Advertisement

ಬಿಜೆಪಿಗೆ ಕಾರ್ಯಕರ್ತರೇ ಜೀವಾಳ: ಬಿ.ಎಲ್‌. ಸಂತೋಷ

06:11 PM Jan 30, 2023 | Team Udayavani |

ಬಾಗಲಕೋಟೆ: ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ, ಪಕ್ಷದ ಪ್ರಸ್ತುತ ಸ್ಥಿತಿಗತಿ ಹಾಗೂ ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳಿದ್ದರೆ ಅವುಗಳನ್ನು ಬಗೆಹರಿಸಿ, ಚುನಾವಣೆಗೆ ಪಕ್ಷ ಸಿದ್ಧಗೊಳಿಸುವ ಉದ್ದೇಶದೊಂದಿಗೆ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾದ ಬಳಿಕ ಇದೇ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ್ದ ಬಿ.ಎಲ್‌. ಸಂತೋಷ ಅವರು, ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳ ಎಂಬ ಸಂದೇಶ ನೀಡುವ ಮೂಲಕ ಕಾರ್ಯಕರ್ತರನ್ನು ಬಿಟ್ಟುಕೊಡಲಿಲ್ಲ.

Advertisement

ನವನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸರಣಿ ಸಭೆ ನಡೆಸಿದ ಬಿ.ಎಲ್‌. ಸಂತೋಷ ಅವರು, ರಾಷ್ಟ್ರ ನಿರ್ಮಾಣಕ್ಕೆ ಬಿಜೆಪಿ ಅವಶ್ಯ, ಸರ್ವ ಮತಗಳು ಬಿಜೆಪಿಮಯವಾಗಬೇಕು. ಬಿಜೆಪಿ ಸರ್ವ ಜನಾಂಗದ ಶಾಂತಿಯ ತೋಟ. ಸಮರ್ಥ ಭಾರತ ನಿರ್ಮಾಣ ನಮ್ಮ ಕನಸು. ಅಭಿವೃದ್ಧಿ ದೃಷ್ಟಿಯಿಂದ ಪಕ್ಷ ಬೇಧ ಮರೆತು ಬಿಜೆಪಿಯು ಕೆಲಸ ಮಾಡಿದೆ. ಈ ನಿಟ್ಟಿನಲ್ಲಿ ಪಕ್ಷ ಸೇರ್ಪಡೆ ಯಾವ ಮಟ್ಟಿಗೆ ಇರಬೇಕೆಂದರೆ, ವಿರೋಧ ಪಕ್ಷದಲ್ಲಿ ಯಾರೂ ಉಳಿಯಬಾರದು.ಅಷ್ಟರ ಮಟ್ಟಿಗೆ ವ್ಯಾಪಕವಾಗಿ, ಪಕ್ಷಕ್ಕೆ ಕರೆತರುವ ಕೆಲಸ ನಡೆಯಬೇಕು. ಬಹುಮತದಿಂದ ಸರ್ವ ಮತವನ್ನು ಗಮನದಲ್ಲಿರಿಸಿಕೊಂಡು ಸಂಘಟನೆಗೆ ಮುಂದಾಗಬೇಕು ಎಂದು ಎಂದು ತಿಳಿಸಿದರು.

ಕಾರ್ಯಕರ್ತರೇ ಜೀವಾಳ: ಶಕ್ತಿ ಕೇಂದ್ರಗಳ ಪ್ರಮುಖರ ಸಭೆಯಲ್ಲಿ ಮಾತನಾಡಿ, ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳ. ಎಷ್ಟೇ ದೊಡ್ಡವರಿರಲಿ, ಸಣ್ಣವರಿರಲಿ. ಪ್ರತಿಯೊಬ್ಬ ಕಾರ್ಯಕರ್ತರ ಮಾತನ್ನೂ ಹಿರಿಯರಾದವರು ಕೇಳಿಸಿಕೊಳ್ಳಬೇಕು. ಸಾಮಾನ್ಯ ಕಾರ್ಯಕರ್ತರೂ ಪಕ್ಷದ ಕಚೇರಿಗೆ ಬಂದು, ಪಕ್ಷದ ಕಾರ್ಯ ಚಟುವಟಿಕೆಯಲ್ಲಿ ಭಾಗವಹಿಸಬೇಕು. ಮುಂಬರುವ ಚುನಾವಣೆಯಲ್ಲಿ ಜಿಲ್ಲೆಯ ಅಷ್ಟೂ ಕ್ಷೇತ್ರಗಳಲ್ಲಿ ಪಕ್ಷ ಗೆಲ್ಲಬೇಕು. ಈ ನಿಟ್ಟಿನಲ್ಲಿ ಪ್ರತಯೊಬ್ಬರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.

ಏಳೂ ಕ್ಷೇತ್ರ ಗೆಲ್ಲಬೇಕು: ಇದಕ್ಕೂ ಮುಂಚೆ ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿ, ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳು ಜನ ಕಲ್ಯಾಣಕ್ಕಾಗಿ ಹಲವಾರು ಯೋಜನೆ ಜಾರಿಗೊ‌ಳಿಸಿವೆ. ಪ್ರತಿಯೊಂದು ಕುಟುಂಬಕ್ಕೆ ಒಂದಿಲ್ಲೊಂದು ಯೋಜನೆ ತಲುಪಿವೆ. ಈ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸಬೇಕು. ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ ಏಳೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಬೇಕು ಎಂದರು. ಸರ್ಕಾರದ ಯೋಜನೆಗಳ ಲಾಭ ಪಡೆದ ಫಲಾನುಭವಿಗಳನ್ನು ಗುರುತಿಸಿ
ಅವರ ಮತಗಳನ್ನು ಪಕ್ಷಕ್ಕೆ ಬರುವಂತೆ ಮಾಡಬೇಕು.

ಬಿಜೆಪಿಗೆ ಬಾಗಲಕೋಟೆಗೆ ಭದ್ರಕೋಟೆ. ಕಳೆದ ಬಾರಿ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಐದು ಕ್ಷೇತ್ರಗಳಲ್ಲಿ ಪಕ್ಷ ಗೆದ್ದಿದೆ. ಮುಂದಿನ ಬಾರಿ ಅಷ್ಟೂ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವ ಸಾಧಿಸಬೇಕು. ನಿಟ್ಟಿನಲ್ಲಿ ಕಾರ್ಯಕರ್ತರು, ಪದಾಧಿಕಾರಿಗಳು, ಪ್ರಮುಖರು ಒಗ್ಗಟ್ಟಿನ ಕೆಲಸ ಮಾಡಬೇಕು ಎಂದು ತಿಳಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿ, ಕೇಂದ್ರ-ರಾಜ್ಯ ಸರ್ಕಾರಗಳ ಸಾಧನೆ ಮನೆ-ಮನೆಗೆ ತಲುಪಿಸಬೇಕು. ಪ್ರಧಾನಿ ನರೇಂದ್ರ
ಮೋದಿ ವಿಶ್ವದ ನಾಯಕರಾಗಿ ಹೊರ ಹೊಮ್ಮಿದ್ದಾರೆ.

Advertisement

ಅವರ ಶಕ್ತಿ, ವಿಶ್ವದೆಲ್ಲೆಡೆ ಹರಡಿದೆ. ಇಡೀ ವಿಶ್ವ, ಭಾರತ ದೇಶವನ್ನು ನೋಡುವ ದೃಷ್ಠಿಯೇ ಬದಲಾಗಿದೆ. ಈ ಕುರಿತು ಜನರಿಗೆ ತಿಳಿಸಿ ಹೇಳಬೇಕು. ನಮ್ಮ ಸರ್ಕಾರ, ಜಿಲ್ಲೆಗೆ ನೀಡಿದ ಯೋಜನೆಗಳ ಕುರಿತೂ ಪ್ರಚಾರ ಮಾಡಬೇಕು ಎಂದು ಕೋರಿದರು.

ಸಚಿವರಾದ ಗೋವಿಂದ ಕಾರಜೋಳ, ಮುರುಗೇಶ ನಿರಾಣಿ, ಸಂಸದ ಪಿ.ಸಿ.ಗದ್ದಿಗೌಡರ, ಶಾಸಕರಾದ ಡಾ|ವೀರಣ್ಣ ಚರಂತಿಮಠ, ದೊಡ್ಡನಗೌಡ ಪಾಟೀಲ, ಸಿದ್ದು ಸವದಿ, ವಿಧಾನಪರಿಷತ್‌ ಸದಸ್ಯರಾದ ಪಿ.ಎಚ್‌. ಪೂಜಾರ, ಹಣಮಂತ ನಿರಾಣಿ, ಮಾಜಿ ಶಾಸಕರಾದ ಶ್ರೀಕಾಂತ ಕುಲಕರ್ಣಿ, ಎಂ.ಕೆ. ಪಟ್ಟಣಶೆಟ್ಟಿ, ಜಿ.ಎಸ್‌. ನ್ಯಾಮಗೌಡ, ಅಭಯ ಪಾಟೀಲ, ಬಿಜೆಪಿ ಬೆಳಗಾವಿ ವಿಭಾಗ ಸಹ ಪ್ರಮುಖ ಬಸವರಾಜ ಯಂಕಂಚಿ, ಪ್ರಕಾಶ ಅಕ್ಕಲಕೋಟ, ಚಂದ್ರಶೇಖರ ಕವಟಗಿ
ಮುಂತಾದವರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next