Advertisement

ನಿಜವಾದ ಸಂತ್ರಸ್ತರ ಕೈಬಿಟ್ಟರೆ ಕ್ರಮ

10:25 AM Sep 01, 2019 | Suhan S |

ಬಾಗಲಕೋಟೆ: ಜಿಲ್ಲೆಯಲ್ಲಿ ಪ್ರವಾಹಕ್ಕೆ ಹಾನಿಗೊಳಗಾದವರ ಮನೆ, ಬೆಳೆ ಸಮೀಕ್ಷೆ ಸೆ. 4 ರವರೆಗೆ ಕೈಗೊಳ್ಳಲಾಗುತ್ತಿದ್ದು, ನಿಜವಾದ ಸಂತ್ರಸ್ತರು ಸಮೀಕ್ಷೆಯಿಂದ ಹೊರಗುಳಿಯದಂತೆ ಪಿಡಿಒಗಳು ಹಾಗೂ ಆಯಾ ತಹಶೀಲ್ದಾರ್‌ರು ಕ್ರಮ ಕೈಗೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸೂಚಿಸಿದರು.

Advertisement

ಜಿಪಂ ಸಭಾ ಭವನದಲ್ಲಿ ಶನಿವಾರ ನಡೆದ ಪ್ರವಾಹ ಸಂತ್ರಸ್ತರಿಗೆ ಪರಿಹಾರ ವಿತರಣೆ ಹಾಗೂ ಪುನರ್‌ವಸತಿ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರವಾಹಕ್ಕೆ ಹಾನಿಗೊಳಗಾದ ನಿಜವಾದ ಸಂತ್ರಸ್ತರಿಗೆ ನ್ಯಾಯ ಒದಗಿಸುವುದಲ್ಲದೇ ಹಾನಿಗೊಳಪಡದವರನ್ನು ಸೇರಿಸುವಂತೆ ಯಾವುದೇ ಒತ್ತಾಯಕ್ಕೆ ಮಣಿಯಬಾರದೆಂದು ತಿಳಿಸಿದರು.

ಜಿಲ್ಲೆಯಲ್ಲಾದ ಮನೆ ಹಾಗೂ ಬೆಳೆ ಹಾನಿ ಸಮೀಕ್ಷೆ ಆರಂಭಗೊಂಡಿದ್ದು, ಸೆ.7ರ ನಂತರ ನಿಖರವಾದ ಹಾನಿಯ ಅಂದಾಜು ದೊರೆಯಲಿದೆ. ಯಾವುದೇ ರೀತಿಯ ಗಡಿಬಿಡಿ, ಗೊಂದಗಳಾಗದಂತೆ ನಿಖರ ಮಾಹಿತಿ ವರದಿ ಮಾಡುವಂತೆ ಅವರು ತಿಳಿಸಿದರು. ಎನ್‌.ಡಿ.ಆರ್‌.ಎಫ್‌ ಪ್ರಕಾರ ಈವರೆಗೆ ಒಟ್ಟು 1587 ಕೋಟಿ ಪ್ರಾಥಮಿಕ ಹಾನಿ ಅಂದಾಜಿಸಲಾಗಿದ್ದು, ಇನ್ನು ಸಮೀಕ್ಷೆ ಕಾರ್ಯ ನಡೆಯುತ್ತಿದೆ ಎಂದರು.

ಪ್ರವಾಹ ಬಾಧಿತ ಪ್ರದೇಶಗಳ ಪಂಚಾಯತಿವಾರು ಮನೆಗಳ ಪಟ್ಟಿ ಪಡೆದು ಸಮೀಕ್ಷೆ ಪ್ರಕಾರ ಕಡಿಮೆ ಇರುವ ಪ್ರದೇಶಗಳಲ್ಲಿ ಪುನಃ ಸರ್ವೇ ಕಾರ್ಯ ನಡೆಸಲು ಕಾರಜೋಳ ಸೂಚಿಸಿದರು.

ಯುಕೆಪಿ ಯೋಜನಾ ನಿರಾಶ್ರಿತರು ಪುನರ್ವಸತಿ ಹೊಂದಿ ಹಕ್ಕುಪತ್ರ ಪಡೆದವರು ನೆರೆ ಪರಿಹಾರ ವ್ಯಾಪ್ತಿಗೊಳಪಡುವದಿಲ್ಲ. ಆದರೆ ಯೋಜನಾ ನಿರಾಶ್ರಿತರಾಗಿ ಹಕ್ಕುಪತ್ರ ಪಡೆಯದೇ ಇರುವವರಿಗೆ ನೆರೆ ವ್ಯಾಪ್ತಿಗೆ ಒಳಪಡುತ್ತಿದ್ದರೆ ಅಂತವರಿಗೆ ಮಾತ್ರ ಕೇವಲ ತಾತ್ಕಾಲಿಕ ಶೆಡ್‌ ನೀಡುವ ಕಾರ್ಯ ಮಾಡಲಾಗುತ್ತದೆ. ಯೋಜನಾ ನಿರಾಶ್ರಿತರು ಬಿಟ್ಟು ಉಳಿದ ಸಂತ್ರಸ್ತರಿಗೆ ಶೇ. 75ಕ್ಕಿಂತ ಹೆಚ್ಚಿಗೆ ಮನೆ ಹಾನಿಗೊಳಗಾದಲ್ಲಿ ತಾತ್ಕಾಲಿಕ ಪರಿಹಾರ ಕೇಂದ್ರವಾಗಿ ಶೆಡ್‌ ನಿರ್ಮಾಣ ಮಾಡಿಕೊಡುವುದರ ಜೊತೆಗೆ ಪರಿಹಾರಧನ ಸಹ ನೀಡಲಾಗುತ್ತದೆ ಎಂದರು.

Advertisement

ಮನೆ, ಬೆಳೆ ಸಮೀಕ್ಷೆ ಕಾರ್ಯದಲ್ಲಿ ಯಾವುದೇ ರೀತಿಯಲ್ಲಿ ಸಂತ್ರಸ್ತರಿಗೆ ಲೋಪವಾಗದಂತೆ ನೋಡಿಕೊಳ್ಳಬೇಕು. ತೋಟದ ಮನೆ, ಬೇರೆ ಊರುಗಳಿಗೆ ಗುಳೆ ಹೋದ ಮನೆಗಳು ಹಾನಿಯಾಗಿದಲ್ಲಿ ಅವುಗಳನ್ನು ಸಹ ಸಮೀಕ್ಷೆ ಕಾರ್ಯದಲ್ಲಿ ಪರಿಗಣಿಸುವಂತೆ ಶಾಸಕರಾದ ಸಿದ್ದು ಸವದಿ, ಆನಂದ ನ್ಯಾಮಗೌಡರ, ದೊಡ್ಡನಗೌಡ ಪಾಟೀಲ, ಮುರುಗೇಶ ನಿರಾಣಿ ಹಾಗೂ ವಿಧಾನಪರಿಷತ್‌ ಸದಸ್ಯ ಎಸ್‌.ಆರ್‌.ಪಾಟೀಲ ಸಭೆಯಲ್ಲಿ ಒತ್ತಾಯಿಸಿದರು.

ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಜಾನುವಾರುಗಳಿಗೆ ಹಸಿ ಮೇವು ಪೂರೈಸಿದ ರೈತರಿಗೆ ಪ್ರತಿ ಟನ್‌ಗೆ 4 ಸಾವಿರ ರೂ.ಗಳಂತೆ ಹಣ ಸಂದಾಯವಾಗಬೇಕು. ಅಲ್ಲದೇ 10 ಸಾವಿರ ಪರಿಹಾರಧನ ನೀಡುವಲ್ಲಿ ನಿಜವಾದ ಸಂತ್ರಸ್ತರನ್ನು ಬಿಟ್ಟು ಹೋಗಿದೆ. ಇದನ್ನು ಸರಿಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾಧಿಕಾರಿ ಆರ್‌.ರಾಮಚಂದ್ರನ್‌ ಪ್ರವಾಹದಿಂದಾದ ಹಾನಿ ಹಾಗೂ ಕೈಗೊಂಡ ಪರಿಹಾರ ಕಾರ್ಯಗಳ ಕುರಿತು ವಿವರಣೆ ನೀಡುತ್ತಾ, ಜಿಲ್ಲೆಯಲ್ಲಿ ಇದುವರೆಗೆ ಬಂದು ಹೋದ ಪ್ರವಾಹಕ್ಕಿಂತ ಈ ಪ್ರವಾಹ ಹೆಚ್ಚಿನ ಪ್ರಮಾಣದಲ್ಲಿ ಬಂದು ಅಪಾರ ಪ್ರಮಾಣದ ಆಸ್ತಿ-ಪಾಸ್ತಿ, ಬೆಳೆ ನಷ್ಟವಾಗಿದೆ. ಈ ಪ್ರವಾಹದ ಭೀಕರತೆಗೆ 3 ಜನ ಮೃತಪಟ್ಟಿದ್ದಾರೆ. ಒಟ್ಟು 47036 ಕುಟುಂಬಗಳು ಸಂತ್ರಸ್ತರಾಗಿದ್ದಾರೆ. ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್‌, ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಇಲ್ಲಿವರೆಗೆ ಒಟ್ಟು 41,145 ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ 242 ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಅದರಲ್ಲಿ 220 ಕೇಂದ್ರ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದರು.

ಪರಿಹಾರ ಕೇಂದ್ರದಲ್ಲಿ ಪ್ರಾರಂಭದಲ್ಲಿ ಒಟ್ಟು 90,7280 ಸಂತ್ರಸ್ತರು ಆಶ್ರಯ ಪಡೆದಿದ್ದರು. ಸದ್ಯ ಈಗ ಪರಿಹಾರ ಕೇಂದ್ರದಲ್ಲಿ 12764 ಜನರು ಇಂದಿಗೂ ಕೂಡಾ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಈ ಪ್ರವಾಹದಿಂದ 1587.51 ಕೋಟಿ ರೂ. ಹಾನಿಯಾಗಿದ್ದು, 421.01 ಕೋಟಿ ರೂ. ಪರಿಹಾರದ ಬೇಡಿಕೆ ಇಡಲಾಗುತ್ತಿದೆ ಎಂದರು.

ಈ ಪ್ರವಾಹದಿಂದ 66,159 ಹೆಕ್ಟರ್‌ ಕೃಷಿ ಬೆಳೆ, 63 ಹೆಕ್ಟೇರ್‌ ರೇಷ್ಮೆ ಬೆಳೆ, 5528.05 ಹೆಕ್ಟೆರ್‌ ತೋಟಗಾರಿಕೆ ಬೆಳೆ ಹಾನಿಯಾಗಿದ್ದು, ಉಳಿದ ಬೆಳೆ ಹಾನಿ ಸಮೀಕ್ಷೆಯು ಪ್ರಗತಿಯಲ್ಲಿದೆ. ಇದುವರೆಗೆ 128 ಗೋ ಶಾಲೆ ಪ್ರಾರಂಭಿಸಲಾಗಿದ್ದು, ಈಗ 97 ಗೋ ಶಾಲೆ ಸ್ಥಗಿತಗೊಳಿಸಲಾಗಿದೆ. ಪ್ರಸ್ತುತ 31 ಗೋಶಾಲೆಗಳಲ್ಲಿ 2802 ಜಾನುವಾರುಗಳು ಆಶ್ರಯ ಪಡೆದಿವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಜಿಪಂ ಸಿಇಒ ಗಂಗೂಬಾಯಿ ಮಾನಕರ ಮಾತನಾಡಿ, ಪ್ರವಾಹದಿಂದ ಗ್ರಾಮೀಣ ಭಾಗದಲ್ಲಿ ರಸ್ತೆ, ಕುಡಿಯುವ ನೀರಿನ ಯೋಜನೆ, ಶಾಲಾ, ಅಂಗನವಾಡಿ ಕಟ್ಟಡ ಸೇರಿ ಒಟ್ಟು 90.97 ಕೋಟಿ ರೂ.ಗಳ ಹಾನಿಯಾಗಿದೆ. ಶಾಲಾ ಕಟ್ಟಡಗಳಲ್ಲಿ ಪರಿಹಾರ ಕೇಂದ್ರ ಸ್ಥಾಪಿಸಿದ ಹಿನ್ನ್ನೆಲೆಯಲ್ಲಿ ಕಳೆದ 20 ದಿನಗಳಿಂದ ಕೆಲವೊಂದು ಶಾಲೆಗಳನ್ನು ಪುನಃ ಶಾಲೆ ಪ್ರಾರಂಭಿಸಲು ಸಾಧ್ಯವಾಗಿಲ್ಲ. ಶಾಲೆ ನಡೆಸಲು ಪರ್ಯಾಯವಾಗಿ ತಾತ್ಕಾಲಿಕ ಶೆಡ್‌ಗಳ ವ್ಯವಸ್ಥೆ ಮಾಡಿಕೊಡುವಂತೆ ಕೋರಿದರು.

ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಸಂಸದ ಪಿ.ಸಿ.ಗದ್ದಿಗೌಡರ, ಜಿಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಅಪರ ಜಿಲ್ಲಾಧಿಕಾರಿ ದುರ್ಗೇಶ ರುದ್ರಾಕ್ಷಿ, ಉಪವಿಭಾಗಾಧಿಕಾರಿಗಳಾದ ಎಚ್.ಜಯಾ, ಮೊಹಮ್ಮದ ಇಕ್ರಮ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next