ಬಂಗಾರಪೇಟೆ: ಗ್ರಾಪಂಗಳ ವ್ಯಾಪ್ತಿಯಲ್ಲಿ ಲೇಔಟ್‌ಗಳು ಮಾಡುವ ನೆಪದಲ್ಲಿ ಸರ್ಕಾರದ ಖರಾಬು, ಗುಂಡುತೋಪು, ಕೆರೆ, ಕುಂಟೆಗಳು ಸೇರಿದಂತೆ ಸರ್ಕಾರದ ಭೂ ಕಾಯ್ದೆ ವಿರುದ್ಧವಾಗಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು ಅಕ್ರಮ ಇ-ಸ್ವತ್ತು ಖಾತೆಗಳನ್ನು ಮಾಡಿದರೆ, ರದ್ದುಪಡಿಸಿ ಅಂತಹ ಗ್ರಾಪಂಗಳ ಪಿಡಿಒ ಸೇರಿದಂತೆ ಇಂತಹ ಅಕ್ರಮದಲ್ಲಿ ಭಾಗಿಯಾಗಿರುವವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಜಿಪಂ ಸಿಇಒ ಎಂ.ಆರ್.ರವಿಕುಮಾರ್ ಎಚ್ಚರಿಸಿದ್ದಾರೆ.
ಪಟ್ಟಣದ ತಾಪಂ ಕಚೇರಿ ಸಭಾಂಗಣದಲ್ಲಿ ಜಿಪಂ ವ್ಯಾಪ್ತಿಯ ವಿವಿಧ ಇಲಾಖೆಗಳ ಅಧಿಕಾರಿಗಳ ಹಾಗೂ ಗ್ರಾಪಂ ಪಿಡಿಒ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಇ-ಸ್ವತ್ತು ಖಾತೆಗೆ ಸಂಬಂಧಪಟ್ಟಂತೆ ಸಾಕಷ್ಟು ದೂರುಗಳು ಬರುತ್ತಿವೆ ಎಂದರು.
ದಾಖಲೆ ಪರಿಶೀಲನೆ: ಗ್ರಾಪಂ ಪಿಡಿಒಗಳು ಇ-ಸ್ವತ್ತು ಮಾಡುವ ಮುಂಚೆ ಎಲ್ಲಾ ದಾಖಲೆಗಳನ್ನು ಪರಿಶೀಲನೆ ಮಾಡಿ ಆ ನಂತರವೇ ಇ-ಸ್ವತ್ತು ಮಾಡುವ ಕೆಲಸ ಮಾಡಬೇಕಾಗಿರುತ್ತದೆ. ಇಲ್ಲವಾದಲ್ಲಿ ಯಾವುದೇ ತಪ್ಪು ದಾಖಲೆಗಳಿಂದಇ-ಸ್ವತ್ತು ಮಾಡಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಗಮನಕ್ಕೆ ತಂದರೆ ಅನುಮತಿ: ಗ್ರಾಪಂಗಳಲ್ಲಿ ಸಾಕಷ್ಟು ಮೂಲಭೂತ ಸಮಸ್ಯೆಗಳು ಎದುರಾಗಲಿವೆ. ಕುಡಿಯುವ ನೀರಿನ, ವಿದ್ಯುತ್ ದೀಪ, ಚರಂಡಿಗಳ ಸ್ವತ್ಛತೆ, ರಸ್ತೆ ಅಭಿವೃದ್ಧಿ ಸೇರಿದಂತೆ ಸಾಕಷ್ಟು ದೂರುಗಳು ಪ್ರತಿದಿನ ಬರುತ್ತಿವೆ. ಗ್ರಾಪಂ ವ್ಯಾಪ್ತಿಯಲ್ಲಿ ಯಾವುದೇ ಸಮಸ್ಯೆ ಬಂದಲ್ಲಿ ತಕ್ಷಣವೇ ನನ್ನ ಗಮನಕ್ಕೆ ತಾಪಂ ಇಒ ಮೂಲಕ ತಂದಲ್ಲಿ ಅನುಮತಿ ನೀಡಲಾಗುವುದು ಎಂದರು.
ಗ್ರಾಪಂಗಳಲ್ಲಿ ಸರ್ಕಾರದ ಯೋಜನೆಗಳಾದ ನರೇಗಾ, ಸ್ವಚ್ಛ ಭಾರತ್, ಅಂಗವಿಕಲರ ಅಭಿವೃದ್ಧಿ ಕಾರ್ಯಕ್ರಮಗಳು ಸೇರಿದಂತೆ ಸಕಾಲಕ್ಕೆ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ. ಸದ್ಯಕ್ಕೆ ಕೋವಿಡ್ ಸಮಸ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳು ಸಂಪೂರ್ಣವಾಗಿ ಮುಚ್ಚಿರುವುದರಿಂದ ಎಲ್ಲಾ ಮಕ್ಕಳು ಸರ್ಕಾರಿ ಶಾಲೆಗಳಿಗೆ ಬರುತ್ತಿರುವುದರಿಂದ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿದೆ ಎಂದರು.
ಜಿಪಂ ಉಪ ಕಾರ್ಯದರ್ಶಿ ಆರ್.ಸಂಜೀವಪ್ಪ, ಜಿಪಂ ಯೋಜನಾ ನಿರ್ದೇಶಕ ಮುನಿಕೃಷ್ಣಪ್ಪ, ಸಹಾಯಕ ಯೋಜನಾ ನಿರ್ದೇಶಕ ಗೋವಿಂದೇಗೌಡ, ವಸಂತ್‌ಕುಮಾರ್, ತಾಪಂ ಇಒ ಎನ್.ವೆಂಕಟೇಶಪ್ಪ, ಪಂಚಾಯತ್ ರಾಜ್‌ಇಲಾಖೆ ಎಇಇ ಹೆಚ್.ಡಿ.ಶೇಷಾದ್ರಿ, ಲೋಕೋಪಯೋಗಿ ಇಲಾಖೆ ಎಇಇ ಎಂ.ರವಿ, ರೇಷ್ಮೆ ಸಹಾಯಕ ನಿರ್ದೇಶಕ ಎಸ್.ಎನ್. ಶ್ರೀನಿವಾಸ್, ಕೃಷಿ ಇಲಾಖೆ ಎಡಿ ಆಸೀಫ್ವುಲ್ಲಾ ಖಾನ್, ತೋಟಗಾರಿಕೆ ಇಲಾಖೆ ಎಡಿ ಶಿವಾರೆಡ್ಡಿ ಹಾಜರಿದ್ದರು.