ಕೆಂಭಾವಿ: ಹಿಂದುಳಿದ ಅಲೆಮಾರಿ ಜನಾಂಗದ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬದ್ಧವಾಗಿದ್ದು, ಈ ಜನಾಂಗದ ಪ್ರತಿಯೊಂದು ಕುಟುಂಬಕ್ಕೂ ಸೂರು ಒದಗಿಸಲು ಕ್ರಮ ಕೈಗೊಂಡಿದೆ ಎಂದು ಶಾಸಕ ನರಸಿಂಹ ನಾಯಕ (ರಾಜುಗೌಡ) ಹೇಳಿದರು.
ಮುದನೂರ ಗ್ರಾಮದಲ್ಲಿ ಸೋಮವಾರ ರಾಜೀವ ಗಾಂಧಿ ವಸತಿ ನಿಗಮ ವತಿಯಿಂದ ಅಲೆಮಾರಿ ಜನಾಂಗದ ಕುಟುಂಬ ಸದಸ್ಯರಿಗೆ ಹಕ್ಕು ಪತ್ರ ವಿತರಿಸಿ ಮಾತನಾಡಿದ ಅವರು, ಯಾವುದೇ ಯೋಜನೆಗಳು ಸಾಮಾನ್ಯ ಜನತೆಗೆ ಕೈ ಸೇರಬೇಕಾದರೆ ಯೋಜನೆಯ ಸಂಪೂರ್ಣ ಲಾಭ ಅವರಿಗೆ ಸಿಗಬೇಕು. ಈ ನಿಟ್ಟಿನಲ್ಲಿ ಅಲೆಮಾರಿ ಜನಾಂಗದ ಕುಟುಂಬಕ್ಕೆ ಈಗ ಹಕ್ಕು ಪತ್ರ ವಿತರಿಸಿದ್ದು, ಮುಂಬರುವ ದಿನಗಳಲ್ಲಿ ಅವರಿಗೆ ಸರ್ಕಾರದ ವಿವಿಧ ಯೋಜನೆಯ ಮೂಲಕ ಮನೆಗಳನ್ನು ನಿರ್ಮಿಸಿ ಕೊಡಲಾಗುವುದು ಎಂದು ಭರವಸೆ ನೀಡಿದರು.
ಇತಿಹಾಸ ಪ್ರಸಿದ್ಧ ದೇವರ ದಾಸೀಮಯ್ಯನವರ ಜನ್ಮಸ್ಥಳವಾದ ಮುದನೂರ ಗ್ರಾಮದ ಅಭಿವೃದ್ಧಿಗೆ ನಾನು ಸದಾ ಬದ್ಧನಾಗಿದ್ದು, ಎಚ್ಕೆಆರ್‌ಡಿಬಿ ಅನುದಾನದಲ್ಲಿ ಶೀಘ್ರ ವಿವಿಧ ಕೆಲಸಗಳಿಗೆ ಚಾಲನೆ ನೀಡಲಾಗುವುದು, ಅರ್ಧಕ್ಕೆ ನಿಂತಿರುವ ದಾಸೀಮಯ್ಯನವರ ಕಲ್ಯಾಣ ಮಂಟಪದ ಕಟ್ಟಡ ಕಾಮಗಾರಿಗೆ ಹಣ ಒದಗಿಸಿ ಅದನ್ನು ಪೂರ್ಣಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ನೀಡಲಾಗುವುದು ಎಂದ ಅವರು, ಮುದನೂರ ಕ್ರಾಸ್‌ದಿಂದ ಮುದನೂರ ಗ್ರಾಮದವರೆಗೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸಿಸಿ ರಸ್ತೆ ನಿರ್ಮಾಣ ಮಾಡಲು ಪ್ರಥಮ ಹಂತವಾಗಿ ಶೀಘ್ರ 1 ಕೊಟಿ ರೂ. ಬಿಡುಗಡೆಗೊಳಿಸಲಾಗುವುದು ಎಂದರು.
ನಂತರ ಸುಮಾರು 40 ಜನ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದರು. ಜಿಪಂ ಸದಸ್ಯ ಬಸನಗೌಡ ಯಡಿಯಾಪೂರ ಮಾತನಾಡಿ, ನನ್ನ ಅರಕೇರಾ (ಜೆ) ಜಿಪಂ ಕ್ಷೇತ್ರದ ಯಾವುದೇ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲದೆ ಜನತೆಗೆ ತೀವ್ರ ತೊಂದರೆಯಾಗಿದೆ. ಮುದನೂರ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮನವಿ ಮಾಡಿದರು.
ತಹಶೀಲ್ದಾರ್ ಶ್ರೀಧರ ಮುಂದಲಮನಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಸದಸ್ಯ ಎಚ್. ಸಿ. ಪಾಟೀಲ, ತಾಪಂ ಸದಸ್ಯರಾದ ವಿಜಯರೆಡ್ಡಿ ಚೌದ್ರಿ, ತಿರುಪತಿ, ಭೀಮಣ್ಣ ಮೇಟಿ, ಗ್ರಾಪಂ ಅಧ್ಯಕ್ಷೆ ಶ್ರೀದೇವಿ ಯಮನಸಿಂಗ್, ಭೀಮರಾಯ ಇದ್ದರು. ಗ್ರಾಮ ಲೆಕ್ಕಿಗ ಪರಶುರಾಮ ಕೆಂಭಾವಿ ನಿರೂಪಿಸಿದರು. ಬಸವರಾಜ ಬಿರಾದಾರ ಸ್ವಾಗತಿಸಿದರು.