Advertisement

ವೈದ್ಯ ಸಿಬ್ಬಂದಿ ನೇಮಕಕ್ಕೆ ಕ್ರಮ

04:31 PM May 10, 2021 | Girisha |

ಆಲಮಟ್ಟಿ: ನಿಡಗುಂದಿಯಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೂಡಗಿಯ ಎನ್‌ಟಿಪಿಸಿ ವೈದ್ಯರ ಸಹಾಯ ಪಡೆದು ಕೋವಿಡ್‌ ಸೆಂಟರ್‌ ಆರಂಭಿಸುವ ಚಿಂತನೆಯಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

Advertisement

ರವಿವಾರ ಆಲಮಟ್ಟಿಯ ಸರ್ಕಾರಿ ಪ್ರವಾಸಿ ಮಂದಿರದಲ್ಲಿ ನಿಡಗುಂದಿ ತಾಲೂಕಲ್ಲಿ ಕೋವಿಡ್‌ -19 ಹರಡದಂತೆ ನಿಯಂತ್ರಿಸುವ ಕ್ರಮಗಳ ಕುರಿತು ಪರಿಶೀಲನಾ ಸಭೆ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ನಿಡಗುಂದಿಯಲ್ಲಿರುವ ಸಮುದಾಯ ಆರೋಗ್ಯ ಕೇಂದ್ರವು 30 ಹಾಸಿಗೆಯುಳ್ಳದ್ದಾಗಿದೆ. ಈಗಿರುವ ಎಲ್ಲ 30 ಹಾಸಿಗೆಗಳಿಗೂ ಆಕ್ಸಿಜನ್‌ ಪೈಪ್‌ಗ್ಳನ್ನು ಅಳವಡಿಸಲಾಗುತ್ತಿದೆ. ಸರ್ಕಾರದ ನಿರ್ದೇಶನದಂತೆ ಆಕ್ಸಿಜನ್‌ ಲಭ್ಯತೆಯನ್ನು ಅನುಸರಿಸಿ ಎಷ್ಟು ಹಾಸಿಗೆಯ ರೋಗಿಗಳಿಗೆ ಸಾಧ್ಯವುದೆಯೋ ಅಷ್ಟು ಜನರಿಗೆ ಪೂರೈಸಲಾಗುವದು ಎಂದರು.

ರಾಜ್ಯದಲ್ಲಿ ಕೋವಿಡ್‌-19ರ 2ನೇ ಅಲೆ ತೀವ್ರವಾಗಿದ್ದು ತನ್ನ ಪ್ರಭಾವ ಹೆಚ್ಚಿಸಿಕೊಂಡಿದೆ. ಇನ್ನು 3ನೇ ಅಲೆಯನ್ನು ತಡೆಗಟ್ಟಲು ರಾಜ್ಯದ ಜನರ ಸಹಕಾರ ಅತಿ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಜನರಿಗೆ ಕೋವಿಡ್‌-19 ನಿಯಂತ್ರಣಕ್ಕೆ ಸಾಕಷ್ಟು ಪ್ರಮಾಣದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. 3ನೇ ಅಲೆಯ ತೀವ್ರತೆಯನ್ನು ಊಹಿಸುವದು ಕಷ್ಟ. ಇದರಿಂದ ನಿಡಗುಂದಿ ತಾಲೂಕಿನ ಜನರು ಬಸವನಬಾಗೇವಾಡಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ಆಸ್ಪತ್ರೆಗಳಿಗೆ ತೆರಳುವಾಗ ರೋಗಿಗಳ ಆರೋಗ್ಯ ಗಮನದಲ್ಲಿರಿಸಿಕೊಂಡು ಕೂಡಗಿಯಲ್ಲಿರುವ ರಾಷ್ಟ್ರೀಯ ಶಾಖೋತ್ಪನ್ನ ಕೇಂದ್ರದ ಅಧಿ ಕಾರಿಗಳಿಗೆ ಮನವಿ ಮಾಡಿ, ಫಿಜಿಷಿಯನ್‌, ಲ್ಯಾಬ್‌ ಟೆಕ್ನಿಷಿಯನ್‌ ಸೇರಿದಂತೆ ಅಗತ್ಯ ಸಿಬ್ಬಂದಿಗಳ ಸಹಾಯ ಪಡೆದು ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು.

ಆಲಮಟ್ಟಿಯಲ್ಲಿರುವ ಕೆಬಿಜೆನ್ನೆಲ್‌ ಆಸ್ಪತ್ರೆಯನ್ನು ಆಕ್ಸಿಜನ್‌ ರಹಿತ ಕೋವಿಡ್‌ ಕೇಂದ್ರವನ್ನಾಗಿ ಮಾಡಿ ಎಲ್ಲ ಸೌಲಭ್ಯಗಳನ್ನು ಒದಗಿಸುವುದರಿಂದ ಈ ಭಾಗದ ಜನರಿಗೆ ಸಹಕಾರಿಯಾಗಲಿದೆ. ವಿಜಯಪುರ ನಗರದಲ್ಲಿ ಮೊದಲು 2 ಹಾಗೂ ನಂತರ 1 ಘಟಕ ಸೇರಿ ಒಟ್ಟು 3, ಬಸವನಬಾಗೇವಾಡಿ ಮತ್ತು ಮುದ್ದೇಬಿಹಾಳಗಳಲ್ಲಿ ಒಂದೊಂದು ಸೇರಿ ಒಟ್ಟು 5 ಆಕ್ಸಿಜನ್‌ ಉತ್ಪಾದನಾ ಘಟಕ ಮಂಜೂರಾಗಿವೆ. ನಿರ್ಮಾಣ ಕಾರ್ಯ ಆರಂಭಗೊಂಡಿದ್ದು ಇನ್ನು 15-20ದಿನಗಳಲ್ಲಿ ಕಾರ್ಯಾರಂಭ ಮಾಡಲಿವೆ ಎಂದರು.

ಮುದ್ದೇಬಿಹಾಳ ಆಕ್ಸಿಜನ್‌ ಉತ್ಪಾದನಾ ಘಟಕ ಸ್ಥಾಪನೆ ರದ್ದಾಗಿಲ್ಲ. ಈ ಬಗ್ಗೆ ಜನರಲ್ಲಿ ಯಾರೋ ತಪ್ಪು ಸಂದೇಶ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದ ಅವರು, ನಿಡಗುಂದಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ 10 ಹಾಸಿಗೆ ಸಾಮರ್ಥ್ಯದ ಕೋವಿಡ್‌ ಆಸ್ಪತ್ರೆ ಆರಂಭಿಸಲು ಆಕ್ಸಿಜನ್‌ ಕೊರತೆಯಿದೆ. ಜತೆಗೆ ತಜ್ಞ ವೈದ್ಯರ, ತಂತ್ರಜ್ಞರ ಕೊರತೆಯೂ ಇದೆ. ನಿಡಗುಂದಿಯ ಬಿಸಿಎಂ ಹಾಸ್ಟೆಲ್‌ನಲ್ಲಿ ತಾಲೂಕು ಆಡಳಿತ ಕೋವಿಡ್‌ ಕೇರ್‌ ಸೆಂಟರ್‌ ಆರಂಭಿಸಿದೆ ಎಂದರು.

Advertisement

ಸಿಬ್ಬಂದಿ ನೇಮಕ: ಕೊರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತದ ಮೂಲಕ ಗುತ್ತಿಗೆ ಆಧಾರದ ಮೇಲೆ ತಜ್ಞ ವೈದ್ಯರಿಗೆ 1.20 ಲಕ್ಷ, ಎಂಬಿಬಿಎಸ್‌ ವೈದ್ಯರಿಗೆ 60 ಸಾವಿರ, ಎಎನ್‌ಎಂ ನರ್ಸ್‌ಗಳಿಗೆ 25 ಸಾವಿರ, ಜ್ಯೂನಿಯರ್‌ ಲ್ಯಾಬ್‌ ಟೆಕ್ನಿಷಿಯನ್‌ಗೆ 10 ಸಾವಿರ, ಫಾರ್ಮಾಸಿಸ್ಟ್‌ಗೆ 20 ಸಾವಿರ, ಡಾಟಾ ಆಪರೇಟರ್‌ ಗೆ 10 ಸಾವಿರ ಹಾಗೂ ಗ್ರುಪ್‌ ಡಿ ಹುದ್ದೆಗಳನ್ನು ಯೋಗ್ಯ ಸಂಬಳ ನೀಡಿ ಗುತ್ತಿಗೆ ಆಧಾರದ ಮೇಲೆ ತಕ್ಷಣವೇ ನೇಮಕ ಮಾಡಲಾಗುವುದು. ಯಾರಾದರೂ ಅರ್ಹರಿದ್ದರೇ ಜಿಲ್ಲಾಡಳಿತವನ್ನು ಸಂಪರ್ಕಿಸಲು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ವಿಜಯಪುರದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸುವ ಬಗ್ಗೆ ಆರೋಗ್ಯ ಸಚಿವರೊಂದಿಗೆ ಚರ್ಚಿಸಲಾಗಿದೆ. ಸಚಿವರು ಸಕಾರಾತ್ಮಕ ಸ್ಪಂದಿಸಿದ್ದಾರೆ. ವಿಜಯಪುರದ ಬಿಎಲ್‌ಡಿಇಎ ಆಸ್ಪತ್ರೆಗೆ ರೆಮ್‌ ಡೆಸಿವಿಯರ್‌ ಕೊರತೆಯಾಗಿಲ್ಲ. ಈ ಬಗ್ಗೆ ಸಂಸ್ಥೆ ಅಧ್ಯಕ್ಷ, ಶಾಸಕ ಎಂ.ಬಿ. ಪಾಟೀಲ ಮಾಡಿದ ಆರೋಪವನ್ನು ಸಚಿವೆ ತಳ್ಳಿಹಾಕಿದರು.

ಕೂಡಗಿ ಎನ್‌ ಟಿಪಿಸಿ ವೈದ್ಯರ ಬಳಕೆ: ಕೂಡಗಿಯ ಎನ್‌ಟಿಪಿಸಿ ಘಟಕದಲ್ಲಿರುವ ತಜ್ಞ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳನ್ನು ತಕ್ಷಣವೇ ಕೋವಿಡ್‌ ಆಸ್ಪತ್ರೆಗೆ ಬಳಸಿಕೊಳ್ಳುವಂತೆ ಸಚಿವೆ ಜೊಲ್ಲೆ ಅಧಿ ಕಾರಿಗಳಿಗೆ ಸೂಚಿಸಿದರು. ಈ ವೈದ್ಯರನ್ನು ಬಸವನಬಾಗೇವಾಡಿ ಕೋವಿಡ್‌ ಆಸ್ಪತ್ರೆಗೆ ನಿಯೋಜಿಸಲು ಶಾಸಕ ಶಿವಾನಂದ ಪಾಟೀಲ ಸೂಚಿಸಿದರು. ವಿಧಾನ ಪರಿಷತ್‌ ಸದಸ್ಯ ಅರುಣ ಶಹಾಪುರ, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ, ತಾಪಂ ಅಧ್ಯಕ್ಷ ಚನ್ನಬಸಪ್ಪಗೌಡ ಪಾಟೀಲ, ಮಾಜಿ ಸಚಿವ ಎಸ್‌.ಕೆ. ಬೆಳ್ಳುಬ್ಬಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್‌.ಎಸ್‌. ಪಾಟೀಲ (ಕೂಚಬಾಳ), ಜಿಪಂ ಮಾಜಿ ಸದಸ್ಯ ಶಿವಾನಂದ ಅವಟಿ, ಎಸಿ ಬಲರಾಮ ಲಮಾಣಿ, ತಹಶೀಲ್ದಾರ್‌ ಶಿವಲಿಂಗಪ್ರಭು ವಾಲಿ, ತಾಪಂ ಇಒ ವಿ.ಎಸ್‌. ಹಿರೇಮಠ ಹಾಗೂ ತಾಲೂಕು ಆರೋಗ್ಯಾ  ಧಿಕಾರಿ ಡಾ| ಎಸ್‌.ಎಸ್‌. ಓತಗೇರಿ ಸಭೆಗೆ ವಿವಿಧ ಮಾಹಿತಿಯನ್ನು ನೀಡಿದರು.

ಆಲಮಟ್ಟಿ ಆಸ್ಪತ್ರೆಗೆ ಭೇಟಿ; ಇಲ್ಲಿಯ ಕೆಬಿಜೆಎನ್‌ ಎಲ್‌ ಆಸ್ಪತ್ರೆಗೆ ಸಚಿವೆ ಜೊಲ್ಲೆ ಭೇಟಿ ನೀಡಿ ಆಸ್ಪತ್ರೆಯ ಕೊಠಡಿ ಹಾಗೂ ಸಲಕರಣೆಗಳನ್ನು ಪರಿಶೀಲಿಸಿದರು. ಇದಕ್ಕೂ ಮೊದಲು ಆಸ್ಪತ್ರೆಯನ್ನು ಕೋವಿಡ್‌ ಕೇರ್‌ ಸೆಂಟರ್‌ ಆರಂಭಿಸುವ ಕುರಿತು ಜಲ ಸಂಪನ್ಮೂಲ ಇಲಾಖೆ ಕಾರ್ಯದರ್ಶಿ ರಾಕೇಶಸಿಂಗ್‌ ಅವರೊಂದಿಗೆ ಸಚಿವರು ದೂರವಾಣಿಯಲ್ಲಿ ಚರ್ಚಿಸಿದರು. ಆಸ್ಪತ್ರೆಯಲ್ಲಿ ಸಕಲ ಸೌಲಭ್ಯಗಳಿದ್ದರೂ ಅವ್ಯಸ್ಥೆಯ ಬಗ್ಗೆ ಹಾಗೂ ಆಸ್ಪತ್ರೆಯಲ್ಲಿ ಯಾವೊಬ್ಬ ಸಿಬ್ಬಂದಿಯೂ ಇರಲಿಲ್ಲ. ಅದಕ್ಕಾಗಿ ಸಚಿವೆ ಜೊಲ್ಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next