Advertisement

ಪಿಸ್ತೂಲ್‌ ಮಾರಲು ಯತ್ನಿಸಿದ ನಟ ಸೆರೆ

12:20 PM Nov 05, 2018 | Team Udayavani |

ಬೆಂಗಳೂರು: ಅಕ್ರಮವಾಗಿ ಪಿಸ್ತೂಲ್‌ ಮತ್ತು ಗುಂಡುಗಳನ್ನು ಮಾರಾಟ ಮಾಡಲು ಯತ್ನಿಸಿದ ಒಬ್ಬ ಸಿನಿಮಾ ನಟ ಸೇರಿ ನಾಲ್ವರನ್ನು ಸಿಸಿಬಿಯ ಸಂಘಟಿತ ಅಪರಾಧ ನಿಯಂತ್ರಣ ದಳದ ಅಧಿಕಾರಿಗಳು ಬಂಧಿಸಿದ್ದಾರೆ.

Advertisement

“ಸರ್ಕಾರ್‌’ ಎಂಬ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿರುವ ಜಗದೀಶ್‌ ಎಸ್‌. ಹೊಸಮಠ (31),  ಎಚ್‌ಎಎಲ್‌ ನಿವಾಸಿ ಮೊಹಮ್ಮದ್‌ ನಿಜಾಮ್‌ (25), ಜಿ.ಎಂ.ಪಾಳ್ಯದ ಬಿ.ಜಿ.ಸತೀಶ್‌ ಕುಮಾರ್‌ (44), ಕೆ.ನಾರಾಯಣಪುರದ ಸೈಯದ್‌ ಸಮೀರ್‌ ಅಹಮ್ಮದ್‌ (32) ಬಂಧಿತರು.

ಆರೋಪಿಗಳಿಂದ 2 ಪಿಸ್ತೂಲ್‌ ಹಾಗೂ 21 ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು. ಆರೋಪಿಗಳ ಪೈಕಿ ಮೊಹಮ್ಮದ್‌ ನಿಜಾಮ್‌ ಮತ್ತು ಜಗದೀಶ್‌ ಧಾರವಾಡದಿಂದ ಅಕ್ರಮವಾಗಿ ಪಿಸ್ತೂಲ್‌ ಮತ್ತು ಗುಂಡುಗಳನ್ನು ತಂದು ಎಚ್‌ಎಎಲ್‌ನ ಬೆಮೆಲ್‌ ಟೌನ್‌ಶಿಫ್ ಕ್ವಾಟ್ರರ್ಸ್‌ ಬಳಿ ಮಾರಾಟಕ್ಕೆ ಯತ್ನಿಸಿದ್ದರು.

ಈ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಕೆಲ ದಿನಗಳ ಹಿಂದೆ ಇಬ್ಬರನ್ನು ಬಂಧಿಸಲಾಗಿತ್ತು. ಇದೀಗ ಈ ಆರೋಪಿಗಳ ಮಾಹಿತಿಯನ್ನಾಧರಿಸಿ ಇತರೆ ಇಬ್ಬರು ಆರೋಪಿಗಳಾದ ಸತೀಶ್‌ ಕುಮಾರ್‌ ಮತ್ತು ಸೈಯದ್‌ ಸಮೀರ್‌ ಅಹಮ್ಮದ್‌ನನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.

ಹುಬ್ಬಳ್ಳಿ ಮೂಲದ ಜಗದೀಶ್‌ ನಾಯಕ ನಟನಾಗಿ ನಟಿಸುತ್ತಿರುವ “ಸರ್ಕಾರ್‌’ ಎಂಬ ಸಿನಿಮಾ ಇತ್ತೀಚೆಗಷ್ಟೇ ಸೆಟ್ಟೇರಿದೆ. ಈತ ಇತರೆ ಮೂವರು ಆರೋಪಿಗಳ ಜತೆ ಹಣಕಾಸಿನ ವ್ಯವಹಾರ ಹೊಂದಿದ್ದಾನೆ. ಈ ಹಿನ್ನೆಲೆಯಲ್ಲಿ ಸೈಯದ್‌ ಮತ್ತು ಮೊಹಮ್ಮದ್‌ ನಿಜಾಮ್‌ ಸೂಚನೆ ಮೇರೆಗೆ ಕೆಲ ದಿನಗಳ ಹಿಂದಷ್ಟೇ ಹುಬ್ಬಳ್ಳಿಗೆ ಹೋಗಿದ್ದ ಜಗದೀಶ್‌, ಧಾರವಾಡದ ಮುನ್ನಾ ಎಂಬಾತನಿಂದ ಪಿಸ್ತೂಲ್‌ ಮತ್ತು ಗುಂಡುಗಳನ್ನು ನಗರಕ್ಕೆ ತಂದಿದ್ದ.

Advertisement

ವಾರಾಣಾಸಿಯ ಪಿಸ್ತೂಲ್‌: ಆದರೆ, ಆರೋಪಿಗಳ ಪ್ರಾಥಮಿಕ ವಿಚಾರಣೆ ವೇಳೆ ಪಿಸ್ತೂಲ್‌ ಮತ್ತು ಗುಂಡುಗಳನ್ನು ಉತ್ತರಪ್ರದೇಶದ ವಾರಾಣಾಸಿಯಿಂದ ತರಲಾಗಿದೆ ಎಂಬ ವಿಚಾರ ತಿಳಿದು ಬಂದಿದೆ. ಇದನ್ನು ಧಾರವಾಡದ ಮುನ್ನಾ ಎಂಬಾತ ಖರೀದಿಸಿ, ಬಳಿಕ ಆರೋಪಿಗಳಿಗೆ ಮಾರಟ ಮಾಡಿದ್ದಾನೆ. ಈ ಪಿಸ್ತೂಲ್‌ ಮತ್ತು ಗುಂಡುಗಳ ಖರೀದಿಗೆ ರಾಜಕೀಯ ಪಕ್ಷದ ಮುಖಂಡರೊಬ್ಬರು ಹಣ ಹೂಡಿಕೆ ಮಾಡಿದ್ದಾರೆ ಎಂದು ಗೊತ್ತಾಗಿರುವುದಾಗಿ ಪೊಲೀಸರು ಹೇಳಿದರು.

ರಕ್ಷಣೆಗಾಗಿ ಪಿಸ್ತೂಲ್‌: ಆರೋಪಿಗಳ ಪೈಕಿ ಸೈಯದ್‌ ಸಮೀರ್‌ ಅಹಮ್ಮದ್‌ 2016ರ ನೋಟು ಅಮಾನ್ಯಿàಕರಣ ವೇಳೆ 500 ಮತ್ತು 1000 ರೂ. ಮುಖ ಬೆಲೆಯ ನೋಟುಗಳನ್ನು ಬದಲಾವಣೆ ಮಾಡಿಕೊಡುವುದಾಗಿ ಹೇಳಿ ಹತ್ತಾರು ಮಂದಿಗೆ 2 ಕೋಟಿ ರೂ.ಗೂ ಅಧಿಕ ವಂಚಿಸಿದ್ದಾನೆ. ಈ ಸಂಬಂಧ ಕೊತ್ತನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿತ್ತು. 

ನಂತರ ಬಿಡುಗಡೆಯಾಗಿ ಬಂದ ಆರೋಪಿಗೆ ಹಣ ಕೊಟ್ಟ ಕೆಲ ವ್ಯಕ್ತಿಗಳು ಈತನಿಗೆ ಹತ್ಯೆಗೈಯುವುದಾಗಿ ಬೆದರಿಕೆಯೊಡ್ಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿ ರಕ್ಷಣೆಗಾಗಿ ಪಿಸ್ತೂಲ್‌ ಮತ್ತು ಗುಂಡುಗಳನ್ನು ಖರೀದಿಸಿದ್ದಾನೆ.  ಈತ ರೈಸ್‌ಫ‌ುಲ್ಲಿಂಗ್‌ ದಂಧೆ ಸೇರಿದಂತೆ ಕೆಲ ಕಾನೂನು ಬಾಹಿರ ಚಟುವಟಿಕೆಗಳಲ್ಲಿಯೂ ತೊಡಗಿದ್ದಾನೆ ಎಂದು ಪೊಲೀಸರು ಹೇಳಿದರು.

ಗಿಫ್ಟ್ ಬಾಕ್ಸ್‌ನಲ್ಲಿತ್ತು ಪಿಸ್ತೂಲ್‌: ಧಾರವಾಡದಿಂದ ಬೆಂಗಳೂರಿಗೆ ತಂದ ಗಿಫ್ಟ್ ಬಾಕ್ಸ್‌ನಲ್ಲಿ ಪಿಸ್ತೂಲ್‌ ಮತ್ತು ಗುಂಡುಗಳಿವೆ ಎಂಬುದು ನಟ ಜಗದೀಶ್‌ಗೆ ಗೊತ್ತಿಲ್ಲ. ಆರೋಪಿ ಸಮೀರ್‌ ಸೂಚನೆ ಮೇರೆಗೆ ಪಿಸ್ತೂಲ್‌ ಮತ್ತು ಗುಂಡುಗಳನ್ನು ಗಿಫ್ಟ್ಬಾಕ್ಸ್‌ನಲ್ಲಿ ಪ್ಯಾಕ್‌ ಮಾಡಿದ್ದ ಧಾರವಾಡದ ಮುನ್ನಾ, ಜಗದೀಶ್‌ಗೆ ಕೊಡುವ ವೇಳೆ ಇದನ್ನು ಯಾವುದೇ ಸಂದರ್ಭದಲ್ಲಿ ತೆರೆಯದಂತೆ ಸೂಚಿಸಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ ಎಂದು ಸಿಸಿಬಿಯ ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next