ಎಂಬ ಒಂದೇ ಕಾರಣಕ್ಕೆ ಆಕೆಗೆ ಜಾಮೀನು ನೀಡುವುದು ಸರಿಯಲ್ಲ. ಇತರ ಆರೋಪಿಗಳೊಂದಿಗೆ ಪವಿತ್ರಾ ತೆರಳಿ ಮೃತನ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದರು. ಇವರ ಚಪ್ಪಲಿಯಲ್ಲಿ ರೇಣುಕಾಸ್ವಾಮಿ ರಕ್ತದ ಗುರುತು ಪತ್ತೆಯಾಗಿದೆ ಎಂದರು.
ಪವಿತ್ರಾ ಗೌಡ ಪರ ವಕೀಲ ಟಾಮಿ ಸೆಬಾಸ್ಟಿಯನ್ ವಾದ ಮಂಡಿಸಿ, ಪವಿತ್ರಾ ಗೌಡ ಕೂಡ ಮಹಿಳೆಯಾಗಿದ್ದು ಅಪ್ರಾಪ್ತ ವಯಸ್ಸಿನ ಮಗಳಿದ್ದಾಳೆ. ಆಕೆಗೆ ಕ್ರಿಮಿನಲ್ ಹಿನ್ನೆಲೆ ಇಲ್ಲದಿರುವುದನ್ನು ಪರಿಗಣಿಸಿ ಜಾಮೀನು ನೀಡಬೇಕು ಎಂದು ವಾದಿಸಿದರು.