ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣದಲ್ಲಿದ್ದು, ಜಿಲ್ಲಾಡಳಿತ ಸೋಂಕಿತರ ಆರೈಕೆಯನ್ನು ಉತ್ತಮವಾಗಿ ನಿರ್ವಹಿಸುತ್ತಿರುವುದರಿಂದ ಜಿಲ್ಲೆಯ ಜನತೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಡೀಸಿ ಡಾ.ಎಂ.ಆರ್.ರವಿ ತಿಳಿಸಿದ್ದಾರೆ.
ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಗುಣಮುಖರಾಗುತ್ತಿರುವವರ ಪ್ರಮಾಣ ಶೇ.62 ರಷ್ಟಿದೆ. ಜಿಲ್ಲೆಯ ಪಾಸಿಟಿವ್ ಪ್ರಮಾಣ ಶೇ.1ರಷ್ಟಿದೆ. ಇದು ಸಮಾಧಾನಕರ ಸಂಗತಿ. ಪ್ರತಿ ವಾರ ಸಂಪರ್ಕಿ ತರ ಪತ್ತೆ ಹಾಗೂ ಪ್ರಯೋಗಾಲಯ ಪರೀಕ್ಷಾ ಕಾರ್ಯವಿಧಾನವನ್ನು ಬದಲಿಸಿಕೊಂಡು ಕೋವಿಡ್ ನಿಯಂತ್ರಣಕ್ಕೆ ಅಗತ್ಯ ಕ್ರಮ ತೆಗೆದುಕೊಂಡಿದ್ದೇವೆ ಎಂದರು.
ಉತ್ತಮ ಆರೈಕೆ: ಸೋಂಕಿತರು ಉತ್ತಮ ಆರೈಕೆಯಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಶ್ರವಣದೋಷ ಹೊಂದಿರುವವರು, ಗರ್ಭಿಣಿಯರು, ಕ್ಷಯರೋಗಿಗಳು, ಎಚ್.ಐ.ವಿ ಸೋಂಕಿತರು ಸಹ ಗುಣಮುಖರಾಗಿ ಬಿಡುಗಡೆಯಾಗಿರುವುದು ಆತ್ಮಸ್ಥೈರ್ಯ ಹೆಚ್ಚಿಸಿದೆ ಎಂದು ವಿವರಿಸಿದರು.
ಜುಲೈನಲ್ಲಿ 8 ಸಾವಿರ ಪರೀಕ್ಷೆ: ಜಿಲ್ಲೆಯಲ್ಲಿ 23428 ಟೆಸ್ಟ್ ಗಳನ್ನು ಮಾಡಲಾಗಿದೆ. ಈ ಪೈಕಿ ಜುಲೈ ತಿಂಗಳಿ ನಲ್ಲೇ 8 ಸಾವಿರ ಪರೀಕ್ಷೆಗಳನ್ನು ಮಾಡಿರುವುದು ವಿಶೇಷ ವಾಗಿದೆ. ಕಳೆದ ಒಂದು ವಾರದಿಂದ ರ್ಯಾಪಿಡ್ ಆಂಟಿಜೆನ್ ಟೆಸ್ಟ್‌ಗಳನ್ನು ಹೆಚ್ಚಿಸಲಾಗಿದೆ. 5 ಸಾವಿರ ಟೆಸ್ಟ್ ಗಳನ್ನು ಮಾಡಲಾಗಿದೆ. ರ್ಯಾಪಿಡ್ ಆಂಟೆ ಜೆನ್ ಟೆಸ್ಟ್ ನಿಂದ 1 ಗಂಟೆಯೊಳಗೆ ಫಲಿತಾಂಶ ಬರುತ್ತಿದೆ. ಪರೀಕ್ಷೆ ಸಂಖ್ಯೆಯನ್ನು ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ ಸೋಂಕಿ ತರ ಪ್ರಮಾಣವು ಹೆಚ್ಚು ತಿಳಿಯುತ್ತಿದೆ ಎಂದರು.
ಸೌಲಭ್ಯಗಳ ಕೊರತೆಯಿಲ್ಲ: ಸೋಂಕು ಪ್ರಕರಣ ನಿರ್ವ ಹಣೆಗಾಗಿ ಜಿಲ್ಲಾಡಳಿತ ಸಿದ್ಧತೆ ಕೈಗೊಂಡಿದೆ. ನಿಗದಿತ ಕೋವಿಡ್ ಆಸ್ಪತ್ರೆ, ಅಲ್ಲದೆ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಚಾಮರಾಜ ನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಸೇರಿದಂತೆ ಒಟ್ಟು 625 ಹಾಸಿಗೆಗಳ ಸಾಮರ್ಥ್ಯವಿದ್ದು, ಸೋಂಕಿತರ ಆರೈಕೆಗೆ ಎಲ್ಲಾ ವ್ಯವಸ್ಥೆಗಳು ಲಭ್ಯವಿದೆ. ಮೈಸೂರು ವಿವಿಯ ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ, ಮುಕ್ತ ವಿವಿಯ ಪ್ರಾದೇಶಿಕ ಕೇಂದ್ರದಲ್ಲಿಯೂ ಕನಿಷ್ಠ 400 ಹಾಸಿಗೆ ಸಾಮರ್ಥ್ಯವುಳ್ಳ ಕೋವಿಡ್ ಕೇಂದ್ರ ಸಿದ್ಧಪಡಿಸಲಾಗುತ್ತಿದೆ. ಸಂತೆಮರಹಳ್ಳಿಯಲ್ಲಿ 100 ಹಾಸಿಗೆ ಸಾಮರ್ಥ್ಯದ ಕೋವಿಡ್ ಆಸ್ಪತ್ರೆ ಸಿದ್ಧವಿದೆ, ಒಟ್ಟಾರೆ ಕೋವಿಡ್ ನಿಯಂತ್ರಣಕ್ಕೆ ಯಾವುದೇ ಸೌಲಭ್ಯಗಳ ಕೊರತೆಯಿಲ್ಲ. ವೈದ್ಯರು, ನರ್ಸ್‌ಗಳು ಹಾಗೂ ಹೌಸ್‌ಕೀಪಿಂಗ್ ಸೇರಿದಂತೆ ಎಲ್ಲಾ ಸಿಬ್ಬಂದಿ ಲಭ್ಯರಿದ್ದಾರೆ ಎಂದರು.