Advertisement

ಕೊಲ್ಲಿ ರಾಷ್ಟ್ರಗಳಲ್ಲಿ ಕನ್ನಡ ಬೋಧನೆಗೆ ಕ್ರಮ

11:29 AM May 12, 2017 | Team Udayavani |

ಬೆಂಗಳೂರು: ಕೊಲ್ಲಿ ರಾಷ್ಟ್ರಗಳಲ್ಲಿ ಭಾರತೀಯರು ನಡೆಸುತ್ತಿರುವ ಶಾಲೆಗಳಲ್ಲಿ ಕನ್ನಡವನ್ನು ಐಚ್ಚಿಕ ಭಾಷೆಯಾಗಿ ಕಲಿಯಲು ಅವಕಾಶ ಕಲ್ಪಿಸುವಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರಿಗೆ ಮನವಿ ಮಾಡಿರುವುದಾಗಿ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ತಿಳಿಸಿದ್ದಾರೆ. 

Advertisement

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಕೊಲ್ಲಿ ರಾಷ್ಟ್ರಗಳಲ್ಲಿ ಅನಿವಾಸಿ ಭಾರತೀಯ ಮಕ್ಕಳಿಗೆ ಪಠ್ಯದಲ್ಲಿ ಮಲಾಯಳಂ, ತೆಲುಗು, ತಮಿಳು ಭಾಷೆಯನ್ನು ಐಚ್ಚಿಕವಾಗಿ ಕಲಿಸಲಾಗುತ್ತಿದೆ. ಕನ್ನಡವನ್ನೂ ಐಚ್ಚಿಕ ಭಾಷೆಯಾಗಿ ಕಲಿಸಲು ಅವಕಾಶ ಕಲ್ಪಿಸುವಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರಿಗೆ ಮನವಿ ಮಾಡಿದ್ದು, ಅವರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ,’ ಎಂದರು.

“ರಾಜ್ಯದಿಂದ ಹೊರ ದೇಶಕ್ಕೆ ದುಡಿಯಲು ತೆರಳುವ ಕಾರ್ಮಿಕರ ಹಿತ ದೃಷ್ಟಿಯಿಂದ ವಿದೇಶಕ್ಕೆ ತೆರಳುವ ಮುನ್ನ ಅವರ ಸಂಪೂರ್ಣ ಮಾಹಿತಿ ಪಡೆಯುವುದು ಹಾಗೂ ಪ್ರವಾಸ ಪೂರ್ವ ತರಬೇತಿ ನೀಡಲು ಚಿಂತನೆ ನಡೆಸಲಾಗುತ್ತಿದೆ. ವಿದೇಶಕ್ಕೆ ತೆರಳಿರುವ ಕಾರ್ಮಿಕರು ಅನೇಕ ಕಾರಣಗಳಿಂದ ಭಾರತಕ್ಕೆ ವಾಪಸ ಆಗುತ್ತಿದ್ದಾರೆ. ಅಂತವರಿಗೆ ಸ್ವ ಉದ್ಯೋಗ ಕಲ್ಪಿಸಿಕೊಳ್ಳಲು ಕೇಂದ್ರ ಸರ್ಕಾರ ಧನ ಸಹಾಯ ನೀಡಬೇಕೆಂದು ಮನವಿ ಮಾಡಲಾಗಿದೆ.

ವಿದೇಶದಲ್ಲಿ ತೊಂದರೆಗೊಳಗಾದ ಭಾರತೀಯರನ್ನು ಶೀಘ್ರವೇ ವಾಪಸ್‌ ಕರೆಸಲು ಇರುವ ಕಟ್ಟುಪಾಡುಗಳನ್ನು ಸಡಿಲಿಸಬೇಕು,’ ಎಂದು ಮನವಿ ಮಾಡಲಾಗಿದೆ ಎಂದರು. ಮಂಗಳೂರಿನಲ್ಲಿ ಖಾಯಂ ಪಾಸ್‌ಪೋರ್ಟ್‌ ಕಚೇರಿ ತೆರೆಯಲು ಕೋರಲಾಗಿದೆ. ವಿದೇಶದಿಂದ ವಾಪಸ್‌ ಬರುವಾಗ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಳಕೆದಾರರ ಶುಲ್ಕ ವಿಧಿಸಲಾಗುತ್ತಿದೆ.

ಇದು ಕಾರ್ಮಿಕ ವರ್ಗದವರಿಗೆ ಸಾಕಷ್ಟು ಭಾರವಾಗುವುದರಿಂದ ಆ ಶುಲ್ಕವನ್ನು ಕೈ ಬಿಡುವಂತೆ ಮನವಿ ಮಾಡಿರುವುದಾಗಿ ಆರತಿ ಕೃಷ್ಣ ತಿಳಿಸಿದರು. ಕೆಲವು ಅನಿವಾಸಿ ಕನ್ನಡಿಗರು ಯಾವುದಾದರೂ ಪ್ರಕರಣಗಳಲ್ಲಿ ಸಿಲುಕಿಕೊಂಡರೆ, ಅವರನ್ನು ಬಿಡಿಸಿಕೊಂಡು ಬರಲು ಸರ್ಕಾರದ ಪರವಾಗಿ ಕಾನೂನು ನೆರವು ನೀಡಬೇಕು ಎಂದು ಹೇಳಿದರು.

Advertisement

ಉದ್ಯೋಗ ನೀಡುವ ಏಜೆನ್ಸಿಗಳು ನೋಂದಣಿಯಾಗಿಲ್ಲ: ಹೊರ ದೇಶಗಳಲ್ಲಿ ಉದ್ಯೋಗ ಕೊಡಿಸುವ ಭರವಸೆ ನೀಡಿ, ಕಾರ್ಮಿಕರು,ಅನಕ್ಷರಸ್ಥರು ಮತ್ತು ಮಹಿಳೆಯರನ್ನು ವಿದೇಶಕ್ಕೆ ಕಳುಹಿಸಿಕೊಡುವ ಅನೇಕ ಸಂಸ್ಥೆಗಳು ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಆದರೆ, ಯಾವ ಕಂಪನಿಯೂ ನೋಂದಣಿ ಮಾಡಿಕೊಂಡಿಲ್ಲ. ಹೀಗಾಗಿ ಎಜೆನ್ಸಿಗಳು ಕಾರ್ಮಿಕರಿಗೆ ಯಾವುದೋ ದೇಶಕ್ಕೆ ಕಳುಹಿಸುವುದಾಗಿ ಹೇಳೆ ಬೇರೆ ದೇಶಕ್ಕೆ ರವಾನಿಸುತ್ತಿವೆ.

ಅಲ್ಲಿ ತೊಂದರೆಗೆ ಸಿಲುಕಿಕೊಂಡವರು ವಾಪಸ್‌ ಭಾರತಕ್ಕೆ ಬರಲು ಆ ಕಂಪನಿಗಳು ಅವರ ನೆರವಿಗೆ ಬರುವುದಿಲ್ಲ. ಈಗಾಗಲೇ ಈ ರೀತಿಯ 7 ಬೋಗಸ್‌ ಕಂಪನಿಗಳ ಬಗ್ಗೆ ದೂರು ಬಂದಿದೆ. ಅಂತಹ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಮನವಿ ಮಾಡುವುದಾಗಿ ಡಾ. ಆರತಿ ಕೃಷ್ಣ ಹೇಳಿದರು. 

ಫಿಲಿಫೈನ್ಸ್‌ನಲ್ಲಿ ಸಿಲುಕಿರುವ 16 ವೈದ್ಯ ವಿದ್ಯಾರ್ಥಿಗಳು 
ವೈದ್ಯಕೀಯ ಶಿಕ್ಷಣ ಕಲಿಯಲು ಫಿಲಿಫೈನ್ಸ್‌ಗೆ ತೆರಳಿರುವ ರಾಜ್ಯದ 16 ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರತಿ ಕೃಷ್ಣ ಹೇಳಿದರು. ಅವರನ್ನು ಫಿಲಿಫೈನ್ಸ್‌ಗೆ ಕಳುಹಿಸಿರುವ ಎಜೆನ್ಸಿ ಈಗ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.

ವಿದ್ಯಾರ್ಥಿಗಳನ್ನು ಬಿಡುಗಡೆಗೊಳಿಸಬೇಕಾದರೆ, ಹಣ ಖರ್ಚಾಗುತ್ತದೆ ಎಂದು ವಿದ್ಯಾರ್ಥಿಗಳ ತಂದೆ ತಾಯಿಗಳಿಗೆ ಒತ್ತಾಯಿಸುತ್ತಿದ್ದಾರೆ ಎಂಬ ಆರೋಪಗಳಿವೆ. ಈಗಾಗಲೇ ಆ ಕುಟುಂಬದ ಸದಸ್ಯರೊಂದಿಗೆ ಮಾತುಕತೆ ನಡೆಸಿದ್ದು, ಯಾರಿಗೂ ಹಣ ನೀಡದಂತೆ ಸೂಚಿಸಲಾಗಿದೆ. ಅಲ್ಲದೇ ಫಿಲಿಫೈನ್ಸ್‌ ರಾಯಭಾರ  ಕಚೇರಿ ಮೂಲಕ ಅವರನ್ನು ಸುರಕ್ಷಿತವಾಗಿ ವಾಪಸ್‌ ಕರೆಸುವ ಪ್ರಯತ್ನ ನಡೆದಿದೆ ಎಂದು ಆರತಿ ಕೃಷ್ಣ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next