ಹನುಮಸಾಗರ: ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಬೇಕು. ಈ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವಿಕಾಸ ಕಿಶೋರ ಸುರಳ್ಕರ್ ಹೇಳಿದರು.
ಹನುಮಸಾಗರ ಸಮೀಪದ ತುಗ್ಗಲದೋಣಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಯೋಜನೆಯಡಿ ಹಮ್ಮಿಕೊಂಡಿರುವ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮದ ಯುವಕರು, ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ನಮ್ಮ ಭಾಗದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹಿಂದೆ ಉಳಿದಿದ್ದಾರೆ. ಆದ್ದರಿಂದ ಗ್ರಾಮೀಣ ಭಾಗದ ಶಾಲೆಗಳಲ್ಲಿರುವ ಶಿಕ್ಷಕರ ಕೊರತೆ ನಿಗಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾಧಿಕಾರಿ ಮಾತನಾಡಿ, ಶಿಕ್ಷಕರ ಸಮಸ್ಯೆ ಇದು ಎಲ್ಲೆಡೆ ಇರುವಂತಹದ್ದು. ಮಕ್ಕಳ ಸಂಖ್ಯೆಗಳಿಗೆ ತಕ್ಕಂತೆ ಶಾಲೆಗಳಲ್ಲಿ ಈಗಾಗಲೇ ಅಥಿತಿ ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ. ಆದರೂ ಶಿಕ್ಷಕರ ಸಮಸ್ಯೆ ಉಂಟಾದಲ್ಲಿ ನಿಮ್ಮ ಗ್ರಾಮದಲ್ಲಿರುವ ಪದವೀಧರರ ಪಟ್ಟಿ ಮಾಡಿ ಅವರೊಟ್ಟಿಗೆ ಮಕ್ಕಳಿಗೆ ಸಂಜೆ ಪಾಠ ಮಾಡಿಸಲು ವ್ಯವಸ್ಥೆ ಮಾಡಿಸಬೇಕು. ಅವರಿಗೆ ಗ್ರಾಪಂನ ತೆರಿಗೆ ಹಣದಲ್ಲಿ ಗೌರವಧನ ನೀಡಲು ಕ್ರಮ ಕೈಗೊಳ್ಳಬೇಕು. ಇದರಿಂದಾಗಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯ ಜತೆಗೆ ಪದವೀಧರರಿಗೆ ಕೆಲಸ ನೀಡಿದಂತಾಗುತ್ತದೆ ಎಂದು ಹೇಳಿದರು.
Related Articles
ಗ್ರಾಮದಲ್ಲಿ ರಾತ್ರಿ ವೇಳೆಯಲ್ಲಿ ವಿದ್ಯುತ್ ಸಂಪರ್ಕವಿಲ್ಲದಿರುವುದರಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಆದ್ದರಿಂದ ಜಮೀನುಗಳಿಗೆ 24 ಗಂಟೆಗಳ ನಿರಂತರ ತ್ರೀ ಪೇಸ್ ವಿದ್ಯುತ್ ಸರಬರಾಜಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಬೇಕು ಎಂದು ಜನರು ಮನವಿ ಮಾಡಿದರು.
ಜಿಲ್ಲಾಧಿಕಾರಿಯವರು ವಿದ್ಯುತ್ ಸಂಬಂಧಿಸಿದಂತೆ ಜೆಸ್ಕಾಂ ಇಲಾಖೆ ಅಧಿಕಾರಿಗಳ ಜೊತೆಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಹೇಳಿದರು.
ಪಡಿತರ ಕೇಂದ್ರದ ಪರವಾನಗಿ ರದ್ದತಿಗೆ ಕ್ರಮ: ಗ್ರಾಮಸ್ಥರು ನಮ್ಮ ಗ್ರಾಮದಲ್ಲಿ ಪಡಿತರ ಹಂಚುವಾಗ ಪ್ರತಿಯೊಬ್ಬರಿಂದ ತಲಾ ಹತ್ತು ರೂ. ಹೆಚ್ಚುವರಿಯಾಗಿ ಕೊಟ್ಟರೆ ಮಾತ್ರ ನಮಗೆ ಪಡಿತರ ನೀಡುತ್ತಾರೆ ಎಂದು ಜನರು ಆರೋಪಿಸಿದರು. ಇದಕ್ಕೆ ಆಹಾರ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜು ನಾಯಕ ಈ ಬಗ್ಗೆ ಕುಲಂಕುಷವಾಗಿ ಪರಿಶೀಲಿಸಿ ಅವರನ್ನು ಅಮಾನತು ಮಾಡಿ ಪಡಿತರ ಕೇಂದ್ರದ ಪರವಾನಗಿ ರದ್ದು ಮಾಡಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಲಂಚ ಆರೋಪ: ನಮ್ಮ ಪಂಚಾಯತನಲ್ಲಿ ಬಡವರು ಮನೆ ಕೇಳಿದರೆ ಪಿಡಿಒ 30 ಸಾವಿರ ರೂ. ಲಂಚ ಕೇಳುತ್ತಾರೆ. ಲಂಚ ಕೊಟ್ಟರೆ ಮಾತ್ರ ಮನೆ ನೀಡುವುದಾಗಿ ಹೇಳುತ್ತಾರೆ ಎಂದು ಸಾರ್ವಜನಿಕರು ಆರೋಪಿಸಿದರು. ಜಿಲ್ಲಾಧಿಕಾರಿಗಳು ನೀವು ಮೊದಲು ಲಂಚ ನೀಡುವುದು ತಪ್ಪು. ಲಂಚ ಕೇಳಿದ ಬಗ್ಗೆ ಸೂಕ್ತ ದಾಖಲೆ ಅಥವಾ ತಾಲೂಕು ಅಧಿಕಾರಿಗಳ ಗಮನಕ್ಕೆ ತರಬೇಕು. ಅದು ಬಿಟ್ಟು ನೀವೆ ಲಂಚ ನೀಡಿದ್ದೇವೆ ಎಂದು ಹೇಳಿದರೆ ಹೇಗೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಅರ್ಜಿ ಸಲ್ಲಿಸಿ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಗ್ರಾಮದಲ್ಲಿ ಮನೆ ಕಟ್ಟುವುದು ನಮಗೆ ದೊಡ್ಡ ತಲೆ ನೋವಾಗಿದೆ. ನಮ್ಮ ಗ್ರಾಮದ ಸುತ್ತಮುತ್ತಲಿನ ಕೆರೆ ಕಟ್ಟೆಗಳಲ್ಲಿ ಇರುವ ಮರಳು ಮತ್ತು ಮನೆ ಕಟ್ಟಲು ಕಲ್ಲನ್ನು ತರುವುದು ಸಮಸ್ಯೆಯಾಗಿದೆ. ಮರಳು ಮತ್ತು ಕಲ್ಲನ್ನು ತರಲು ಹೋದರೆ ಪೊಲೀಸರು ಹಿಡಿದು ದಂಡ ಹಾಕುತ್ತಾರೆ. ಹಾಗಾದರೆ ನಾವು ಮನೆ ಕಟ್ಟುವುದೇ ಬೇಡವಾ ಎಂದು ಜಿಲ್ಲಾಧಿಕಾರಿಯವರನ್ನು ಪ್ರಶ್ನಿಸಿದರು.
ಜಿಲ್ಲಾಧಿಕಾರಿ ಮಾತನಾಡಿ, ಎಲ್ಲಿ ಹಳ್ಳದಲ್ಲಿ ಮರಳು ಇದೆ ಅಲ್ಲಿ ಪಂಚಾಯತನಿಂದ ಮರಳು ತೆಗೆಯಲು ಅವಕಾಶವಿದೆ. ಪಂಚಾಯತನವರಿಗೆ ಪರವಾನಗಿ ನೀಡುತ್ತೇವೆ. ಪಂಚಾಯತನವರು ಮರಳು ಪಾಯಿಂಟ್ ಮೂಲಕ ಟ್ರ್ಯಾಕ್ಟರ್ ಮೂಲಕ ಯಾವುದೇ ವಾಹನದ ವ್ಯವಸ್ಥೆ ಹೊಂದಿದವರಿಗೆ ರಾಯಲ್ಟಿ ಕಟ್ ಮಾಡಿಕೊಂಡು ಮರಳು ಸರಬರಾಜು ಮಾಡುತ್ತಾರೆ ಎಂದು ಹೇಳಿದರು.
ಶಾಸಕ ಅಮರೇಗೌಡ ಬಯ್ನಾಪುರ ಮಾತನಾಡಿ, ಸಾರ್ವಜನಿಕರ ಸಹಕಾರದಿಂದ ಮಾತ್ರ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ. ಆದ್ದರಿಂದ ಮಕ್ಕಳನ್ನು ಹೊಲ ಮನೆ ಕೆಲಸಗಳಲ್ಲಿ ತೊಡಗಿಸಿಕೊಳ್ಳಬಾರದು ಎಂದರು.
ಗ್ರಾಮದ ವಿವಿಧ ಕಡೆಗಳಲ್ಲಿ ಸಂಚರಿಸಿ ಗ್ರಾಮದ ಕುಂದುಕೊರತೆಗಳ ಕುರಿತು ಪರಿಶೀಲಿಸಿದರು. ಎಸಿ ಬಸಟ್ಟೆಪ್ಪ ಹಾಗೂ ತಾಪಂ ಇಒ ಶಿವಪ್ಪ ಸುಭೇದಾರ, ತಹಶೀಲ್ದಾರ್ ಸಿದ್ದೇಶ, ಗ್ರಾಮ ಲೆಕ್ಕಾಧಿಕಾರಿ ಶರಣಪ್ಪ ಹುಡೇದ, ಜಿಲ್ಲಾಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.