ಶಿಡ್ಲಘಟ್ಟ: ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಗೆ ರಾಜ್ಯ ರೇಷ್ಮೆ ಹಾಗೂ ಯುವ ಸಬಲೀಕರಣ ಇಲಾಖೆಯ ಸಚಿವ ನಾರಾಯಣಗೌಡ ಭೇಟಿ ನೀಡಿದರು.
ರೇಷ್ಮೆ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ವಿಶ್ವವಿಖ್ಯಾತ ಮಾರುಕಟ್ಟೆ ಗೆ ಭೇಟಿ ನೀಡಿ ರೇಷ್ಮೆ ಬೆಳೆಗಾರರು ಮತ್ತು ಬಿಚ್ಚಾಣಿಕೆದಾರರ ಸಮಸ್ಯೆಗಳನ್ನು ಆಲಿಸಿದರು.
ಮಾರುಕಟ್ಟೆಯಲ್ಲಿ ಸಮರ್ಪಕವಾಗಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವರು ಮಾರುಕಟ್ಟೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ರೇಷ್ಮೆ ಗೂಡುಗಳನ್ನು ಪರಿಶೀಲಿಸಿದರು ತದನಂತರ ಮಾರುಕಟ್ಟೆಯಲ್ಲಿ ಅನುಷ್ಠಾನಗೊಳಿಸುತ್ತಿರುವ ಇ-ಹರಾಜ್ ಮತ್ತು ಇ-ಪೇಮೆಂಟ್ ವ್ಯವಸ್ಥೆಯನ್ನು ವೀಕ್ಷಣೆ ಮಾಡಿದರು.
ವ್ಯಾಪಾರ ಮತ್ತು ವಹಿವಾಟಿನ ಅತಿ ದೊಡ್ಡ ರಾಮನಗರ ಹೈಟೆಕ್ ಮಾರ್ಕೆಟ್ ನಿರ್ಮಿಸಲು ಕ್ರಮ ಕೈಗೊಂಡಿದ್ದು ಮುಂದಿನ ದಿನಗಳಲ್ಲಿ ಶಿಡ್ಲಘಟ್ಟ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆ ಹೈಟೆಕ್ ಮಾರ್ಕೆಟ್ ಮಾಡಿ ರೇಷ್ಮೆ ಉದಿಮೆಯಲ್ಲಿ ತೊಡಗಿರುವ ರೇಷ್ಮೆ ಬೆಳೆಗಾರರು ಹಾಗೂ ಬಿಚ್ಚಾಣಿಕೆದಾರರ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗುವುದೆಂದರು.
ಮಾರುಕಟ್ಟೆಗೆ ಭೇಟಿ ನೀಡಿದ ಬಳಿಕ ನಗರದ ನೆಹರು ಕ್ರೀಡಾಂಗಣಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು ನಂತರ ರೇಷ್ಮೆ ನೂಲು ಬಿಚ್ಚಾಣಿಕೆ ಘಟಕಕ್ಕೆ ಭೇಟಿ ನೀಡಿ ವೀಕ್ಷಿಸಿದರು.
ಬಳಿಕ ಶಿಡ್ಲಘಟ್ಟ ನಗರದಲ್ಲಿ ಪ್ರಗತಿಪರ ರೇಷ್ಮೆ ನೂಲು ಬಿಚ್ಚಾಣಿಕೆದಾರರ ಕೈಗಾರಿಕಾ ಸಹಕಾರ ಸಂಘವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಶಾಸಕ ವಿ.ಮುನಿಯಪ್ಪ, ಮಾಜಿ ಶಾಸಕ ಎಂ. ರಾಜಣ್ಣ, ರಾಜ್ಯ ರೇಷ್ಮೆ ಅಭಿವೃದ್ಧಿ ಆಯುಕ್ತ ಟಿ. ಪೆದಪ್ಪಯ್ಯ, ರಾಜ್ಯ ರೀಲರ್ಸ್ ಸಂಘದ ಕಾರ್ಯಾಧ್ಯಕ್ಷ ಮೊಹಮ್ಮದ್ ಅನ್ವರ್ ,ತಾಲೂಕು ಅಧ್ಯಕ್ಷ ಅನ್ಸರ್ ಖಾನ್, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸುರೇಂದ್ರ ಗೌಡ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕ ನಾಗಭೂಷಣ್, ಜಿಲ್ಲಾ ಪಂಚಾಯತ್ ಉಪ ನಿರ್ದೇಶಕ ಆಂಜನೇಯ ಗೌಡ, ಬಿಜೆಪಿ ನಾಯಕಿ ನರ್ಮದಾ ರೆಡ್ಡಿ, ಮತ್ತಿತರರು ಉಪಸ್ಥಿತರಿದ್ದರು.