Advertisement

ಬೆಂಗಳೂರಿನಲ್ಲಿ ಅರ್ಚಕರ ಭವನ ನಿರ್ಮಾಣಕ್ಕೆ ಕ್ರಮ: ಶಶಿಕಲಾ ಜೊಲ್ಲೆ

07:55 PM Sep 16, 2021 | Team Udayavani |

ಬೆಂಗಳೂರು: ಹಿಂದೂ ದೇವಸ್ಥಾನಗಳ ಅರ್ಚಕರ ಹಿತ ದೃಷ್ಟಿಯಿಂದ ಬೆಂಗಳೂರಿನಲ್ಲಿ ಅರ್ಚಕರ ಭವನ ನಿರ್ಮಾಣ ಮಾಡುವ ಕುರಿತು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಜರಾಯಿ, ವಕ್ಫ್ ಹಾಗೂ ಹಜ್ ಸಚಿವೆ ಶಶಿಕಲಾ ಜೊಲ್ಲೆಯವರು ತಿಳಿಸಿದ್ದಾರೆ.

Advertisement

ರಾಜ್ಯದ ಎಲ್ಲ ಜಿಲ್ಲೆಗಳಿಂದ ಆಗಮಿಸಿ ಜಯಮಹಲ್ ನಲ್ಲಿರುವ ತಮ್ಮ ಸರ್ಕಾರಿ ನಿವಾಸದಲ್ಲಿ ತಮ್ಮನ್ನು ಭೇಟಿ ಮಾಡಿದ ಕರ್ನಾಟಕ ರಾಜ್ಯ ಮುಜರಾಯಿ ದೇವಸ್ಥಾನಗಳ ಅರ್ಚಕರ, ಆಗಮಿಕರ ಮತ್ತು ನೌಕರರ ಸಂಘದ ರಾಜ್ಯಾಧ್ಯಕ್ಷ ಶ್ರಿವಾಸ್ತವ ಅವರ ನೇತೃತ್ವದಲ್ಲಿ ಭೇಟಿ ಮಾಡಿದ ನೂರಕ್ಕೂ ಹೆಚ್ಚು ಅರ್ಚಕರ ನಿಯೋಗದ ಮನವಿ ಸ್ವೀಕರಿಸಿ ಮಾತನಾಡಿದ ಸಚಿವರು,  ನನಗೆ ಮುಜರಾಯಿ  ಇಲಾಖೆ ಸಿಕ್ಕಿರುವುದು ಹಿಂದಿನ ಜನ್ಮದ ಪುಣ್ಯ ಅನಿಸುತ್ತದೆ. ನಮಗೆ ಮಾನಸಿಕವಾಗಿ ಶಾಂತಿ ಸಮಾಧಾನ ಬೇಕು ಅಂದರೆ ದೇವಸ್ಥಾನಕ್ಕೆ ಹೋಗಿ ದೇವರಿಗೆ ಕೈಮುಗಿದಾಗ ನೆಮ್ಮದಿ ದೊರೆಯುತ್ತದೆ. ನಮ್ಮ ಹಿಂದು ಸಂಸ್ಕೃತಿ ಉಳಿಸಿಕೊಂಡು ಹೋಗಬೇಕು. ನಮ್ಮಲ್ಲಿ ವಿದೇಶಿ ಸಂಸ್ಕೃತಿ ಪಾಲನೆ ಹೆಚ್ಚಾಗುತ್ತಿದೆ ಆದರೆ, ವಿದೇಶಿಗರು ನಮ್ಮ ಸಂಸ್ಕೃತಿಯನ್ನು ಪಾಲನೆ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ನಮ್ಮ ಸಂಸ್ಕೃತಿ ರಕ್ಷಣೆಗೆ ಬದ್ದವಾಗಿದೆ. ಅದಕ್ಕೆ ಅರ್ಚಕರ ಪಾತ್ರವೂ ಮಹತ್ವದ್ದಾಗಿದೆ ಎಂದು ಹೇಳಿದರು.

ಮುಜರಾಯಿ ಇಲಾಖೆಯಲ್ಲಿ ಎ.ಬಿ.ಸಿ ದರ್ಜೆಯ ದೇವಾಲಯಗಳಲ್ಲಿ ಸಿ ದರ್ಜೆಯ ದೇವಸ್ಥಾನಗಳ ಅರ್ಚಕರ ಸಮಸ್ಯೆಗಳು ಬಹಳಷ್ಟಿವೆ.  ಪ್ರಮುಖವಾಗಿ ಅರ್ಚಕರ ಭವನ ನಿರ್ಮಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಅಲ್ಲದೆ ಅರ್ಚಕರಿಗೆ ಕ್ಯಾನ್ಸರ್, ಹೃದಯ ಸಂಬಂಧಿ  ಆರೋಗ್ಯದ ಸಮಸ್ಯೆಯಾದಾಗ ಅವರಿಗೆ ಆರ್ಥಿಕ ಸಹಾಯ ದೊರೆಯುವಂತೆ ನೋಡಿಕೊಳ್ಳಲು  ವಿಮೆ ಜಾರಿಗೊಳಿಸುವ ಬಗ್ಗೆ ಅಧಿವೇಶನದ ಬಳಿಕ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ. ತಸ್ತಿಕ್ ಹಣ  ಪಡೆಯಲು ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ರಾಜ್ಯ ಸರ್ಕಾರ ದೇವಸ್ಥಾನಗಳ ರಕ್ಷಣೆ ಹಾಗೂ ಅರ್ಚಕರ ರಕ್ಷಣೆಗೆ ಸರ್ಕಾರ ಬದ್ದವಾಗಿದೆ ಎಂದು ತಿಳಿಸಿದರು.

ವಿವಿಧ ಜಿಲ್ಲೆಗಳಿಂದ ಆಗಮಿಸಿದ ಅರ್ಚಕರು ತಮ್ಮ ಜಿಲ್ಲೆಗಳಲ್ಲಿ ಅರ್ಚಕರಿಗೆ ಇರುವ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು. ಪ್ರಮುಖವಾಗಿ ರಾಜ್ಯದ ಎಲ್ಲ ಅರ್ಚಕರ ಅನುಕೂಲಕ್ಕಾಗಿ ಬೆಂಗಳೂರಿನಲ್ಲಿ ಅರ್ಚಕರ ಭವನ  ನಿರ್ಮಿಸುವುದು, ಅರ್ಚಕರಿಗೆ ಆರೋಗ್ಯ  ವಿಮೆ ಸಿ.ದರ್ಜೆಯ ದೇವಾಲಯಗಳ ಹಣವನ್ನು ಹೆಚ್ಚಳ ಮಾಡುವುದು, ಅರ್ಚಕರ ಮಕ್ಕಳಿಗೆ ಪೂಜಾ ತರಬೇತಿ ನೀಡಲು ಪಂಡಿತರನ್ನು ಕರೆಯಿತು ತರಬೇತಿ ನೀಡುವುದು,  ಸಾಮಾನ್ಯ ಸಂಪ್ರದಾಯ ನಿಧಿಯಿಂದ ಬ್ರಹ್ಮೋತ್ಸವ ನಡೆಸಲು ಸರ್ಕಾರದಿಂದ ಆರ್ಥಿಕ ಸಹಾಯ ಹಾಗೂ  ಅರ್ಚಕರು ಮನೆ ನಿರ್ಮಿಸಿಕೊಳ್ಳಲು ಕನಿಷ್ಠ ಐದು ಲಕ್ಷ ಸರ್ಕಾರದಿಂದ ಹಣ ಮಂಜೂರು ಮಾಡುವಂತೆ ಮನವಿ  ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next