ಕಾರವಾರ: ರಾಜ್ಯದ ಆಸ್ಪತ್ರೆಗಳ ಸುಧಾರಣೆಗೆ ಹಾಗೂ ವೈದ್ಯರ ನೇಮಕಕ್ಕೆ ಕ್ರಮ ತೆಗೆದುಕೊಳ್ಳುವೆ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದರು.
ಅವರು ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನೆ ನಂತರ ಮಾಧ್ಯಮಗಳಿಗೆ ವಿವರಣೆ ನೀಡಿದರು. ಈವರೆಗೆ 28 ಜಿಲ್ಲೆ ತಿರುಗಿದ್ದೇನೆ. 2009-10ರಲ್ಲಿ ಆರೋಗ್ಯ ಮಂತ್ರಿಯಾಗಿದ್ದೆ. ಆಗ ಎಚ್ 1ಎನ್1 ಬಂದಿತ್ತು. ಚಿಕನ್‌ಗುನ್ಯಾ ಬಂದಿತ್ತು. ಆಗ ಕೈಗೊಂಡ ಕ್ರಮಗಳ ಅನುಭವವಿದೆ. ಮಾರ್ಚ್ 10 ಕಲಬುರಗಿಯಲ್ಲಿ ದೇಶದ ಮೊದಲ ಸಾವಾಯಿತು. ಜನ ಪ್ಯಾನಿಕ್ ಆಗಿದ್ದರು. ಆಗ ಪರಿಸ್ಥಿತಿ ಸುಧಾರಿಸಿದೆವು. ಹತ್ತು ದಿನ ಕಲಬುರಗಿಯಲ್ಲಿ ಕೆಲಸ ಮಾಡಿದೆ. ಮುಖ್ಯಮಂತ್ರಿ ಸಹ ಕೆಲಸ ಮಾಡಿದರು. ನನ್ನ ಹುರಿದುಂಬಿಸಿ, ಜಿಲ್ಲೆಗಳ ಪ್ರವಾಸಕ್ಕೆ ಸಲಹೆ ನೀಡಿದರು ಎಂದು ಹೇಳಿದರು.
ಕೋವಿಡ್ ನಿಯಂತ್ರಣಕ್ಕೆ ಎಲ್ಲರ ಶ್ರಮವಿದೆ. ಪ್ರಾರಂಭದ ಹಾದಿ ಕಠಿಣ ವಾಗಿತ್ತು. 47 ಡಿಗ್ರಿ ಬಿಸಿಲು. ಆದರೂ ಕೆಲಸ ಮಾಡಿದರು. ಜನ ಹೊರ ಬಂದಿರಲಿಲ್ಲ. ಸರ್ಕಾರಿ ನೌಕರರು ಕಷ್ಟಪಟ್ಟು ಕೆಲಸ ಮಾಡಿದರು. ಕೋವಿಡ್ ಪಾಜಿಟಿವ್ ರಾಜ್ಯದಲ್ಲಿ 5760 ಇದ್ದು ಇದರಲ್ಲಿ 2570 ಗುಣಮುಖರಾಗಿದ್ದಾರೆ. 64 ಜನ ಸಾವನ್ನಪ್ಪಿದ್ದಾರೆ. ಇವರಲ್ಲಿ ಹೃದಯ ರೋಗಿಗಳು ಇದ್ದರು ಎಂದು ಹೇಳಿದರು.
ಗೋವಾ, ಮಹಾರಾಷ್ಟ್ರ ಗಡಿ ಹೊಂದಿದ್ದರು ನಾವು ಚೆನ್ನಾಗಿ ಕೊವಿಡ್ ನಿಭಾಯಿಸಿದ್ದೇವೆ. ಇದಕ್ಕೆ ಅಧಿಕಾರಿಗಳ ಶ್ರಮವಿದೆ. ಸಚಿವರ ಪ್ರವಾಸ ನೆಪ ಮಾತ್ರ. ಅಧಿಕಾರಿಗಳಿಗೆ ಹುಮ್ಮಸು ತರಲು ಜಿಲ್ಲಾ ಪ್ರವಾಸ ಬರುತ್ತೇನೆ. ಈ ಜಿಲ್ಲೆಯಲ್ಲಿ ಮೂರು ಸಲ ಆರೋಗ್ಯ ಸರ್ವೇ ಮಾಡಿದ್ದೀರಿ. ಜನರ ಜಾಗ್ರತೆ ಮುಖ್ಯ. ಶಾಲೆ ಪ್ರಾರಂಭಿಸುವ ಬಗ್ಗೆ ಚರ್ಚೆ ನಡೆದಿದೆ. ಆರೋಗ್ಯ ಇಲಾಖೆ ಸಿದ್ಧತೆಯಲ್ಲಿದೆ. ಜಿಲ್ಲಾಸ್ಪತ್ರೆಗಳಿಗೆ ಆಕ್ಸಿಜನ್ ಪ್ಲಾಂಟ್ ರೂಪಿಸಲು ಹಾಗೂ ಪ್ರತಿ ಬೆಡ್‌ಗೆ ಆಕ್ಸಿಜನ್ ಸಿಗುವಂತೆ ವಿಕೇಂದ್ರೀಕರಿಸಲು ತಿರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಸಚಿವರು ಹೇಳಿದರು. ಕೋವಿಡ್ ಕೇಸ್ ಇವತ್ತು ಬಂದಿಲ್ಲ. ಅದೇ ಸಂತೋಷ ಎಂದರು.
ಶಾಸಕಿ ರೂಪಾಲಿ ನಾಯಕ್ ಬೇಡಿಕೆಯಂತೆ ವೈದ್ಯರ ಖಾಲಿ ಹುದ್ದೆ ತುಂಬುವೆ. ಕೋವಿಡ್ ಕಾಲ ಮುಗಿದ ತಕ್ಷಣ ಈ ಕಾರ್ಯವಾಗಲಿದೆ ಎಂದು ಹೇಳಿದರು. ಶಾಸಕಿ ರೂಪಾಲಿ ನಾಯ್ಕ ಅಂಕೋಲಾ ಆಸ್ಪತ್ರೆಗೆ ಗೈನಾಕಾಲಾಜಿಸ್ಟ್ ನೀಡಲು ಒತ್ತಾಯಿಸಿದರು. ಕಾರವಾರ ಕಿಮ್ಸ್ ಆಸ್ಪತ್ರೆಯಲ್ಲಿ 52 ಡಯಾಲಿಸಿಸ್ ಮಾಡಿಸಿಕೊಳ್ಳುವ ರೋಗಿಗಳು ಇದ್ದು, ಈ ಕಾರ್ಯ ವ್ಯವಸ್ಥಿತವಾಗಿ ನಡೆಯಬೇಕು. ತಾಲೂಕಿನ ಕೇಂದ್ರಗಳಲ್ಲಿ ಸರ್ಕಾರಿ ಡಯಾಲಿಸಿಸ್ ಕೇಂದ್ರಗಳಾಗಬೇಕು ಎಂದರು.
ಜಿಲ್ಲಾಧಿಕಾರಿ ಹರೀಶಕುಮಾರ್ ಸಚಿವರಿಗೆ ವಿವರ ನೀಡಿ ಜಿಲ್ಲೆಯಲ್ಲಿ 9000 ಗರ್ಭಿಣಿಯರಿದ್ದಾರೆ. ಹಾಗಾಗಿ ಹೆರಿಗೆ ವೈದ್ಯರನ್ನು ಕೋವಿಡ್ ಚಿಕಿತ್ಸೆ ಕರ್ತವ್ಯಕ್ಕೆ ನಿಯೋಜಿಸಿಲ್ಲ ಎಂದರು. ಜಿಪಂ ಸಿಇಒ ಎಂ.ರೋಶನ್ ಮಾತನಾಡಿ 40 ವೆಂಟಿಲೇಟರ್ ಕಿಮ್ಸ್ ಕೋವಿಡ್ ಘಟಕದಲ್ಲಿವೆ. ಅವುಗಳು ಬಳಸುವಂಥ ಪ್ರಮೇಯ ಬಂದಿಲ್ಲ. ಮುಂದಿನ ದಿನಗಳಲ್ಲಿ ಅವುಗಳನ್ನು ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ನೀಡಲಾಗುವುದು ಎಂದರು.