Advertisement
ವಿಧಾನಸೌಧದಲ್ಲಿ ಗುರುವಾರ ಬಿಬಿಎಂಪಿ ಕಾಯ್ದೆ- 2020ರ ಕಲಂ 144 (6) ಮತ್ತು (21)ರ ಅಂಶಗಳನ್ನು ಇತರ ಮಹಾನಗರ ಪಾಲಿಕೆಗಳಿಗೆ/ ನಗರ ಸ್ಥಳೀಯ ಸಂಸ್ಥೆಗಳಿಗೆ ವಿಸ್ತರಿಸುವ ಸಂಬಂಧ ಕರ್ನಾಟಕ ಮಹಾನಗರ ಪಾಲಿಕೆಗಳ ಕಾಯ್ದೆ 1976 ಹಾಗೂ ಕರ್ನಾಟಕ ಪುರಸಭೆ ಕಾಯ್ದೆ 1964ರಲ್ಲಿ ಅಳವಡಿಸಿಕೊಳ್ಳುವ ಕುರಿತ ಸಾಧಕ ಬಾಧಕ ಪರಿಶೀಲಿಸಲು ಸೂಕ್ತ ತೀರ್ಮಾನ ಕೈಗೊಳ್ಳಲು ರಚಿಸಲಾಗಿರುವ ಉಪಸಮಿತಿಯ ಮೊದಲ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಸಚಿವ ಈಶ್ವರ ಖಂಡ್ರೆ, ಅರಣ್ಯ ಕಾಯ್ದೆಯಲ್ಲಿ ಅರಣ್ಯ ಭೂಮಿ ಒತ್ತುವರಿ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸುವುದರ ಜತೆಗೆ, ಒತ್ತುವರಿದಾರರನ್ನು ಬಂಧಿಸಿ ಶಿಕ್ಷೆಗೊಳಪಡಿಸಲೂ ಅವಕಾಶವಿದೆ. ಅದೇ ರೀತಿ ಕಂದಾಯ ಭೂಮಿ ಒತ್ತುವರಿ ಮಾಡಿದವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲು ಲಭ್ಯವಿರುವ ಕಾಯ್ದೆಗೆ ತಿದ್ದುಪಡಿ ತರಬೇಕಿದೆ. ಅರಣ್ಯ ಕಾಯ್ದೆಯ ಅಂಶಗಳನ್ನೂ ಅದಕ್ಕೆ ಸೇರಿಸಬೇಕಿದೆ ಎಂದು ಸಲಹೆ ನೀಡಿದರು.
Related Articles
Advertisement
ಅಕ್ರಮ-ಸಕ್ರಮ ಯೋಜನೆ ಜಾರಿ ಮಾಡಲು ಪ್ರಸ್ತುತ ಸನ್ನಿವೇಶದಲ್ಲಿ ಸಾಧ್ಯವಿಲ್ಲ. ಈ ಸಂಬಂಧದ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿದೆ. ಇನ್ನು ಮುಂದೆ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಆಸ್ಪದ ನೀಡುವುದಿಲ್ಲ. ಈಗಾಗಲೇ ಹತ್ತಾರು ವರ್ಷಗಳಿಂದ ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಿರುವ ಮನೆಗಳಿಗೆ ದಂಡ ವಿಧಿಸಿ ಸಕ್ರಮಗೊಳಿಸುವ ಕುರಿತಂತೆ ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಿಸುವ ಪ್ರಯತ್ನ ಮಾಡಬೇಕು ಎಂದೂ ಹೇಳಿದರು.
ತಂತ್ರಾಂಶದಿಂದ ಅಕ್ರಮಕ್ಕೆ ಕಡಿವಾಣಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಕಾನೂನುಬದ್ಧ ಮಾರ್ಗದಲ್ಲಿ ನಿವೇಶನ ಲಭಿಸಿದರೆ, ನಕ್ಷೆ ಮಂಜೂರಾತಿ ಪ್ರಕ್ರಿಯೆ ಸರಳವಾದರೆ ಅಕ್ರಮ ಬಡಾವಣೆ ಮತ್ತು ಕಟ್ಟಡ ನಿರ್ಮಾಣ ತಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಇನ್ನು ಮುಂದೆ ಅನಧಿಕೃತ ಬಡಾವಣೆ ತಲೆಎತ್ತದಂತೆ ತಡೆಯಲು ಆರ್‌ಟಿಸಿಯ ಕಾಲಂ 11ರಲ್ಲಿ ಅಕ್ರಮ ಬಡಾವಣೆ ಎಂದು ನಮೂದಿಸಿ, ಅದು ಉಪ ನೋಂದಣಾಧಿಕಾರಿಗಳಿಗೆ ಕಾವೇರಿ ತಂತ್ರಾಂಶದಲ್ಲಿ ನೇರ ಸಂಪರ್ಕಿತವಾಗುವಂತೆ ಮಾಡಿದರೆ, ಇಂತಹ ಅಕ್ರಮ ಬಡಾವಣೆ ನಿವೇಶನಗಳ ಮಾರಾಟ ತಡೆಯಬಹುದು ಎಂದು ಸಲಹೆ ಮಾಡಿದರು.
ಸಚಿವ ಎಚ್.ಕೆ. ಪಾಟೀಲ್ ಮಾತನಾಡಿ, ಇ-ಖಾತಾ ಆಧಾರದ ಮೇಲೆ ಮಾತ್ರ ನೋಂದಣಿ ಆಗಬೇಕು. ತಮ್ಮ ನಿವೇಶನಕ್ಕಿಂತ ಹೆಚ್ಚಿನ ಅಳತೆಯಲ್ಲಿ ಸರಕಾರಿ ಭೂಮಿ ಒತ್ತುವರಿ ಮಾಡಿ ಯಾರೇ ಕಟ್ಟಡ ನಿರ್ಮಿಸಿದ್ದರೆ, ಖಾತೆಯಲ್ಲಿ ಮಾಲಕರ ಹೆಸರು ಮತ್ತು ಸರಕಾರ ಎಂದು ನಮೂದಾಗುವಂತೆ ಮಾಡಬೇಕು ಮತ್ತು ಬಡವರು, ದಲಿತರು, ದುರ್ಬಲರು ಕಟ್ಟಿರುವ ಮನೆಗಳ ವಿಚಾರದಲ್ಲಿ ತೆರಿಗೆ ವಿಧಿಸುವಾಗ ಮಾನವೀಯತೆ ತೋರಿಸಬೇಕು ಎಂಬ ಸಲಹೆ ನೀಡಿದರು. ಸಚಿವ ರಹೀಂಖಾನ್, ಹಿರಿಯ ಅಧಿಕಾರಿಗಳಾದ ಮನೀಶ್ ಮೌದ್ಗಿಲ್, ನಿತೇಶ್ ಮತ್ತಿತರರು ಭಾಗವಹಿಸಿದ್ದರು. 5 ಸಾವಿರ ಕೋಟಿ ರೂ. ಆದಾಯ ನಿರೀಕ್ಷೆ
ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ 34.35 ಲಕ್ಷ ಅನಧಿಕೃತ ಆಸ್ತಿಗಳಿಂದ 4ರಿಂದ 5 ಸಾವಿರ ರೂ. ನಿರ್ವಹಣೆ ಶುಲ್ಕ ಅಥವಾ ಆಸ್ತಿ ತೆರಿಗೆ ಸಂಗ್ರಹವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಬಗ್ಗೆಯೂ ಸಚಿವ ಸಂಪುಟ ಉಪಸಮಿತಿಯು ಸರಕಾರಕ್ಕೆ ಸಲ್ಲಿಸುವ ವರದಿಯಲ್ಲಿ ಉಲ್ಲೇಖೀಸಲು ಸಭೆಯಲ್ಲಿ ಚರ್ಚಿಸಲಾಯಿತು.