Advertisement

ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಕ್ರಮ: ಈಶ್ವರಪ್ಪ

05:29 PM Aug 04, 2018 | |

ಶಿವಮೊಗ್ಗ: ಶಿಕ್ಷಣ ಸಚಿವರಾಗಲು ಯಾರೂ ಮುಂದೆ ಬರುವುದಿಲ್ಲ. ಇದೊಂದು ಖಾತೆ ಬಿಟ್ಟು ಬೇರೆ ಯಾವುದಾದರೂ ಕೊಡಿ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ರಾಜ್ಯದ ದುರಂತ. ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಸಿಗದೆ ಶೈಕ್ಷಣಿಕ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ ಎಂದು ಶಾಸಕ ಕೆ.ಎಸ್‌. ಈಶ್ವರಪ್ಪ ತಿಳಿಸಿದರು.

Advertisement

ನಗರದ ಅಂಬೇಡ್ಕರ್‌ ಭವನದಲ್ಲಿ ರಾಜ್ಯ ಪ್ರೌಢಶಾಲೆ ಸಹ ಶಿಕ್ಷಕರ ಸಂಘದ ತಾಲೂಕು ಶಾಖೆ ವತಿಯಿಂದ ನಡೆದ ಪ್ರಸ್ತುತ ಶೈಕ್ಷಣಿಕ ಸವಾಲುಗಳು ಮತ್ತು ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮಪಡಿಸುವ ಬಗ್ಗೆ ಶೈಕ್ಷಣಿಕ ಕಾರ್ಯಾಗಾರ ಹಾಗೂ ನಿವೃತ್ತ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಪರಿಷತ್‌ನಲ್ಲಿ ಚರ್ಚೆ ಮಾಡುವಾಗ ಅಧಿಕಾರಿಗಳಿದ್ದರೆ ಸಚಿವರು ಇರಲ್ಲ. ಸಚಿವರು ಇದ್ದರೆ ಅಧಿಕಾರಿಗಳಿರಲ್ಲ. ಆಶ್ವಾಸನೆ, ಚಪ್ಪಾಳೆಗಳಿಂದ ಯಾವುದೇ ಸಮಸ್ಯೆ ಬಗೆಹರಿಯಲ್ಲ. ಮೂರ್‍ನಾಲ್ಕು ತಿಂಗಳ ನಂತರ ನಮ್ಮದೇ ಸರಕಾರ ಬರುತ್ತೆ. ಆಗ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಶೈಕ್ಷಣಿಕ ಸಮಸ್ಯೆಗಳ ನಿವಾರಣೆಗೆ ತಕ್ಕಂತೆ ಯೋಜನೆ ರೂಪಿಸಬೇಕು. ವಿದ್ಯಾರ್ಥಿಗಳಿಗೆ ಎಷ್ಟೇ ಸೌಲಭ್ಯ ಕೊಟ್ಟರೂ ಅವರು ಓದುತ್ತಿಲ್ಲ. ಮಕ್ಕಳಿಗೆ ಬಲವಂತದ ಮಾಘ ಸ್ನಾನ ಮಾಡಿಸಲಾಗುತ್ತಿದೆ ಎಂದು ಟೀಕಿಸಿದರು.

ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌ ಮಾತನಾಡಿ, ಶಿಕ್ಷಕನ ಬಳಿ ಶಿಕ್ಷಕನ ಕೆಲಸ ಮಾಡದೆ ಉಳಿದೆಲ್ಲಾ ಕೆಲಸಗಳನ್ನು ಮಾಡಿಸಲಾಗುತ್ತಿದೆ. ಅವೈಜ್ಞಾನಿಕ ವರ್ಕ್‌ಲೋಡ್‌ಗಳನ್ನು ಶಿಕ್ಷಕನ ಮೇಲೆ ಹೇರಲಾಗುತ್ತಿದೆ. ಅಡುಗೆ ಮಾಡಬೇಕು. ಟಾಯ್ಲೆಟ್‌ ಕ್ಲೀನ್‌ ಮಾಡಬೇಕು. ರೇಷನ್‌ ತರಬೇಕು. ಪುಸ್ತಕ ತರಲು ಬಿಇಒ ಕಚೇರಿಗಳಿಗೆ ಅಲೆಯಬೇಕು. 

Advertisement

ಚುನಾವಣೆ ನಡೆಸಲೂ ಶಿಕ್ಷಕರು ಬೇಕು. ಪರಿಸ್ಥಿತಿ ಹೀಗಿರುವಾಗ ಉತ್ತಮ ಫಲಿತಾಂಶ ಹೇಗೆ ಬರುತ್ತದೆ ಎಂದು ಪ್ರಶ್ನಿಸಿದರು. ನಮ್ಮದಲ್ಲದ ಕೆಲಸಗಳನ್ನು ಮಾಡಿಸಲಾಗುತ್ತಿದೆ. ಮಾಡದಿದ್ದರೆ ಸಸ್ಪೆಂಡ್‌ ಮಾಡುವ ಭಯ ಹುಟ್ಟಿಸಲಾಗುತ್ತಿದೆ. ಸುಪ್ರೀಂಕೋರ್ಟ್‌ ಶಿಕ್ಷಕರಿಗೆ ಹೆಚ್ಚುವರಿ ಕೆಲಸ ಹೊರಿಸಬಾರದೆಂದು ಅನೇಕ ಪ್ರಕರಣಗಳಲ್ಲಿ ತೀರ್ಪು ನೀಡಿದೆ. ನಮ್ಮದಲ್ಲದ ಕೆಲಸವನ್ನು ತಿರಸ್ಕಾರ ಮಾಡಿ. ಅಷ್ಟಾದರೂ ಮಾಡಬೇಕೆಂದರೆ ಅದಕ್ಕೆ ಸಂಬಳ ಕೇಳಿ. ಬಲವಂತ ಮಾಡುವ ಹಕ್ಕು ಯಾರಿಗೂ ಇಲ್ಲ. ಸಸ್ಪೆಂಡ್‌ ಮಾಡಲಿ ನೋಡೋಣ. ನಮ್ಮದಲ್ಲದ ಕೆಲಸ ಮಾಡಿಸಿದರೆ ಅ ಧಿಕಾರಿಗಳ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಲೂ ಅವಕಾಶವಿದೆ. ಅವರವರ ವೃತ್ತಿಗೆ ತಕ್ಕಂತೆ ಗೌರವ, ಮಾನ ಸನ್ಮಾನಗಳು ಸಿಗಬೇಕು. ಇಲ್ಲದಿದ್ದರೆ ಪ್ರತಿಭಟನೆ ಮಾಡಿ ಎಂದರು.

ಹೈ ಕ್ವಾಲಿಟಿ ಎಜುಕೇಶನ್‌ ಮಾಡಿರುವ ಶಿಕ್ಷಕರು, ಅಧಿಕಾರಿಗಳು ಇದ್ದರೂ ಇಷ್ಟೊಂದು ಅವ್ಯವಸ್ಥೆಗಳು ಯಾಕಿವೆ.
ಎಲ್ಲರೂ ಉತ್ತಮ ಅಂಕ ಪಡೆದು, ಪರೀಕ್ಷೆ ಪಾಸ್‌ ಮಾಡಿ ಆಯ್ಕೆಯಾದವರೇ ಆದರೂ ಇಷ್ಟೊಂದು ಸಮಸ್ಯೆಗಳು
ಯಾಕಿವೆ ? ಇದನ್ನು ಅಧಿಕಾರಿಗಳಿಗೆ ಪ್ರಶ್ನಿಸಬೇಕಿದೆ. ಶಿಕ್ಷಕರನ್ನು ಅಡುಗೆ ಭಟ್ಟರನ್ನಾಗಿ ಮಾಡಿದ್ದೇ ಇಷ್ಟೊಂದು
ಸಮಸ್ಯೆಗಳಿಗೆ ಕಾರಣ ಎಂದರು.

ಎಂಎಲ್‌ಸಿ ಭೋಜೆಗೌಡ ಮಾತನಾಡಿ, ಶಿಕ್ಷಕರ ಸಮಸ್ಯೆಗಳ ಕುರಿತು ಸಿಎಂ ಕುಮಾರಸ್ವಾಮಿ ಅವರ ಬಳಿ ಚರ್ಚಿಸಿದ್ದೇನೆ. ಮುಂದಿನ ವಾರ ಶಿಕ್ಷಣ ಇಲಾಖೆ ಐಎಎಸ್‌ ಅಧಿಕಾರಿಗಳು, ಪ್ರೌಢ ಮತ್ತು ಉನ್ನತ ಶಿಕ್ಷಣ ಸಚಿವರು ಹಾಗೂ ಪದವೀಧರ ಕ್ಷೇತ್ರದ ಶಾಸಕರು ಸೇರಿ ಸಭೆ ನಡೆಸಲಿದ್ದೇವೆ. ಒಂದು ಹಂತದ ಪರಿಹಾರದ ಕುರಿತು ಚರ್ಚಿಸಲಾಗುವುದು ಎಂದರು.

 ಪ್ರೌಢಶಾಲೆ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ವೈ.ಎಂ. ಧರ್ಮಪ್ಪ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಕ್ಷರಿ, ಡಿಡಿಪಿಐ ಪಿ.ಎಸ್‌. ಮಚ್ಛಾದೋ, ಕ್ಷೇತ್ರ ಶಿಕ್ಷಣಾಧಿಕಾರಿ ಗೀತಾ, ರಾಘವೇಂದ್ರ ಸಿ.ಎಸ್‌., ನಂಜಯ್ಯ ಸಿ., ಕೆ.ಸಿ. ಶರಣಪ್ಪ, ಮಧುಕರ್‌ ಜಿ. ಹೆಗ್ಡೆ, ಚಿದಾನಂದ ಹೆಗ್ಡೆ, ಚಟ್ನಳ್ಳಿ ಮಹೇಶ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next