Advertisement

ಹದಗೆಟ್ಟಿರುವ ಸರ್ಕಾರಿ ಶಾಲೆಗಳ ಕಟ್ಟಡಗಳ ದುರಸ್ತಿಗೆ ಕ್ರಮ

02:39 PM Jun 07, 2017 | Team Udayavani |

ಮೈಸೂರು: ತಾಲೂಕಿನ ವಿವಿಧ ಗ್ರಾಮಗಳ ವ್ಯಾಪ್ತಿಯಲ್ಲಿ ಹದಗೆಟ್ಟಿರುವ ಸರ್ಕಾರಿ ಶಾಲೆಗಳ ಕಟ್ಟಡವನ್ನು ದುರಸ್ತಿಗೊಳಿಸುವ ಬಗ್ಗೆ ತಾಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ತಾಪಂ ವಿಶೇಷ ಸಭೆಯಲ್ಲಿ ನಿರ್ಧರಿಸಲಾಯಿತು.

Advertisement

ನಗರದ ನಜರ್‌ಬಾದ್‌ನಲ್ಲಿರುವ ಮಿನಿ ವಿಧಾನಸೌಧದಲ್ಲಿರುವ ತಾಪಂ ಸಭಾಂಗಣದಲ್ಲಿ ಸಭೆಯಲ್ಲಿ ತಾಪಂ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ ಮಾತನಾಡಿ, ಮೈಸೂರು ಗ್ರಾಮಾಂತರ ಬಿಇಒ ವಿವೇಕಾನಂದ, ತಾಪಂ ವ್ಯಾಪ್ತಿಯ ಸರ್ಕಾರಿ ಶಾಲಾ ಕಟ್ಟಡದ ದುರಸ್ತಿಗೆ ತಾಪಂನಿಂದ 8 ಲಕ್ಷ ರೂ. ಅನುದಾನ ನಿಗದಿಯಾಗಿದ್ದು, ಈ ಅನುದಾನದಲ್ಲಿ ತೀರಾ ಶಿಥಿಲಾವಸ್ಥೆಯಲ್ಲಿರುವ 17 ಶಾಲೆಗಳನ್ನು ಗುರುತಿಸಿ ಪಟ್ಟಿ ಮಾಡಲಾಗಿದೆ.

ಅದರಂತೆ ಸಿಂಧುವಳ್ಳಿ, ದೊಡ್ಡಹುಂಡಿ, ಧನಗೆರೆ, ಮದ್ದೂರು ಹುಂಡಿ, ಆಯಾರಹಳ್ಳಿ, ಕಡೂರು, ಉದೂºರು, ಕಲ್ಲೂರು, ನಾಗನಹಳ್ಳಿ, ಗುಂಗ್ರಾಲ್‌ ಛತ್ರ, ಮಾವಿನಹಳ್ಳಿಯ ಶಾಲೆಗಳನ್ನು ದುರಸ್ತಿಗೊಳಿಸಲು ಪಟ್ಟಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೆಲವು ಸದಸ್ಯರು, ಪ್ರಸ್ತುತ ದುರಸ್ತಿ ಮಾಡಲು ಈಗಾಗಲೇ ಪಟ್ಟಿ ತಯಾರಿಸಲಾಗಿದೆ. ಆದರೆ ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿನ ಸರ್ಕಾರಿ ಶಾಲೆಯ ಕಟ್ಟಡಗಳು ಸಹ ಶಿಥಿಲಾವಸ್ಥೆಯಲ್ಲಿದ್ದು,

-ಹೀಗಾಗಿ ಇವುಗಳನ್ನು ಸಹ ದುರಸ್ತಿಗೊಳಿಸಬೇಕೆಂದು ಒತ್ತಾಯಿಸಿದರು. ಇದಕ್ಕೆ ಉತ್ತರ ನೀಡಿದ ಬಿಇಒ ವಿವೇಕಾನಂದ, ಸರ್ಕಾರಿ ಶಾಲೆಗಳ ಕಟ್ಟಡದ ದುರಸ್ತಿಗೊಳಿಸಲು ಪ್ರಸ್ತುತ ನೀಡಲಾಗಿರುವ ಅನುದಾನದಲ್ಲಿ ತೀರಾ ಹದಗೆಟ್ಟಿರುವ ಶಾಲಾ ಕಟ್ಟಡಗಳ ಪರಿಶೀಲನೆ ನಡೆಸಿ, ಪಟ್ಟಿ ಸಿದ್ಧಪಡಿಸಲಾಗಿದೆ. ಇದರೊಂದಿಗೆ ಹೆಚ್ಚುವರಿ ಅನುದಾನ ನೀಡಿದರೆ, ಮತ್ತಷ್ಟು ಶಾಲಾ ಕಟ್ಟಡಗಳ ದುರಸ್ತಿಗೆ ಕ್ರಮ ವಹಿಸುವುದಾಗಿ ಹೇಳಿದರು.

ಕ್ರಿಯಾಯೋಜನೆಗೆ ಒಪ್ಪಿಗೆ: ಇದೇ ಸಂದರ್ಭದಲ್ಲಿ 203.56 ಕೋಟಿ ರೂ. ಕ್ರಿಯಾಯೋಜನೆ, 1 ಕೋಟಿ ರೂ. ತಾಪಂ ಅನುದಾನ ಮತ್ತು 98 ಲಕ್ಷ ರೂ. ವೆಚ್ಚಕ್ಕೆ ಮಂಡಿಸಲಾಗಿದ್ದ ಕ್ರಿಯಾಯೋಜನೆಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಅಲ್ಲದೆ ವಿವಿಧ ಇಲಾಖೆಗೆ ನಿಗದಿಯಾಗಿರುವ ಅನುದಾನದಲ್ಲಿ ಹೆಚ್ಚುವರಿಯಾಗಿ ಸೇರ್ಪಡೆಗೊಳಿಸಬೇಕಿರುವ ಹಲವು ಕಾಮಗಾರಿಗಳನ್ನು ಸಹ ಕ್ರಿಯಾಯೋಜನೆ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವ ಬಗ್ಗೆಯೂ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು. ಇದಲ್ಲದೆ ಕೃಷಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಕ್ರಿಯಾಯೋಜನೆ ಬಗ್ಗೆಯೂ ತಾಪಂ ಸದಸ್ಯರು ಚರ್ಚೆ ನಡೆಸಿದರು.

Advertisement

ಸಭೆ ಬಗ್ಗೆ ಮಾಹಿತಿ ಇಲ್ಲ: ಸಭೆಯ ಆರಂಭದಲ್ಲಿ ಮಾತನಾಡಿದ ಕೆಲವು ಸದಸ್ಯರು ತಾಪಂ ಸಭೆಯ ಬಗ್ಗೆ ಸಮರ್ಪಕ ಮಾಹಿತಿ ನೀಡದಿರುವುದಕ್ಕೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ತಾಪಂ ಸದಸ್ಯ ಹನುಮಂತು ಮಾತನಾಡಿ, ತಾಪಂ ಸಭೆಯ ಬಗ್ಗೆ ಮೂರು ದಿನಗಳ ಮೊದಲೇ ಸದಸ್ಯರಿಗೆ ಪತ್ರದ ಮೂಲಕ ಮಾಹಿತಿ ನೀಡುವುದು ವಾಡಿಕೆ.

ಆದರೆ ತಮಗೆ ಈವರೆಗೂ ಯಾವುದೇ ಆಹ್ವಾನ ಪತ್ರವಾಗಲಿ ಅಥವಾ ದೂರವಾಣಿ ಕರೆಯಾಗಲಿ ಬಂದಿಲ್ಲ. ಬದಲಿಗೆ ಬೆಳಗಿನ ದಿನಪತ್ರಿಕೆಯಲ್ಲಿ ಸಭೆಯ ಬಗ್ಗೆ ಮಾಹಿತಿ ತಿಳಿದುಕೊಂಡು ಸಭೆಗೆ ಬಂದಿದ್ದೇನೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ತಾಪಂ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು, ಎಲ್ಲಾ ಸದಸ್ಯರಿಗೂ ಕರೆ ಮಾಡಿ ತಿಳಿಸಲಾಗಿದೆ ಎಂದರು.

ಇದೇ ವೇಳೆ ಮಾತನಾಡಿದ ಇತರೆ ಸದಸ್ಯರು, ತಾಪಂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ನಮ್ಮ ಕ್ಷೇತ್ರಕ್ಕೆ ಭೇಟಿ ನೀಡುವ ಬಗ್ಗೆ ಯಾವುದೇ ಮಾಹಿತಿ ನೀಡದೆ, ಏಕಾಏಕಿ ಬಂದು ಹೋಗುತ್ತಿದ್ದು, ಆ ಮೂಲಕ ಕ್ಷೇತ್ರದ ಸದಸ್ಯರನ್ನು ಕಡೆಗಣಿಸಲಾಗುತ್ತಿದೆ ಎಂದು ಕಿಡಿಕಾರಿದರು. ಅಲ್ಲದೆ ಕಳೆದ ಕೆಲವು ದಿನಗಳ ಹಿಂದೆ ತಾಲೂಕಿನ ಇಲವಾಲದಲ್ಲಿ ನಡೆದ ಕೃಷಿ ಇಲಾಖೆ ಕಾರ್ಯಕ್ರಮದಲ್ಲಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಮಾತ್ರವೇ ಭಾಗಿಯಾಗಿದ್ದು,

-ಈ ಬಗ್ಗೆ ಇತರೆ ಸದಸ್ಯರಿಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ತಾಪಂ ಸದಸ್ಯ ಮಹಾದೇವ ಬೇಸರ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಧ್ಯಕ್ಷರು, ಇಲವಾಲದ ಕಾರ್ಯಕ್ರಮಕ್ಕೆ ಆಕಸ್ಮಿಕವಾಗಿ ಭೇಟಿ ನೀಡಿದ್ದು, ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು. ಸಭೆಯಲ್ಲಿ ತಾಪಂ ಉಪಾಧ್ಯಕ್ಷ ಎನ್‌.ಬಿ.ಮಂಜು, ಇಒ ಲಿಂಗರಾಜಯ್ಯ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next