ವಿಧಾನಸಭೆ: ನಾನು ಗೃಹ ಸಚಿವನಾಗಿ ಅಧಿಕಾರ ಸ್ವೀಕರಿಸಿದ ನಂತರ ಪೊಲೀಸ್ ಮ್ಯಾನ್ಯುವಲ್‌ನಲ್ಲಿರುವ ರೌಡಿ ಚಟುವಟಿಕೆ ನಿಗ್ರಹ ಸೇರಿದಂತೆ ಪ್ರಮುಖ 30 ಅಂಶಗಳನ್ನು ಆದ್ಯತೆ ಮೇಲೆ ಪರಿಗಣಿಸುವಂತೆ ಸೂಚನೆ ನೀಡಿದ್ದು, ಈ ಬಗ್ಗೆ ಮತ್ತೂಮ್ಮೆ ಎಚ್ಚರಿಕೆ ನೀಡುವುದರ ಜತೆಗೆ ಅಪರಾಧ ನಿಯಂತ್ರಣಕ್ಕೂ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಬಿಬಿಎಂಪಿ ಬಿಜೆಪಿ ಸದಸ್ಯೆಯ ಪತಿ ಕದಿರೇಶ್ ಹತ್ಯೆಗೆ ಸಂಬಂಧಿಸಿದಂತೆ ಬಿಜೆಪಿ ಸದಸ್ಯ ಆರ್.ಅಶೋಕ್ ಶೂನ್ಯ ವೇಳೆಯಲ್ಲಿ ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ಕದಿರೇಶ್ ಕೊಲೆ ಮಾಡಿದ ನವೀನ್, ವಿನಯ್ ಮತ್ತು ಇನ್ನಿಬ್ಬರು ಎಲ್ಲಿದ್ದಾರೆ ಎಂಬ ಮಾಹಿತಿ ಸಿಕ್ಕಿದ್ದು, ಶೀಘ್ರ ಆರೋಪಿಗಳನ್ನು ಪೊಲೀಸರು ಬಂಧಿಸಲಿದ್ದಾರೆ ಎಂದರು.
ಹತ್ಯೆಗೊಳಗಾದ ಕದಿರೇಶ್ ಮೇಲೆ 2002ರಲ್ಲಿ ಪೊಲೀಸರು ರೌಡಿಪಟ್ಟಿ ತೆರೆದಿದ್ದು, ಆತನ ವಿರುದ್ಧ 2 ಕೊಲೆ, 2 ಕೊಲೆ ಯತ್ನ ಸೇರಿದಂತೆ 13-14 ಕ್ರಿಮಿನಲ್ ಪ್ರಕರಣಗಳಿವೆ. ಯಾವ ಕಾರಣಕ್ಕಾಗಿ ಕೊಲೆ ನಡೆದಿದೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆ ಬಳಿಕ ನಿಜಾಂಶ ತಿಳಿಯಲಿದೆ ಎಂದು ಹೇಳಿದರು.
ಮಾನದಂಡ: ಶಾಸಕರು, ಸಂಸದರ ಶಿಫಾರಸಿನಂತೆ ಪೊಲೀಸರನ್ನು ವರ್ಗಾವಣೆ ಮಾಡಬಾರದು ಎಂದು ಆರ್.ಅಶೋಕ್ ಒತ್ತಾಯಿಸಿದ್ದಾರೆ. ಆದರೆ, ಪೊಲೀಸ್ ಎಸ್ಟಾಬ್ಲಿಷ್‌ಮೆಂಟ್ ಬೋರ್ಡ್ ಮೂಲಕವೇ ವರ್ಗಾವಣೆ ನಡೆಯುತ್ತಿದ್ದು, ಯಾರ ಶಿಫಾರಸನ್ನೂ ಪರಿಗಣಿಸುತ್ತಿಲ್ಲ. ಮೇಲಾಗಿ ಪೊಲೀಸರನ್ನು ವರ್ಗಾವಣೆ ಮಾಡಬೇಕಾದರೆ ಅವರು ಒಂದು ಸ್ಥಳದಲ್ಲಿ ಕಡ್ಡಾಯವಾಗಿ ಎರಡು ವರ್ಷ ಇರಬೇಕು ಎಂಬ ಮಾನದಂಡ ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.
ಖಡಕ್ ಸೂಚನೆ: ಇತ್ತೀಚೆಗೆ ನಡೆದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ರೌಡಿಗಳ ನಿಗ್ರಹಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಕಠಿಣ ಎಚ್ಚರಿಕೆ ನೀಡಲಾಗಿದೆ. ನಿಮ್ಮ ವ್ಯಾಪ್ತಿಯಲ್ಲಿ ರೌಡಿಗಳು ಮುಕ್ತವಾಗಿ ಓಡಾಡುತ್ತಿದ್ದರೆ ಅಂತಹ ಕಡೆಗಳಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್‌ಗಳಿಗೆ ಜಾಗ ಇಲ್ಲ ಎಂಬುದಾಗಿ ಕಠಿಣ ಮಾತುಗಳಲ್ಲಿ ಹೇಳಿದ್ದೇನೆ. ಈ ಕಾರಣದಿಂದಾಗಿ ಇತ್ತೀಚಿನ ದಿನಗಳಲ್ಲಿ ರೌಡಿಗಳ ಉಪಟಳ, ಅಪರಾಧ ಪ್ರಕರಣಗಳು ಕೊಂಚ ಇಳಿಮುಖವಾಗಿದೆ ಎಂದು ಹೇಳಿದರು.
ಮಧ್ಯಪ್ರವೇಶಿಸಿದ ಆರ್.ಅಶೋಕ್, ಕೇವಲ ಬಾಯಿಮಾತಿನಲ್ಲಿ ಸಮಾಧಾನ ಹೇಳಿದರೆ ಸಾಲದು. ಜನರಿಗೆ ಧೈರ್ಯ ಬರುವಂತೆ ಉತ್ತರ ನೀಡಬೇಕಾಗುತ್ತದೆ ಎಂದಾಗ, ಈ ಬಗ್ಗೆ ಮತ್ತೂಮ್ಮೆ ಪೊಲೀಸರಿಗೆ ಸೂಚನೆ ನೀಡಿ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕುವಂತೆ ಹೇಳಲಾಗುವುದು ಎಂದರು.