Advertisement

ಎಲ್ಲ ಪಿಜಿಗಳಲ್ಲಿ ಸಿಸಿ ಕೆಮರಾ ಅಳವಡಿಸಲು ಕ್ರಮ

02:05 AM Jun 09, 2019 | Team Udayavani |

ಮಂಗಳೂರು: ಉದ್ಯೋಗ ಮತ್ತು ಶಿಕ್ಷಣದ ತಾಣ ಎನಿಸಿಕೊಂಡಿರುವ ನಗರದ ಎಲ್ಲ ಪೇಯಿಂಗ್‌ ಗೆಸ್ಟ್‌ಹೌಸ್‌ (ಪಿಜಿ) ಗಳಲ್ಲಿ ಸಿಸಿ ಕೆಮರಾ ಅಳವಡಿಕೆ ಕಡ್ಡಾಯವಾಗಲಿದೆ.
ಶುಕ್ರವಾರ ಅತ್ತಾವರದ ಪಿಜಿಯೊಂದರಲ್ಲಿ ಘಟಿಸಿದ ಚಿಕ್ಕಮಗಳೂರು ಮೂಲದ ವಿದ್ಯಾರ್ಥಿನಿಯೊಬ್ಬಳ ಕೊಲೆ ಸಂಬಂಧ ಕೂಡಲೇ ಎಚ್ಚೆತ್ತುಕೊಂಡಿರುವ ನಗರ ಪೊಲೀಸ್‌ ಇಲಾಖೆ, ಈ ನಿರ್ಧಾರಕ್ಕೆ ಬಂದಿದೆ.

Advertisement

ಪ್ರಸ್ತುತ 150 ಪಿಜಿ ಗಳು ಮಹಾನಗರಪಾಲಿಕೆಯ ಪರವಾನಗಿ ಪಡೆದಿವೆ. ಆದರೆ ಅದಕ್ಕಿಂತ ಎರಡು-ಮೂರು ಪಟ್ಟು ಹೆಚ್ಚು ಪಿಜಿಗಳು ಅನಧಿ ಕೃತ ವಾಗಿ ನಡೆಯುತ್ತಿವೆ ಎನ್ನಲಾಗಿದೆ. ಇದನ್ನು ಪುಷ್ಟೀ ಕರಿಸುವಂತೆ ಪಾಲಿಕೆ ಆರೋಗ್ಯ ಇಲಾಖೆ 2019ರ ಜನವರಿಯಿಂದ ಮೇ ವರೆಗೆ ಎಂಟು ಅನಧಿಕೃತ ಪಿಜಿ ಗಳ ಮೇಲೆ ದಾಳಿ ನಡೆಸಿದೆ.

ನಿಯಮವಿದ್ದರೂ ಹೀಗೆ
ಪಿಜಿ ನಡೆಸಲು ವ್ಯಾಪಾರ ಪರವಾನಿಗೆಯನ್ನು ಪಡೆದುಕೊಳ್ಳಬೇಕೆಂಬ ನಿಯಮವಿದ್ದರೂ, ಎಲ್ಲರೂ ಪಾಲಿಸುತ್ತಿಲ್ಲ. ಸ್ವಂತ ಮನೆಯಲ್ಲೋ, ಮನೆ ಬಾಡಿಗೆ ಪಡೆದೋ ಪಿಜಿಗಳನ್ನು ನಡೆಸಲಾಗುತ್ತಿದೆ. ಇಂಥ ಪಿಜಿಗಳಲ್ಲಿ ಉಳಿಯಲು ಬಂದವರಿಂದ ಆಧಾರ್‌ ಕಾರ್ಡ್‌, ಮತದಾರ ಗುರುತಿನ ಚೀಟಿ, ರೇಷನ್‌ ಕಾರ್ಡ್‌ ಅಥವಾ ಇತರ ಗುರುತು ಪತ್ರದ ಪ್ರತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಅಲ್ಲದೆ, ಆಕೆ/ಆತ ಕೆಲಸ ಮಾಡುತ್ತಿರುವ ಅಥವಾ ಓದುತ್ತಿರುವ ಸಂಸ್ಥೆಯ ವಿಳಾಸವನ್ನೂ ಪಡೆಯಬೇಕು. ಆದರೆ, ಹೆಚ್ಚಿನ ಪಿಜಿ ಗಳ ಮಾಲಕರು ಈ ನಿಯಮಗಳನ್ನು ಪಾಲಿಸುತ್ತಿಲ್ಲ ಎಂಬ ದೂರಿದೆ.

ಭದ್ರತೆ, ಸಿಸಿ ಕ್ಯಾಮರಾ ಇಲ್ಲ
ಕರ್ನಾಟಕ ಸೆಕ್ಯುರಿಟಿ ಆ್ಯಕ್ಟ್ ಪ್ರಕಾರ ಹೆಚ್ಚು ಜನ ವಾಸವಾಗಿರುವ ಸ್ಥಳಗಳಲ್ಲಿ ಭದ್ರತಾ ದೃಷ್ಟಿಯಿಂದ ಸಿಸಿಟಿವಿ ಅಳವಡಿಸಬೇಕು. ಭದ್ರತಾ ಕ್ರಮ ಅನು ಸರಿಸಬೇಕು. ಆದರೆ, ಬಹುತೇಕ ಕಡೆ ಮಾಲಕರು ವಾಸವಾಗಿರುವುದಿಲ್ಲ ಮತ್ತು ಭದ್ರತಾ ಸಿಬಂದಿಯನ್ನೂ ನಿಯೋಜಿಸಿರುವುದಿಲ್ಲ. ಸಮಯದ ಮಿತಿಯಿದ್ದರೂ ಹೊರ ಹೋಗುವಿಕೆ-ಒಳ ಬರುವಿಕೆಯನ್ನು ಸ್ಪಷ್ಟವಾಗಿ ಗಮನಿಸಲು ಯಾರೂ ಇರುವುದಿಲ್ಲ. ಪಿಜಿಗಳಲ್ಲಿ ಸಿಸಿ ಕೆಮರಾವೂ ಇಲ್ಲದಿರುವುದರಿಂದ ಅಲ್ಲಿನ ವಾಸಿಗಳ ಚಲನವಲನಗಳ ಬಗ್ಗೆಯೂ ನಿಗಾ ಇಡಲಾಗುತ್ತಿಲ್ಲ.

ಠಾಣಾ ವ್ಯಾಪ್ತಿಯ ಪಿಜಿಗಳ ಪಟ್ಟಿ
ನಗರದ ಎಲ್ಲಾ ಪೊಲೀಸ್‌ ಠಾಣೆಗಳ ವ್ಯಾಪ್ತಿಯ ಪಿಜಿಗಳ ಪಟ್ಟಿ ಸಿದ್ಧಪಡಿಸಲು ಠಾಣೆಗಳಿಗೆ ಸೂಚಿಸ ಲಾಗಿದೆ. ಪಟ್ಟಿ ಸಿದ್ಧಗೊಂಡ ಬಳಿಕ ಅಧಿಕೃತ ಮತ್ತು ಅನಧಿಕೃತಗಳ ಸಂಖ್ಯೆ ಸ್ಪಷ್ಟಗೊಳ್ಳಲಿದೆ. ಅನಧಿಕೃತ ಪಿಜಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಪಿಜಿಯಲ್ಲ
ಅತ್ತಾವರದಲ್ಲಿ ವಿದ್ಯಾರ್ಥಿನಿ ಕೊಲೆಯಾದ ಕಟ್ಟಡ ಪಿಜಿಯಲ್ಲ; ಬಾಡಿಗೆ ವಸತಿ ಎಂಬುದಾಗಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಆದರೆ, ಈ ಕಟ್ಟಡ ಪಿಜಿ ಮಾದರಿಯಲ್ಲೇ ಇದ್ದು, ಮೃತ ಯುವತಿ ಮತ್ತು ಆಕೆಯ ಸ್ನೇಹಿತನಿಗೆ ಒಂದು ರೂಂನ್ನು ಬಾಡಿಗೆ ನೀಡಲಾಗಿತ್ತು. ಮಲಗುವ ಕೋಣೆ, ಬಾತ್‌ರೂಂ ಮತ್ತು ಶೌಚಾಲಯ ಮಾತ್ರ ಇತ್ತು. ನಾಲ್ಕು ಮಹಡಿಯ ಕಟ್ಟಡದಲ್ಲಿ ಕೆಳಗೆ ಮಾಲಕರಿದ್ದು, ಮೇಲಿನ ಮಹಡಿಗಳಲ್ಲಿ ರೂಮ್‌ಗಳನ್ನು ಬಾಡಿಗೆ ನೀಡಲಾಗಿತ್ತೇ ಅಥವಾ ಪಿಜಿ ರೂಪದಲ್ಲಿ ನಡೆಸಲಾಗುತ್ತಿತ್ತೇ ಎನ್ನುವ ಅಂಶ ಇನ್ನೂ ಬಹಿರಂಗಗೊಳ್ಳಬೇಕಿದೆ.

ಹೊಸ ನೀತಿಯ ಭರವಸೆ
ಹಲವು ಶಿಕ್ಷಣ ಸಂಸ್ಥೆಗಳು, ಔದ್ಯೋಗಿಕ ಸಂಸ್ಥೆಗಳಿರುವ ಮಂಗಳೂರಿಗೆ ಜಿಲ್ಲೆ ಮಾತ್ರವಲ್ಲದೆ, ಹೊರ ಜಿಲ್ಲೆ, ಹೊರ ರಾಜ್ಯ, ಹೊರ ದೇಶಗಳಿಂದಲೂ ವಿದ್ಯಾರ್ಥಿಗಳು, ಉದ್ಯೋಗಿಗಳು ಬಂದು ಪಿಜಿಗಳಲ್ಲಿ ನೆಲೆಸುತ್ತಾರೆ. ಆದರೆ, ಪಿಜಿಗಳಲ್ಲಿ ಮೂಲ ಸೌಲಭ್ಯ, ಭದ್ರತೆ ಮತ್ತಿತರ ವಿಷಯಗಳಿಗೆ ಸಂಬಂಧಿಸಿ ಯಾವುದೇ ಸ್ಪಷ್ಟ ನೀತಿ ನಿಯಮವಿಲ್ಲ. ಈ ಬಗ್ಗೆ ಕೆಲ ದಿನಗಳ ಹಿಂದೆ ನಗರಾಭಿವೃದ್ಧಿ ಸಚಿವ ಯು. ಟಿ. ಖಾದರ್‌ ಅವರೂ ಪ್ರಸ್ತಾವಿಸಿದ್ದು, ರಾಜ್ಯದ ನಗರ ಪ್ರದೇಶದಲ್ಲಿರುವ ಪಿಜಿ ಹಾಗೂ ಹೋಂ ಸ್ಟೇಗಳಿಗೆ ಸಂಬಂಧಿಸಿ ಹೊಸ ನೀತಿ ರೂಪಿಸಲಾಗುವುದು ಎಂದು ತಿಳಿಸಿದ್ದರು.

ಎಲ್ಲ ಪಿಜಿ ಗಳಲ್ಲೂ ಸಿಸಿ ಕೆಮರಾ ಅಳವಡಿಕೆ ಕಡ್ಡಾಯಗೊಳಿಸ ಲಾಗುವುದು. ಈಗಾಗಲೇ ಕೆಲವೆಡೆ ಕೆಮರಾ ಅಳವಡಿಸಿದ್ದು, ಉಳಿದ ಪಿಜಿಗಳಿಗೂ ಸೂಚಿಸಲಾಗುವುದು. ಇದರೊಂದಿಗೆ ನಗರದ ಪಿಜಿಗಳ ಪಟ್ಟಿ ಸಿದ್ಧಪಡಿಸಲು ಠಾಣೆಗಳಿಗೆ ಸೂಚಿಸಲಾಗಿದೆ. ಮಾಹಿತಿ ಲಭ್ಯವಾದ ಮೇಲೆ ಅನಧಿಕೃತ ಪಿಜಿ ಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು.
– ಸಂದೀಪ್‌ ಪಾಟೀಲ್‌,
ಕಮಿಷನರ್‌ ಆಫ್ ಪೊಲೀಸ್‌,
ಮಂಗಳೂರು ನಗರ

-ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next