Advertisement

ಡ್ರ್ಯಾಗನ್‌ ಫ್ರೂಟ್‌ ಬೆಳೆ ವಿಸ್ತರಣೆಗೆ ಕ್ರಮ

06:08 PM Jul 14, 2022 | Team Udayavani |

ಚಿಕ್ಕಬಳ್ಳಾಪುರ: ಭಾರತದಲ್ಲಿ ಒಟ್ಟಾರೆ ಡ್ರ್ಯಾಗನ್‌ ಫ್ರೂಟ್‌ ಬೆಳೆಯುವ ಪ್ರದೇಶ ಸುಮಾರು 3 ಸಾವಿರ ಹೆಕ್ಟೇರ್‌ನಷ್ಟಿದೆ. ತೋಟಗಾರಿಕೆಯ ಸಮಗ್ರ ಅಭಿವೃದ್ಧಿ ಅಭಿಯಾನದಡಿ (ಎಂಐಡಿಎಚ್‌) 2021-22ರ ಸಾಲಿನಲ್ಲಿ ಕಮಲಂ ಬೆಳೆಯುವ ಪ್ರದೇಶದ ವಿಸ್ತರಣಾ ಚಟುವಟಿಕೆ ಕೈಗೆತ್ತಿಕೊಳ್ಳಲಾಗಿದೆ.

Advertisement

ವಿವಿಧ ರಾಜ್ಯಗಳಲ್ಲಿ 4133 ಹೆಕ್ಟೇರ್‌ ಪ್ರದೇಶಕ್ಕೆ ಈ ಬೆಳೆಯನ್ನು ವಿಸ್ತರಿಸುವ ಗುರಿ ಹೊಂದಲಾಗಿತ್ತು ಎಂದು ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಹೆಚ್ಚುವರಿ ಕಾರ್ಯ ದರ್ಶಿ ಡಾ.ಅಭಿಲಕ್ಷ್ ಲಿಖಿ ಹೇಳಿದರು.

ಜಿಲ್ಲೆಯ ಮರಳಕುಂಟೆಯ ನಾರಾಯಣಸ್ವಾಮಿ ಅವರ ಡ್ರ್ಯಾಗನ್‌ ಫ್ರೂಟ್‌ ತೋಟಕ್ಕೆ ಭೇಟಿ ನೀಡಿ, ರೈತರೊಂದಿಗೆ ಸಂವಾದ ನಡೆಸಿದ ಅವರು ಮಾತನಾಡಿ, ಭಾರತದಲ್ಲಿ ಕಮಲಂ ಫ್ರೂಟ್‌ ಅಂದರೆ ಡ್ರ್ಯಾಗನ್‌ ಫ್ರೂಟ್‌ ಬೆಳೆಯುವವರ ಸಂಖ್ಯೆ ಸೀಮಿತವಾಗಿದೆ. ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್‌, ಛತ್ತೀಸ್‌ಗಢ, ಒಡಿಶಾ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪ, ಮಿಜೋರಾಂ ಮತ್ತು ನಾಗಾ ಲ್ಯಾಂಡ್‌ನ‌ಲ್ಲಿ ಈ ಫಲವನ್ನು ಬೆಳೆಯಲಾಗುತ್ತದೆ.

ಅನುಮೋದಿತ ಗುರಿ ಪ್ರದೇಶ ಕಾರ್ಯಕ್ರಮಗಳನ್ನು ಮಿಜೋರಾಂ, ನಾಗಾಲ್ಯಾಂಡ್‌, ಛತ್ತೀಸ್‌ಗಢ್‌, ಗುಜರಾತ್‌, ಕರ್ನಾಟಕ, ಅಸ್ಸಾಂ, ಆಂಧ್ರ ಪ್ರದೇಶ ಮತ್ತು ಮಣಿಪುರ ರಾಜ್ಯಗಳಲ್ಲಿ ಜಾರಿ ಮಾಡಲಾಗಿದೆ ಎಂದರು.

5 ವರ್ಷದ ಯೋಜನೆಗೆ ಮಂಜೂರಾತಿ: ಕಮಲಂನ ಮಹತ್ವವನ್ನು ಪರಿಗಣಿಸಿ 5 ವರ್ಷದ ಯೋಜನೆಗೆ ಮಂಜೂರಾತಿ ನೀಡಲಾಗಿದೆ. ಎಂ.ಐ.ಡಿ.ಎಚ್‌ನಡಿ ಮುಂದಿನ 5 ವರ್ಷಗಳಲ್ಲಿ ಕಮಲಂ ಫಲವನ್ನು ಆಮದು ಮಾಡಿಕೊಳ್ಳುವ ಬದಲು 4 ಸಾವಿರ ಹೆಕ್ಟೇರ್‌ನಿಂದ 50 ಸಾವಿರ ಹೆಕ್ಟೇರ್‌ಗೆ ವಿಸ್ತರಿಸಿ, ಸ್ವಾವಲಂಬಿ ಭಾರತ ಅಭಿಯಾನದಡಿ ಪ್ರಮುಖ ಸಾಧನೆ ಮಾಡಲು ಉದ್ದೇಶಿಸಲಾಗಿದೆ ಎಂದರು.

Advertisement

ತೋಟದ ಮಾಲಿಕ ನಾರಾಯಣಸ್ವಾಮಿ ಅವರು ಡ್ರ್ಯಾಗನ್‌ ಹಣ್ಣು ಬೆಳೆಯುವ ವಿಧಾನ, ಸಮಸ್ಯೆಗಳು, ಮಾರುಕಟ್ಟೆ ಕುರಿತು ಮಾಹಿತಿ ನೀಡಿದರು. ಕೇಂದ್ರ ಸರ್ಕಾರದಿಂದ ರೈತರಿಗೆ ಸಿಗುವ ಸೌಲಭ್ಯಗಳ ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಗುಲಾಬಿ, ಈರುಳ್ಳಿ ರಫ್ತು ಆಧಾರಿತ ಬೆಳೆಯಾಗಿದ್ದು, ರಫ್ತು ಮಾಡಲು ಪ್ರತ್ಯೇಕ ಎಚ್‌.ಎಸ್‌.ಕೋಡ್‌ ನೀಡಲು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕಿ ಎಂ.ಗಾಯಿತ್ರಿ ಮನವಿ ಮಾಡಿದರು. ತೋಟಗಾರಿಕೆ ಇಲಾಖೆ ಅಪರ ನಿರ್ದೇಶಕ ಪರಶಿವಮೂರ್ತಿ, ಜಂಟಿ ನಿರ್ದೇಶಕ (ಹನಿ ನೀರಾವರಿ) ಪ್ರಸಾದ್‌ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು, ರೈತರು ಉಪಸ್ಥಿತರಿದ್ದರು.

ಕಮಲಂ ಉತ್ಪನ್ನಕ್ಕೆ ವಿಶೇಷ ಮಹತ್ವ
ಹಣ್ಣುಗಳ ಮೇಲೆ ಕಮಲದಂತೆ ದಳಗಳು ಮತ್ತು ಆಕಾರ ಇರುವ ಕಾರಣದಿಂದ ಈ ಹಣ್ಣನ್ನು ಕಮಲಂ ಎಂದು ಜನಪ್ರಿಯಗೊಳಿಸಲು ಪ್ರಸ್ತಾಪಿಸಲಾಗಿದೆ. ಭಾರತದಲ್ಲಿ ಉತ್ಪಾದಿಸಲಾದ ಕಮಲಂನ ಉತ್ಪನ್ನಗಳಿಗೆ ವಿಶೇಷ ಮಹತ್ವ ನೀಡಲು ಮತ್ತು ಭಾರತದಲ್ಲಿ ಉತ್ಪಾದಿಸಲಾದ ಬೆಳೆಯ ಬ್ರ್ಯಾಂಡ್‌ ಆಗಿ ಮಾನ್ಯತೆ ನೀಡಲು ಕಾರ್ಯಕ್ರಮ ರೂಪಿಸಲಾಗಿದೆ. ಈ ಗಿಡ ಮರಳಿನ ಗೋಡು ಮಣ್ಣಿನಿಂದ ಹಿಡಿದು ಜೇಡಿ ಮಣ್ಣು ಮತ್ತು ವಿವಿಧ ತಾಪಮಾನದಲ್ಲಿ ಬದುಕುಳಿಯುತ್ತದೆ. ಅದರ ಬೇಸಾಯಕ್ಕೆ ಉಷ್ಣವಲಯದ ಹವಾಗುಣ ಹೆಚ್ಚು ಸೂಕ್ತವಾಗಿದೆ. ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳಲ್ಲಿ ಹೆಚ್ಚಿನ ಮಳೆಯಾಗುತ್ತದೆಯಾದರೂ ಡ್ರ್ಯಾಗನ್‌ ಫಲವನ್ನು ಸಾವಯವ ಮಾದರಿ ಮತ್ತು ಕೊಳವೆಗಳಲ್ಲಿ ಗಿಡಗಳನ್ನು ಬೆಳೆಯಬಹುದಾಗಿದೆ ಎಂದು ಡಾ.ಅಭಿಲಕ್ಷ್ ಲಿಖಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next