Advertisement

ಮೀನುಗಾರರ ಸಮಗ್ರ ಅಭಿವೃದ್ಧಿಗೆ ಕ್ರಮ:ರುಪಾಲಾ

09:15 PM Mar 18, 2023 | Team Udayavani |

ಕಾರವಾರ: ಸಮುದ್ರ ಮೀನುಗಾರಿಕೆ ಮತ್ತು ಮೀನುಗಾರರ ಸರ್ವತೋಮುಖ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಪ್ರಾಥಮಿಕ ಹಂತದಿಂದಲೇ ಕ್ರಮ ಕೈಗೊಂಡಿದೆ ಎಂದು ಕೇಂದ್ರ ಮೀನುಗಾರಿಕೆ ಸಚಿವ ಪುರುಷೋತ್ತಮ ರುಪಾಲಾ ಹೇಳಿದರು.

Advertisement

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ನಗರದ ಜಿಲ್ಲಾ ರಂಗಮಂದಿರದಲ್ಲಿ ಆಯೋಜಿಸಿದ್ದ ಸಾಗರ ಪರಿಕ್ರಮ 2023 ನಾಲ್ಕನೇ ಹಂತದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮೀನುಗಾರಿಕೆ ಅಭಿವೃದ್ಧಿ ಪಡಿಸುವುದೇ ಕೇಂದ್ರ ಸರ್ಕಾರದ ಮುಖ್ಯ ಧ್ಯೇಯವಾಗಿದೆ. ಇದಕ್ಕಾಗಿಯೇ ಸರ್ಕಾರವು ನೀಲಿ ಕ್ರಾಂತಿ ಜಾರಿಗೊಳಿಸಿ 6 ಸಾವಿರ ಕೋಟಿ ಅನುದಾನ ಘೋಷಣೆ ಮಾಡಿದೆ. ಪ್ರಧಾನ ಮಂತ್ರಿಗಳು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಜಾರಿಗೊಳಿಸಿದ್ದಾರೆ. ಹಾಗೆ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಯೋಜನೆ ಕೂಡ ಜಾರಿಗೊಳಿಸಿದ್ದಾರೆ.

ಮೊದಲು ಈ ಯೋಜನೆ ಸೌಲಭ್ಯವನ್ನು ಕೇವಲ ಕೃಷಿಕರಿಗೆ ಮಾತ್ರ ವಿತರಿಸಲಾಗುತ್ತಿತ್ತು. ಇಂದು ಮೀನುಗಾರಿಕೆಗೂ ವಿಸ್ತರಿಸಿ ಮೀನುಗಾರಿಕೆ ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದಾರೆ. ಒಂದು ಯೋಜನೆ ಮುಖಾಂತರ ಮೀನುಗಾರರು ಒಂದು ಲಕ್ಷದಿಂದ 1.5 ಲಕ್ಷದವರೆಗೆ ಯಾವುದೇ ಭದ್ರತೆ ಇಲ್ಲದೆ ಬ್ಯಾಂಕುಗಳಿಂದ ಸಾಲ ಪಡೆಯಬಹುದಾಗಿದೆ ಎಂದರು.

ವಿಶೇಷವಾಗಿ ಕರ್ನಾಟಕ ಮೀನುಗಾರಿಕೆಗೆ ತನ್ನದೇ ಆದ ಕೊಡುಗೆ ನೀಡಿದೆ. ಅಲ್ಲದೆ ಪ್ರಾಚೀನ ಇತಿಹಾಸ, ಆಧುನಿಕ ಇತಿಹಾಸ, ವಿಜ್ಞಾನ, ತಂತ್ರಜ್ಞಾನ, ಸಂಸ್ಕೃತಿ ಮತ್ತು ಸಂಪನ್ಮೂಲಗಳಿಗೆ ಹೆಸರಾಗಿದೆ ಎಂದರು.
ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ರಾಜ್ಯ ಸಚಿವ ಮುರುಗನ್‌ ಮಾತನಾಡಿ, ಸಾಗರ ಪರಿಕ್ರಮ ಒಂದು ಸಾಧಾರಣ ಕಾರ್ಯಕ್ರಮವಲ್ಲ. ಕೇಂದ್ರ ಸಚಿವರು ನೇರವಾಗಿ ಮೀನುಗಾರರನ್ನು ಭೇಟಿ ಮಾಡಿ ಅವರೇ ಸಮಸ್ಯೆಗಳನ್ನು ಆಲಿಸಿ ಅವರಿಗೋಸ್ಕರ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಮನವರಿಕೆ ಮಾಡಲು ಹಾಕಿಕೊಂಡ ಕಾರ್ಯಕ್ರಮವಾಗಿದೆ ಎಂದರು.

ಮೀನುಗಾರರ ಅಭಿವೃದ್ಧಿಗೆ ಕೇಂದ್ರ ಸರಕಾರ ಮೀನುಗಾರಿಕೆ ಸಚಿವಾಲಯ ಆರಂಭಿಸಿದೆ. 2015ರ ಮೊದಲು ಕೇವಲ ಮೂರು ಸಾವಿರ ಕೋಟಿ ಇದ್ದ ಹೂಡಿಕೆ ಇಂದು 38,000 ಕೋಟಿ ಹೂಡಿಕೆ ಮಾಡಲಾಗಿದೆ ಎಂದರು.
ಇಂತಹ ಯೋಜನೆಗಳ ಮೂಲಕ ಸರ್ಕಾರ ದೇಶದ ನಾನಾ ಭಾಗಗಳಲ್ಲಿ ಮೀನುಗಾರಿಕೆ ಮಾರುಕಟ್ಟೆ, ಕೋಲ್ಡ್‌ ಸ್ಟೋರೇಜ್‌ ಹಾಗೂ ಬಂದರುಗಳನ್ನು ನಿರ್ಮಿಸಲು ಹೊರಟಿದೆ ಎಂದರು.

Advertisement

ರಾಜ್ಯ ಮೀನುಗಾರಿಕೆ ಸಚಿವ ಅಂಗಾರ್‌ ಮಾತನಾಡಿ, ಒಳನಾಡು ಮೀನುಗಾರಿಕೆ ಅಂದರೆ, ಕೃತಕವಾಗಿ ಮೀನುಗಾರಿಕೆಗೆ ಇಂದು ಹೆಚ್ಚು ಒತ್ತು ನೀಡುವುದು ಅವಶ್ಯವಿದೆ. ಕರ್ನಾಟಕಕ್ಕೆ 60 ಕೋಟಿ ಮೀನು ಮರಿ ಅವಶ್ಯಕತೆ ಇದೆ. ಅದರಲ್ಲಿ 40 ಕೋಟಿ ಮೀನು ಮರಿ ಉತ್ಪಾದಿಸಲಾಗಿದೆ. ಉಳಿದ 20 ಕೋಟಿ ಮೀನು ಮರಿಗೆ ಬೇಡಿಕೆಯಿದೆ ಎಂದರು.

ಬಾಗಲಕೋಟೆ ಜಿಲ್ಲೆಯ ಆಲಮಟ್ಟಿಯಲ್ಲಿ 25 ಹೆಕ್ಟೇರ್‌ ಪ್ರದೇಶದಲ್ಲಿ ಮೀನುಮರಿ ಉತ್ಪಾದನೆಗೆ ಈಗಾಗಲೇ ಅವಕಾಶ ನೀಡಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ನಾನಾ ಕಡೆಗಳಲ್ಲಿ ಮೀನುಮರಿ ಉತ್ಪಾದನಾ ಕೇಂದ್ರ ಆರಂಭಿಸಲಾಗುವುದು. ಆಗ ಕರ್ನಾಟಕ ಇಡೀ ದೇಶದಲ್ಲಿಯೇ ಮೀನು ಉತ್ಪಾದನೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಆಶಯ ಹೊಂದಿದ್ದೇವೆ ಎಂದರು.

ಬಳಿಕ ಪೋಸ್ಟ್‌ ಗಾರ್ಡ್‌ ಅಧಿಕಾರಿ ಮನೋಜ್‌ ಬಾಡ್ಕರ್‌ ಮಾತನಾಡಿ, ಪ್ರತಿಸಲ ನಾವು ಇಲ್ಲಿನ ಮೀನುಗಾರರ ಸಮಸ್ಯೆಗಳನ್ನು ಮಂತ್ರಿಗಳ ಗಮನಕ್ಕೆ ತರುತ್ತಿದ್ದೇವೆ ಎಂದರು.

ಶಾಸಕಿ ರೂಪಾಲಿ ನಾಯ್ಕ, ಮೀನುಗಾರಿಕೆ ಜಂಟಿ ನಿರ್ದೇಶಕ ಜೆ ಬಾಲನಿ , ಮೀನುಗಾರಿಕೆ ಮುಖ್ಯ ಕಾರ್ಯದರ್ಶಿ ಜತಿಂದ್ರ ಶೋಯಲ್‌, ಮೀನುಗಾರಿಕೆ ಜಂಟಿ ನಿರ್ದೇಶಕ ರವೀಂದ್ರ ತಾಳೆಕರ, ಉಪ ನಿರ್ದೇಶಕ ಪ್ರತೀಕ್‌, ನಗರಸಭೆ ಅಧ್ಯಕ್ಷ ನಿತೀನ್‌ ಪಿಕಳೆ, ಜಿಲ್ಲಾ ಮೀನುಗಾರಿಕೆ ಒಕ್ಕೂಟದ ಅಧ್ಯಕ್ಷ ರಾಜು ತಾಂಡೇಲ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next