Advertisement
ಬುಧವಾರದಂದು ಡ್ರಗ್ಸ್ ಪ್ರಕರಣಗಳಿಗೆ ಸಂಬಂಧಿಸಿದ ಆರೋಪಿಗಳ ಪರೇಡ್ ನಡೆಸಿದ ಸಂದರ್ಭ ಅವರು ಮಾತನಾಡಿದರು. ಕಮಿಷನರೆಟ್ ವ್ಯಾಪ್ತಿಯಲ್ಲಿ ಮೂರು ವರ್ಷಗಳಲ್ಲಿ 150ಕ್ಕೂ ಅಧಿಕ ಡ್ರಗ್ಸ್ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಮಾರಾಟ, ಪೂರೈಕೆ ಚಟುವಟಿಕೆಗಳು ಸೇರಿವೆ. ಅಲ್ಲದೆ 3 ವರ್ಷಗಳಲ್ಲಿ ಡ್ರಗ್ಸ್ ಸೇವನೆಗೆ ಸಂಬಂಧಿಸಿದಂತೆ 350ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ನಗರದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ, ಕೇರಳ ರಾಜ್ಯದೊಂದಿಗೆ ಗಡಿಯನ್ನು ಹಂಚಿಕೊಂಡಿರುವುದರಿಂದ ಮತ್ತು ಸಮುದ್ರ ಮುಖಾಂತರ ವ್ಯವಹಾರಗಳು ನಡೆಯುತ್ತಿರುವುದರಿಂದ ಇಲ್ಲಿ ಡ್ರಗ್ಸ್ ಪ್ರಕರಣಗಳು ಹೆಚ್ಚು ಎಂಬ ಮಾಹಿತಿ ಲಭ್ಯವಾಗಿದೆ ಎಂದು ಆಯುಕ್ತರು ತಿಳಿಸಿದರು.
ಡ್ರಗ್ಸ್ ಮಾರಾಟ, ಪೂರೈಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಬುಧವಾರ 140ಕ್ಕೂ ಅಧಿಕ ಮಂದಿಯ ಪರೇಡ್ ನಡೆಸಲಾಯಿತು. ಇಂತಹ ಆರೋಪಿಗಳು ಈಗ ನಡೆಸುತ್ತಿರುವ ಚಟುವಟಿಕೆಗಳ ಬಗ್ಗೆ ಪೊಲೀಸರು ತಿಳಿದುಕೊಳ್ಳಲು ಪರೇಡ್ ಸಹಾಯಕವಾಗುತ್ತದೆ. ಅಲ್ಲದೆ ಆರೋಪಿಗಳ ಮನಃಪರಿವರ್ತನೆಗೂ ಇಂತಹ ಪರೇಡ್‌ಗಳಿಂದ ಅವಕಾಶ ಸಿಗುತ್ತದೆ. ಈಗ ಆರೋಪಿಗಳಾಗಿರುವವರ ಪೈಕಿ ಕೆಲವರ ಮೇಲೆ 3ರಿಂದ 4, ಇನ್ನು ಕೆಲವರ ಮೇಲೆ 15ಕ್ಕೂ ಅಧಿಕ ಪ್ರಕರಣಗಳಿವೆ. ಒಂದು ವೇಳೆ ತಮ್ಮ ದಂಧೆಯನ್ನು ಪುನರಾವರ್ತಿಸಿದರೆ ಅಂತವರ ವಿರುದ್ಧ ಗೂಂಡಾ ಕಾಯ್ದೆಗಳನ್ನು ಹಾಕುವುದಕ್ಕೂ ಇಲಾಖೆ ಸಿದ್ಧವಿದೆ ಎಂದರು. ವೆಬ್‌ಸೈಟ್ ಮೇಲೆಯೂ ನಿಗಾ
ಡಾರ್ಕ್ ವೆಬ್‌ನಂತಹ ಹೆಸರಿನ ವೆಬ್‌ಸೈಟ್‌ಗಳಲ್ಲಿ ಡ್ರಗ್ಸ್ ಮಾರಾಟ, ಡ್ರಗ್ಸ್ ಸೇವನೆಗೆ ಪ್ರಚೋದನೆ ಮೊದಲಾದವು ನಡೆಯುತ್ತಿರುವ ಬಗ್ಗೆ ಮಾಹಿತಿ ಇದೆ. ಅಲ್ಲದೆ ಕೊರಿಯರ್ ಮೂಲಕವೂ ಡ್ರಗ್ಸ್ ಸಾಗಾಟ ನಡೆಯುವ ಮಾಹಿತಿ ಇದೆ. ಕೆಲವು ಔಷಧ ಅಂಗಡಿಗಳಲ್ಲಿಯೂ ನಿಷೇಧಿತ ಡ್ರಗ್ಸ್‌ಗಳ ಮಾರಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ಇದ್ದು ಸಂಬಂಧಿಸದ ಇಲಾಖೆಗಳ ಜತೆ ಸೇರಿ ಇದರ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದರು.
Related Articles
ಮುಂದಿನ ದಿನಗಳಲ್ಲಿ ರೌಡಿಗಳ ಪರೇಡ್ ನಡೆಸಿ ಅವರನ್ನು ನಿಯಂತ್ರಿಸಲು, ಸರಿದಾರಿಗೆ ತರಲು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಅಗತ್ಯ ಮಾಹಿತಿ ನೀಡಿ ಪೊಲೀಸರಂತೆ ಕಾರ್ಯನಿರ್ವಹಿಸಬೇಕು. ಡ್ರಗ್ಸ್ ವಿಚಾರಗಳಿಗೆ ಸಂಬಂಧಿಸಿಯೂ 112 ತುರ್ತು ಸಹಾಯವಾಣಿಗೆ ಮಾಹಿತಿ ನೀಡಬಹುದು ಎಂದು ಹೇಳಿದರು.
Advertisement