ಬೆಳ್ತಂಗಡಿ: ಮಳೆಗಾಲದ ಮೊದಲು ಅಗತ್ಯವಾಗಿರುವ ರಸ್ತೆ ಹಾಗೂ ಸೇತುವೆ ಕಾಮಗಾರಿಗಳನ್ನು ಮಾಡಬೇಕಾಗಿದೆ ಎಂದು ಶಾಸಕ ಹರೀಶ್ ಪೂಂಜ ಅವರು ಹೇಳಿದರು.
ಅವರು ಶುಕ್ರವಾರ ತಾ.ಪಂ. ಸಭಾಂಗಣದಲ್ಲಿ ತಾ.ಪಂ.ಸದಸ್ಯ ರೊಂದಿಗೆ ಮಳೆಗಾಲದ ಪೂರ್ವಭಾವಿ ಕಾಮಗಾರಿಗಳ ಬಗ್ಗೆ ಚರ್ಚಿಸಿದರು.
ಎರಡು ದಿನಗಳ ಹಿಂದೆ ಕುಸಿತ ಗೊಂಡ ಕುತ್ಲೂರು ಕುಕ್ಕುಜೆ ಸೇತುವೆ ಕುರಿತು ಸದಸ್ಯೆ ರೂಪಲತಾ ಪ್ರಸ್ತಾವಿಸಿ ದರು. ಕಳೆದ ವರ್ಷವೇ ಸೇತುವೆ ಶಿಥಿಲಗೊಂಡಿತ್ತು. ಈಗಾಗಲೇ ಸಚಿವ ಈಶ್ವರಪ್ಪ ಬಳಿ ಮಾತನಾಡಿದ್ದು, 3 ಕೋ. ರೂ. ಪ್ರಸ್ತಾವನೆ ಕಳುಹಿಸಲಾಗಿದೆ. ಸಾಧ್ಯವಾದಲ್ಲಿ ಮಳೆ ಆರಂಭವಾಗುವ ಮೊದಲೇ ಕಾಮಗಾರಿ ನಡೆಸಲಾಗು ವುದು ಎಂದು ಶಾಸಕರು ಪ್ರತಿಕ್ರಿಯಿಸಿದರು.
ಎಳನೀರು – ಸಂಸೆ ರಸ್ತೆ ವಿಚಾರವಾಗಿ ಜಯರಾಮ್ ಪ್ರಸ್ತಾವಿಸಿದಾಗ, ಎಳನೀರು ಅಭಿವೃದ್ಧಿಗೆ 5 ಕೋ. ರೂ. ಅನುದಾನ ನೀಡಲಾಗಿದೆ. ವೆಂಟೆಡ್ ಡ್ಯಾಂ, ರಸ್ತೆಗೆ ಆದ್ಯತೆ ನೀಡಲಾಗಿದೆ. ದಿಡುಪೆಯಿಂದ ಎಳನೀರು ಕಚ್ಚಾ ರಸ್ತೆ ಇದ್ದು, ಈಗಾಗಲೇ 7 ಲ.ರೂ. ವೆಚ್ಚದಲ್ಲಿ ಜೆಸಿಬಿ ಮೂಲಕ ರಸ್ತೆ ಅಭಿವೃದ್ಧಿಪಡಿಸಲಾಗಿದೆ ಎಂದರು.
ತಮ್ಮ ವ್ಯಾಪ್ತಿಯ ಹಲವು ಸಮಸ್ಯೆ,ಸರಕಾರದ ವಿಶೇಷ ಪ್ಯಾಕೇಜ್ ಕುರಿತು ಸದಸ್ಯ ಜೋಯೆಲ್ ಮೆಂಡೋನ್ಸಾ, ಕೊರಗಪ್ಪ ಗೌಡ, ಜಯಶೀಲಾ, ಸುಧಾಕರ್, ಲಕ್ಷಿ$¾àನಾರಾಯಣ, ಸುಜಾತಾ, ಗೋಪಿನಾಥ್ ನಾಯಕ್, ಧನಲಕ್ಷ್ಮೀ, ಸುಧೀರ್ ಸುವರ್ಣ, ಕೇಶವತಿ ಮೊದಲಾದವರು ಶಾಸಕರ ಗಮನ ಸೆಳೆದರು.
ನಾರಾವಿ – ಗುರುವಾಯನಕೆರೆ ರಾಜ್ಯ ಹೆದ್ದಾರಿಯನ್ನು ವಿಸ್ತರಣೆಗೊಳಿಸುವ ಹಾಗೂ ಡಾಮರು ಕಾಮಗಾರಿ ಮಳೆಗಾಲದ ಬಳಿಕ ಆರಂಭಗೊಳ್ಳಲಿದೆ ಎಂದು ಶಾಸಕರು ತಿಳಿಸಿದರು.
ಬ್ಯಾಡ್ಜ್ ಇಲ್ಲದ ರಿಕ್ಷಾ ಚಾಲಕರಿಗೂ ಪ್ಯಾಕೇಜ್
ಬ್ಯಾಡ್ಜ್ ಇಲ್ಲದ ರಿಕ್ಷಾ ಚಾಲಕರಿಗೂ ಪ್ಯಾಕೇಜ್ ಲಭಿಸುವಂತೆ ಮಾಡಬೇಕು ಎಂದು ಸದಸ್ಯ ಜೋಯೆಲ್ ಮೆಂಡೋನ್ಸಾ ಆಗ್ರಹಿಸಿದರು. ಈಗಾಗಲೆ ಮುಖ್ಯಮಂತ್ರಿಗಳು ರೂಪುರೇಷೆ ಸಿದ್ಧಪಡಿಸಿದ್ದು, ಎಲ್ಲ ರಿಕ್ಷಾ ಚಾಲಕರಿಗೂ ಪ್ಯಾಕೇಜ್ ಲಭಿಸಲಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಎಸೆಸೆಲ್ಸಿ ಪರೀಕ್ಷೆ ತಯಾರಿ
ಜೂ.25ರಿಂದ ಎಸೆಸೆಲ್ಸಿ ಪರೀಕ್ಷೆ ಆರಂಭವಾಗಲಿದ್ದು, ಸದಸ್ಯರು ತಮ್ಮ ವ್ಯಾಪ್ತಿಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರಲ್ಲಿ ಧೈರ್ಯ ತುಂಬುವ ಕೆಲಸ ಮಾಡಬೇಕು. ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಿಗೆ ತೆರಳಲು ಅನುಕೂಲ ಮಾಡಿಕೊಡಬೇಕು ಎಂದು ಶಾಸಕರು ಹೇಳಿದರು.