Advertisement

ಕಬ್ಬು ನಿಯಂತ್ರಣ ಮಂಡಳಿ ರಚನೆಗೆ ಕ್ರಮ

12:28 PM Jul 25, 2018 | Team Udayavani |

ಮೈಸೂರು: ಕಬ್ಬು ನಿಯಂತ್ರಣ ಮಂಡಳಿ ರಚನೆ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಮುಂದಿನ 15ದಿನಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ಸಕ್ಕರೆ ಸಚಿವ ಕೆ.ಜೆ.ಜಾರ್ಜ್‌ ಭರವಸೆ ನೀಡಿದರು.

Advertisement

ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ನೇತೃತ್ವದಲ್ಲಿ ತಮ್ಮನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಕಬ್ಬು ಬೆಳೆಗಾರರಿಗೆ ಸಚಿವರು ಈ ಭರವಸೆ ನೀಡಿದ ಸಚಿವರು, ರೈತರ ಕಬ್ಬಿನ ಹಣ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು. ಕಬ್ಬು ನಿಯಂತ್ರಣ ಮಂಡಳಿ ರಚನೆಯಾದ ನಂತರ ಎಲ್ಲಾ ಸಮಸ್ಯೆಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕಾನೂನು ಕ್ರಮಕ್ಕೆ ಆಗ್ರಹ: ಸಚಿವರಿಗೆ ಮನವಿ ಸಲ್ಲಿಸಿದ ಕುರುಬೂರು ಶಾಂತಕುಮಾರ್‌ ಮಾತನಾಡಿ, ರಾಜ್ಯದ 50ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳು ಕಬ್ಬು ಪೂರೈಕೆ ಮಾಡಿದ ರೈತರಿಗೆ 2017-18ನೇ ಸಾಲಿನ ಎಫ್ಆರ್‌ಪಿ ಹಣ 1500 ಕೋಟಿ ರೂ. ಕಳೆದ 8 ತಿಂಗಳಿಂದ ಪಾವತಿಸದೆ ವಿಳಂಬ ಮಾಡುತ್ತಿದ್ದು,

ಸಕ್ಕರೆ ನಿಯಂತ್ರಣ ಕಾಯಿದೆ ಪ್ರಕಾರ ಕಬ್ಬು ಪೂರೈಕೆಯಾದ 14 ದಿನಗಳಲ್ಲಿ ಕಬ್ಬಿನ ಹಣ ಪಾವತಿಸಬೇಕು. ವಿಳಂಬವಾದರೆ ಶೇ.15ರ ಬಡ್ಡಿ ಸೇರಿಸಿ ಪಾವತಿಸಬೇಕೆಂಬ ನಿಯಮ ಇರುವುದರಿಂದ ಈ ಕಾನೂನಿನ ಅನ್ವಯ ರೈತರ ಹಣ ಕೊಡಿಸಲು ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. 

ದರ ನಿಗದಿಪಡಿಸಿ: ಕಬ್ಬು ಖರೀದಿ ಸರಬರಾಜು ಮಂಡಳಿಯನ್ನು ಕೂಡಲೇ ರಚಿಸಿ ಈ ಮಂಡಳಿಯ ಮೂಲಕ 2017-18ನೇ ಸಾಲಿನ ಎಸ್‌ಎಪಿ ಬೆಲೆಯನ್ನು ನಿಗದಿಗೊಳಿಸಿ ಅಂತಿಮ ಕಂತಿನ ಹಣವನ್ನು ಕೊಡಿಸಬೇಕು. ಪ್ರಸಕ್ತ ಸಾಲಿನ ಕಬ್ಬು ಹಂಗಾಮು ಮೊದಲೇ ಕಬ್ಬಿನ ದರ ಪ್ರತಿ ಟನ್‌ಗೆ 3500 ರೂ. ನಿಗದಿಗೊಳಿಸಬೇಕು ಎಂದು ಸಚಿವರನ್ನು ಶಾಂತಕುಮಾರ್‌ ಒತ್ತಾಯಿಸಿದರು.

Advertisement

ಲಾರಿ ಮುಷ್ಕರದ ಪರಿಣಾಮ ತರಕಾರಿ ಬೆಲೆ ಕುಸಿತವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಸರ್ಕಾರದ ವತಿಯಿಂದಲೇ ಹಣ್ಣು-ತರಕಾರಿ ಖರೀದಿಸುವ ವ್ಯವಸ್ಥೆ ಜಾರಿ ಮಾಡಿ, ಇಲ್ಲವೇ ತಮಿಳುನಾಡು, ಕೇರಳ ರಾಜ್ಯಗಳಿಗೆ ಹಣ್ಣು-ತರಕಾರಿ ಸಾಗಿಸುವ ಲಾರಿಗಳಿಗೆ ಪೊಲೀಸ್‌ ರಕ್ಷಣೆ ಒದಗಿಸುವಂತೆ ಇದೇ ವೇಳೆ ಸಚಿವ ಜಿ.ಟಿ.ದೇವೇಗೌಡ ಅವರಿಗೆ ಮನವಿ ಮಾಡಿದರು. 

ಈ ಸಂದರ್ಭದಲ್ಲಿ ರೈತ ಮುಖಂಡರಾದ ಅತ್ತಹಳ್ಳಿ ದೇವರಾಜ್‌, ಪಿ.ಸೋಮಶೇಖರ್‌, ಹಳ್ಳಿಕೆರೆ ಹುಂಡಿ ಭಾಗ್ಯರಾಜ್‌, ಕಿರಗಸೂರು ಶಂಕರ್‌, ಬಿ.ಪಿ.ಪರಶಿವಮೂರ್ತಿ ಮೊದಲಾದವರು ಹಾಜರಿದ್ದರು.

ಸಕ್ಕರೆ ಕಾರ್ಖಾನೆ ಪುನಶ್ಚೇತನಗೊಳಿಸಿ: ಚುಂಚನಕಟ್ಟೆಯ ಶ್ರೀರಾಮ ಸಕ್ಕರೆ ಕಾರ್ಖಾನೆ ಆರಂಭಕ್ಕೆ ರಾಜ್ಯ ಸರ್ಕಾರ ವಿಶೇಷ ಅನುದಾನ ನೀಡಿ ಸಕ್ಕರೆ ಕಾರ್ಖಾನೆ ಪುನಾರಂಭಿಸಬೇಕು. ಪಾಂಡವಪುರ ಸಕ್ಕರೆ ಕಾರ್ಖಾನೆ ಪುನಃಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕು. ಭದ್ರಾವತಿಯ ಎಂಪಿಎಂ ಸಕ್ಕರೆ ಕಾರ್ಖಾನೆ ರೈತರಿಗೆ ಕೊಡಬೇಕಾಗಿರುವ ಕಬ್ಬು ಸಾಗಣೆ ಸಹಾಯಧನ 98 ಲಕ್ಷ ರೂ.ಗಳನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ರೈತರು ಆಗ್ರಹಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next