Advertisement

ಮೀನುಗಾರರ ರಕ್ಷಣೆಗೆ ಕ್ರಮ: ಡಾ|ಜಯಮಾಲಾ

12:30 AM Jan 05, 2019 | |

ಮಲ್ಪೆ: ಮಲ್ಪೆ ಬಂದರಿನಿಂದ 20 ದಿನಗಳ ಹಿಂದೆ ತೆರಳಿದ್ದ 7 ಮಂದಿ ಮೀನುಗಾರರಿದ್ದ ಸುವರ್ಣ ತ್ರಿಭುಜ ದೋಣಿಯನ್ನು ಪತ್ತೆ ಹಚ್ಚಿ ಮೀನುಗಾರರನ್ನು ರಕ್ಷಿಸಲು ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ| ಜಯಮಾಲಾ ತಿಳಿಸಿದ್ದಾರೆ.

Advertisement

ಅತಿ ಶೀಘ್ರ ಎಲ್ಲರನ್ನೂ ಸುರಕ್ಷಿತವಾಗಿ ಕರೆತರುವ ವಿಶ್ವಾಸವಿದೆ ಎಂದವರು ಪತ್ರಿಕಾ ಹೇಳಿಕೆಯಲ್ಲಿ  ತಿಳಿಸಿದ್ದಾರೆ. ದೋಣಿ ನಾಪತ್ತೆಯಾದ ವಿಷಯ ತಿಳಿದ ತತ್‌ಕ್ಷಣವೇ ಕರಾವಳಿ ಕಾವಲು ಪೊಲೀಸ್‌, ಕೋಸ್ಟ್‌ ಗಾರ್ಡ್‌ ಮತ್ತು ಮೀನುಗಾರಿಕಾ ಇಲಾಖೆಯವರಿಗೆ ಮಾಹಿತಿ ನೀಡಿ ಅವರನ್ನು ಜಾಗೃತಗೊಳಿಸಿದ್ದಲ್ಲದೇ ಈ ಎಲ್ಲ ವಿಭಾಗಗಳ ಸಿಬಂದಿಗಳ ಕಾರ್ಯಪಡೆ ರಚಿಸಿ ಶೋಧನಾ ಕಾರ್ಯವನ್ನು ಅತ್ಯಂತ ಆದ್ಯತೆಯಿಂದ ಸಮರೋಪಾದಿಯಲ್ಲಿ ಕೈಗೊಳ್ಳುವಂತೆ ಸೂಚಿಸಲಾಗಿದೆ. ಅಗತ್ಯ ಇದ್ದಲ್ಲಿ ನೌಕಾದಳದ ಸಹಾಯ ಪಡೆದುಕೊಳ್ಳುವಂತೆ ಮಾರ್ಗದರ್ಶನ  ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕ ವ್ಯಾಪ್ತಿಯಲ್ಲಷ್ಟೇ ಅಲ್ಲದೆ ಗೋವಾ ಮತ್ತು ಮಹಾರಾಷ್ಟ್ರ  ವ್ಯಾಪ್ತಿಯಲ್ಲಿಯೂ  ಈ ಶೋಧ ಕಾರ್ಯ ಅತ್ಯಂತ ವ್ಯಾಪಕವಾಗಿ ನಡೆಯುವಂತೆ ನಿಗಾ ವಹಿಸಲಾಗಿದೆ. ಮಹಾರಾಷ್ಟ್ರದ ಬಂದರುಗಳು ಮತ್ತು ಸಮುದ್ರ ಪ್ರದೇಶದಲ್ಲಿ  ಶೋಧ ಕಾರ್ಯಕ್ಕೆ ಸೈನ್ಯದ ನೆರವು ಪಡೆದು ಕೊಂಡು ಮುಂದು ವರಿಯುವ ಸಾಧ್ಯತೆಗಳ ಬಗ್ಗೆಯೂ  ಈಗಾಗಲೇ ಪರಿಶೀಲಿಸಿ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಲಾಗಿದೆ. ಇದಕ್ಕೆ ಬೇಕಾದ ಅನುಮತಿ ಪಡೆದುಕೊಳ್ಳುವ ಪ್ರಕ್ರಿಯೆ ನಡೆಸಲಾಗಿದೆ.  ಉಪ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಸಹ ಶನಿವಾರ ಉಡುಪಿಗೆ ಆಗಮಿಸಲಿದ್ದಾರೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಟ್ವೀಟ್‌
ಮೀನುಗಾರಿಕೆಗೆ ಹೋಗಿ ಸಮುದ್ರದಲ್ಲಿ ನಾಪತ್ತೆಯಾಗಿರುವ ಮೀನುಗಾರರನ್ನು ಪತ್ತೆ ಹಚ್ಚಿ ಮರಳಿ ಕರೆತರುವ ಕಾರ್ಯಾಚರಣೆಯನ್ನು ಸಂಬಂಧಪಟ್ಟ ಇಲಾಖೆಗಳು ಇನ್ನಷ್ಟು ಚುರುಕಾಗಿ ನಡೆಸಬೇಕು. ಇದಕ್ಕೆ ಅಗತ್ಯ ಇರುವ ಎಲ್ಲ ರೀತಿಯ ನೆರವು ಸರಕಾರದಿಂದ ನೀಡುವಂತೆ ನಾನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರ ಜತೆಯಲ್ಲಿಯೂ ಮಾತನಾಡುತ್ತೇನೆ. ಕಾಣೆಯಾಗಿರುವ ಎಲ್ಲರೂ ಸುರಕ್ಷಿತವಾಗಿ ತಮ್ಮವರನ್ನು ಸೇರಿಕೊಳ್ಳುವಂತಾಗಲಿ.
ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next