Advertisement

ಸನ್ನಡತೆ ಕೈದಿಗಳ ಬಿಡುಗಡೆಗೆ ಕ್ರಮ

11:25 AM Sep 13, 2017 | Team Udayavani |

ಬೆಂಗಳೂರು: ಸನ್ನಡತೆ ಆಧಾರದ ಮೇಲೆ ಬಿಡುಗಡೆಗೆ ಸಿದ್ದಪಡಿಸಿರುವ 29 ಮಂದಿ ಕೈದಿಗಳ ಪಟ್ಟಿಯ ಬಗ್ಗೆ ರಾಜ್ಯಪಾಲರು ಕೆಲವೊಂದು ಸ್ಪಷ್ಟನೆ ಕೇಳಿದ್ದು, ಸದ್ಯದಲ್ಲೇ ರಾಜ್ಯಪಾಲ ವಿ.ಆರ್‌.ವಾಲಾ ಅವರನ್ನು ಭೇಟಿ ಮಾಡಿ ಅನುಮೋದನೆ ನೀಡುವಂತೆ ಮನವಿ ಮಾಡಲಾಗುವುದು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

Advertisement

ಗೃಹ ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಮಂಗಳವಾರ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, “ಸ್ವಾತಂತ್ಯೊತ್ಸವ ಸಂದರ್ಭದಲ್ಲಿ 29 ಮಂದಿ ಸನ್ನಡತೆ ಕೈದಿಗಳ ಪಟ್ಟಿಯನ್ನು ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ಆದರೆ, ಈ ಪೈಕಿ ಕೆಲ ಕೈದಿಗಳ ಬಗ್ಗೆ ಗಂಭೀರ ಆರೋಪ ಇದ್ದರಿಂದ ರಾಜ್ಯಪಾಲರು ಸ್ಪಷ್ಟನೆ ಕೇಳಿದ್ದಾರೆ.

ಹೀಗಾಗಿ ಈ ಬಾರಿಯ ಸ್ವಾತಂತ್ಯೊತ್ಸವದಲ್ಲಿ ಯಾವುದೇ ಕೈದಿಗಳ ಬಿಡುಗಡೆ ಮಾಡಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಕಾರಾಗೃಹ ಇಲಾಖೆಯ ಎಡಿಜಿಪಿ ಎನ್‌.ಎಸ್‌.ಮೇಘರಿಕ್‌ ಮತ್ತು ಇತರೆ ಅಧಿಕಾರಿಗಳ ಜತೆ ರಾಜ್ಯಪಾಲರನ್ನು ಭೇಟಿಯಾಗಿ ಸ್ಪಷ್ಟನೆ ನೀಡಿ, ಅನುಮೋದನೆ ನೀಡುವಂತೆ ಮನವಿ ಮಾಡುತ್ತೇನೆ,’ ಎಂದು ತಿಳಿಸಿದರು.

ಇದರೊಂದಿಗೆ 93 ಮಂದಿಯ ಪ್ರತ್ಯೇಕ ಪಟ್ಟಿಯನ್ನು ಜೈಲಿನ ಅಧಿಕಾರಿಗಳು ಸಿದ್ದಪಡಿಸಿದ್ದಾರೆ. ಮುಖ್ಯಮಂತ್ರಿಗಳ ಗಮನಕ್ಕೆ ತಂದು ಬಿಡುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಇದರೊಂದಿಗೆ 10 ವರ್ಷ ಜೈಲು ಶಿಕ್ಷೆ ಅನುಭವಿಸಿರುವ 60 ವರ್ಷ ದಾಟಿದ ಮಹಿಳಾ ಕೈದಿಗಳನ್ನು ಪ್ರಕರಣಗಳ ಅನುಸಾರ, 14 ಮತ್ತು 20 ವರ್ಷ ಶಿಕ್ಷೆ ಅನುಭವಿಸಿರುವ 65 ವಯಸ್ಸಿನ ಪುರುಷ ಕೈದಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.

ಜತೆಗೆ 19 ವರ್ಷ ಮೇಲ್ಪಟ್ಟ ಕೈದಿಗಳಿಗೆ ಉತ್ತಮ ಭವಿಷ್ಯ ಕಲ್ಪಿಸಲು ಅವರಿಗೆ ಶಿಕ್ಷಣ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು. “ಕಾರಾಗೃಹ ಆವರಣದೊಳಗೆ ಮಾದಕ ವಸ್ತುಗಳು, ಮೊಬೈಲ್‌ ಕೊಂಡೊಯ್ಯುತ್ತಿರುವ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ಕಠಿಣ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ.

Advertisement

ಹಾಗೆಯೇ 2ಜಿ ಜ್ಯಾಮರ್‌ ಅನ್ನು 4ಜಿಗೆ ಬದಲಾವಣೆ ಮಾಡುವಂತೆಯೂ ತಿಳಿಸಲಾಗಿದೆ. ಕಾರಾಗೃಹ ಸಿಬ್ಬಂದಿಗೆ ವಸತಿ ನಿಲಯಗಳ ಸಮಸ್ಯೆಯಿದೆ. ಹೀಗಾಗಿ ಕಾರಾಗೃಹ ಇಲಾಖೆಯ ಜಾಗದಲ್ಲೇ ಸಿಬ್ಬಂದಿಗೆ ವಸತಿ ನಿಲಯ ನಿರ್ಮಿಸಲು ಕ್ರಮಕೈಗೊಳ್ಳಲಾಗುವುದು. ಅಲ್ಲದೇ, ಜೈಲಿನಲ್ಲಿ ರೌಡಿಸಂ, ಗುಂಪುಗಾರಿಗೆ ಮತ್ತು ಗಲಾಟೆ ಮಾಡುವ ಕೈದಿಗಳನ್ನು ಗುರುತಿಸಿ, ಬೇರೆ ಜೈಲುಗಳಿಗೆ ಸ್ಥಳಾಂತರ ಮಾಡುವಂತೆ ಆದೇಶಿದ್ದೇನೆ.

ಜೈಲಿನ ಅಧಿಕಾರಿ ಮತ್ತು ಸಿಬ್ಬಂದಿಗೆ ಪ್ರತಿ 2 ವರ್ಷಕ್ಕೊಮ್ಮೆ ಪುನರ್‌ ಮನನ ತರಬೇತಿ ನಡೆಸಲಾಗುತ್ತದೆ. ಇದರಲ್ಲಿ ಹೊಸ ತಂತ್ರಜ್ಞಾನ ವಿಷಯವನ್ನು ತಿಳಿಸಲಾಗುತ್ತದೆ. ಜೈಲಿನ ಹಿರಿಯ ಅಧಿಕಾರಿಗಳು ಕಡ್ಡಾಯವಾಗಿ ರಾಜ್ಯದ ಎಲ್ಲ ಜೈಲುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಸೂಚಿಸಿದ್ದೇನೆ,’ ಎಂದರು.

ಎಲ್ಲಾ ಬ್ಯಾರಕ್‌ಗಳಿಗೆ ಭೇಟಿ
ಮಧ್ಯಾಹ್ನ 2.30ರ ಸುಮಾರಿಗೆ ಕಾರಾಗೃಹಕ್ಕೆ ಆಗಮಿಸಿದ ಸಚಿವ ರಾಮಲಿಂಗಾ ರೆಡ್ಡಿ ಸಂಜೆ 4.30ರವರೆಗೆ ಜೈಲಿನ ಎಲ್ಲ ಬ್ಯಾರಕ್‌ಗಳಿಗೆ ಭೇಟಿ ನೀಡಿದರು. ವಿಚಾರಣಾಧೀನ ಕೈದಿ, ಸಜಾ ಕೈದಿ, ಮಹಿಳಾ, ವಿಐಪಿ ಕೈದಿಗಳ ಬ್ಯಾರಕ್‌, ಬೇಕರಿ, ಕರಕುಶಲ ತಯಾರಿಕಾ ಕಾರ್ಖಾನೆ, ಬೇಕರಿ, ಸೋಪು ಕಾರ್ಖಾನೆ, ಬಟ್ಟೆ ನೇಯಿಗೆ ಸೇರಿದಂತೆ ಎಲ್ಲೆಡೆ ಭೇಟಿ ನೀಡಿದರು. ಬಳಿಕ ಅಧಿಕಾರಿಗಳ ಜತೆ ಸಭೆ ನಡೆಸಿದ ಅವರು, ಅಡುಗೆ ಮನೆ, ಶೌಚಾಗೃಹದಲ್ಲಿ ಸ್ವತ್ಛತೆ ಕಾಪಾಡಲಾಗಿದೆ.

ಜೈಲು ಆಸ್ಪತ್ರೆಯಲ್ಲಿ 100 ಹಾಸಿಗೆ ಸೌಲಭ್ಯ ಇದ್ದು, ಇದು ಸಾಕಾಗುತ್ತಿಲ್ಲ. ಹೆಚ್ಚುವರಿ ಹಾಸಿಗೆ ಕಲ್ಪಿಸಲು ನೀಲನಕ್ಷೆ ಸಿದ್ದಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಎಡಿಜಿಪಿ ಮೇಘರಿಕ್‌, ಗೃಹ ಇಲಾಖೆ ಕಾರ್ಯದರ್ಶಿ ಗರ್ಗ್‌, ಡಿಐಜಿ ರೇವಣ್ಣ , ವೀರಭ್ರದ್ರಸ್ವಾಮಿ ಇತರರು ಇದ್ದರು.

ಶಶಿಕಲಾ ಕೈ ಮುಗಿದರು, ನಾನೂ ನಮಸ್ಕರಿಸಿದೆ 
ಈ ಹಿಂದೆ ಕೇಳಿ ಬಂದ ಕಾರಾಗೃಹ ಅಕ್ರಮ ಕುರಿತು ಬಾರಿ ಚರ್ಚೆಗೆ ಗ್ರಾಸವಾದ ತಮಿಳುನಾಡಿನ ಎಐಎಡಿಎಂಕೆ ಮಾಜಿ ನಾಯಕಿ ಶಶಿಕಲಾ ನಟರಾಜನ್‌ ಕೊಠಡಿಗೂ ಭೇಟಿ ನೀಡಿದ್ದೇನೆ. ಅವರು ನಮ್ಮನ್ನು ನೋಡಿ ಕೈ ಮುಗಿದರು. ನಾನು ಕೂಡ ಅವರಿಗೆ ನಮಸ್ಕರಿಸಿದೆ. ಆದರೆ, ಮಾತುಕತೆ ನಡೆಸಲಿಲ್ಲ. ಈ ಹಿಂದಿನ ಆರೋಪದಂತೆ ಅವರ ಕೊಠಡಿಯಲ್ಲಿ ಯಾವುದೇ ವಿಐಪಿ ಸೌಲಭ್ಯ ಇರಲಿಲ್ಲ. ಸಾಮಾನ್ಯ ಮಹಿಳಾ ಕೈದಿಯಂತೆ ಇದ್ದಾರೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next