Advertisement

ತಂಬಾಕು ಮಂಡಳಿವತಿಯಿಂದ ಶೇ.50 ಸಬ್ಸಿಡಿ ದರದಲ್ಲಿ ಸೆಣಬಿನ ಬೀಜ ವಿತರಣೆಗೆ ಕ್ರಮ

12:57 PM Dec 08, 2021 | Team Udayavani |

ಹುಣಸೂರು: ತಂಬಾಕು ಬೆಳೆ ಉತ್ಪಾದನೆಯಲ್ಲಿ ಬೆಳೆಗಾರರು ಒಂದೇ ಮಾದರಿಗೆ ಜೋತು ಬೀಳದೆ ಭೂಮಿಯ ಫಲವತ್ತತೆ ಹೆಚ್ಚಿಸಿಕೊಂಡು ಆಧುನಿಕ ಪದ್ದತಿಯನ್ನು  ಅಳವಡಿಸಿಕೊಂಡಿದ್ದೇ ಆದಲ್ಲಿ ಗುಣಮಟ್ಟದ ತಂಬಾಕನ್ನು ಉತ್ಪಾದಿಸಿ ಹೆಚ್ಚು ಲಾಭ ಗಳಿಸಬಹುದಾಗಿದೆ ಎಂದು ತಂಬಾಕು ಮಂಡಳಿಯ ಅಧ್ಯಕ್ಷ ವೈ.ರಘುನಾಥ್ ಬಾಬು  ಅಭಿಪ್ರಾಯಪಟ್ಟರು.

Advertisement

ಹುಣಸೂರು ಹಾಗೂ ಪಿರಿಯಾಪಟ್ಟಣ ತಾಲೂಕಿನ ವಿವಿಧ ಗ್ರಾಮಗಳಲ್ಲಿ ತಂಬಾಕು ಬೆಳೆಗಾರರ ಸಭೆ ನಡೆಸಿ ಬೆಳೆಗಾರರ ಸಮಸ್ಯೆಗಳನ್ನು ಆಲಿಸಿ, ನಂತರ ಕಟ್ಟೆಮಳಲವಾಡಿ ತಂಬಾಕು ಹರಾಜು ಮಾರುಕಟ್ಟೆಗೆ ಭೇಟಿ ಇತ್ತು, ಹರಾಜು ಪ್ರಕ್ರಿಯೆ ವೀಕ್ಷಿಸಿ, ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು  ಗುಣಮಟ್ಟದ ತಂಬಾಕು ಉತ್ಪಾದನೆಗೆ ಭೂಮಿಯ ಫಲವತ್ತತೆ ಹೆಚ್ಚಿಸಲು ಸೆಣಬಿನ ಬೀಜವನ್ನು ಜಮೀನುಗಳಿಗೆ ಬಿತ್ತನೆ ಮಾಡಿ 65 ದಿನಗಳ ನಂತರ ಉಳುಮೆ ಮಾಡುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚುವುದರ ಜೊತೆಗೆ ಅಂತರ್ಜಲ ವೃದ್ದಿಸಲಿದೆ,   ಬರಗಾಲದಲ್ಲಿಯೂ ಬೆಳೆಯನ್ನು ಸಂರಕ್ಷಿಸುತ್ತದೆ ಆದ್ದರಿಂದ ಸೆಣಬಿನ ಬೀಜವನ್ನು ಮಂಡಳಿಯಿಂದ ಶೇ.50 ರಷ್ಟು ಸಬ್ಸಿಡಿ ರೂಪದಲ್ಲಿ ನೀಡಲಾಗುವುದು.

ತಂಬಾಕು ಹದಗೊಳಿಸುವ  ವೇಳೆ ಹಣ್ಣಾದ ಎಲೆ ಹಾಗು ಹಸಿರೆಲೆಗಳನ್ನು ವಿಂಗಡಿಸಿ ಮಾಲೆ ಕಟ್ಟಬೇಕು ನಂತರ ಹದಗೊಳಿಸುವ ಬ್ಯಾರನ್‌ನಲ್ಲಿ ಹಣ್ಣಾದ ಮಾಲೆಗಳನ್ನು ಶಾಖ ಕಡಿಮೆ ಪ್ರಮಾಣದಲ್ಲಿ ಇರುವ ಕಡೆ(ಕೆಳಗಿನ ಸರದಲ್ಲಿ) ಜೋಡಿಸಿ ಹಸಿರು ಎಲೆಗಳ ಮಾಲೆಯನ್ನು ಹೆಚ್ಚು ಶಾಖ ಇರುವ ಕಡೆ ಜೋಡಿಸಿ ಹದಗೊಳಿಸುವುದರಿಂದ ಉತ್ತಮ ದರ್ಜೆಯ ತಂಬಾಕನ್ನು ಪಡೆಯಬಹುದಾಗಿದೆ.

ತಂಬಾಕು ಸಸಿ ನಾಟಿ ಸಮಯದಲ್ಲಿ ಗೊಬ್ಬರ ನೀಡುವಾಗ ಗಿಡದ ಪಕ್ಕದಲ್ಲಿ ಇಟ್ಟು ಹೋಗುವ ಪದ್ದತಿ ತರವಲ್ಲ,  ಇದರಿಂದ ಸಸಿಯು ಗೊಬ್ಬರವನ್ನು ಸಂಪೂರ್ಣವಾಗಿ ತೆಗೆದುಕೊಳ್ಳುವುದಿಲ್ಲಾ ಹಾಗಾಗಿ ಹಿಂದಿನ ಪದ್ದತಿಯಂತೆ ಸಸಿಯ ಎರಡು ಕಡೆ ಗುಳಿ ಮಾಡಿ ಗೊಬ್ಬರ ನೀಡಬೇಕು. ಹೀಗೆ ರೈತರು ತಂಬಾಕು ಕೃಷಿಯಲ್ಲಿ ಸ್ವಲ್ಪ ಬದಲಾವಣೆಗಳನ್ನು ಮಾಡಿಕೊಂಡಲ್ಲಿ ಹೆಚ್ಚು ಇಳುವರಿಯ ಜೊತೆಗೆ ಗುಣಮಟ್ಟದ ಪಡೆಯಬಹುದಾಗಿದೆ ಎಂದರು.

ಬೆಳೆಗಾರರಲ್ಲಿ ಆತಂಕ ಬೇಡ:

Advertisement

ಕೋವಿಡ್ ಸಮಯದಲ್ಲಿಯೂ ನಮ್ಮ ದೇಶದಲ್ಲಿ ಕೃಷಿಗೆ ತೊಂದರೆಯಾಗಿಲ್ಲಾ. ಹೆಚ್ಚು ತಂಬಾಕು ಬೆಳೆದರೆ ಕೊಂಡುಕೊಳ್ಳುವವರಿಲ್ಲಾ ಎಂದು ರೈತರು ಆತಂಕ ಪಡಬೇಡಿ. ಖರೀದಿಸುವ ಕಂಪನಿಗಳು ಕೊಳ್ಳುವ ಭರವಸೆ ನೀಡಿವೆ. ರಾಜ್ಯದಲ್ಲಿ ಇದುವರೆಗೆ ೨೬ ಮಿಲಿಯನ್ ತಂಬಾಕು ಮಾರಾಟವಾಗಿದ್ದು ಸರಾಸರಿ 152 ರೂ ಬೆಲೆ ದೊರೆತಿದೆ ಕಳೆದ ವರ್ಷ ಇದೇ ಸಮಯಕ್ಕೆ 26 ಮಿಲಿಯನ್ ಮಾರಾಟವಾಗಿತ್ತು 134 ರೂ. ಸರಾಸರಿ ಬೆಲೆ ದೊರೆತ್ತಿತ್ತು ಎಂದರು.

ಈ ವೇಳೆ ಮಂಡಳಿಯ ಆರ್.ಎಂ.ಓ ಮಾರಣ್ಣ, ಹರಾಜು ಅಧೀಕ್ಷಕರಾದ ಸಿದ್ದರಾಮ್ ಡಾಂಗೆ, ಧನ್‌ರಾಜ್, ಸವಿತಾ ಹಾಗೂ ಪೀಲ್ಡ್ ಆಫೀಸರ್ ಸಂದೀಪ್ ಸೇರಿದಂತೆ ಸಿಬ್ಬಂದಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next