ಬೆಂಗಳೂರು: ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ಹೆಸರು ನೋಂದಾಯಿಸಿಕೊಳ್ಳದೆ ಸಾಕು ಪ್ರಾಣಿ ಮಾರಾಟಗಾರರು ಪೆಟ್ ಶಾಪ್ ತೆರೆದಿದ್ದರೆ ಅಂತಹವರ ವಿರುದ್ಧ ಕಠಿನ ಕ್ರಮ ಕೈಗೊಳ್ಳುವುದಾಗಿ ಪಶು ಸಂಗೋಪನೆ ಸಚಿವ ಪ್ರಭು ಬಿ. ಚೌವ್ಹಾಣ್ ಎಚ್ಚರಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ನಿಯಮಗಳನ್ನು ಪಕ್ಷಿಗಳು ಮತ್ತು ಪ್ರಾಣಿಗಳನ್ನು ಮಾರಾಟ ಮಾಡುವ ಅಂಗಡಿಗಳು ಸ್ಪಷ್ಟವಾಗಿ ಉಲ್ಲಂಘಿಸುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಹಲವು ಕಡೆಗಳಲ್ಲಿ ಈಗಾಗಲೇ ಅಧಿಕಾರಿಗಳು ದಾಳಿ ನಡೆಸಿದ್ದಾರೆಂದು ಹೇಳಿದ್ದಾರೆ.
ಪಾರಿವಾಳ, ಮೊಲ, ಬಾತುಕೋಳಿ, ನಾಯಿಗಳು, ಬೆಕ್ಕುಗಳು ಸೇರಿ ವಿವಿಧ ಜಾತಿಯ ಪ್ರಾಣಿ ಮತ್ತು ಪಕ್ಷಿಗಳನ್ನು ಮಾರಾಟ ಮಾಡುವ ಪೆಟ್ ಶಾಪ್ ಮಾಲಕರು ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿಕೊಂಡು ಪರವಾನಗಿ ಪಡೆದು ಸಾಕು ಪ್ರಾಣಿಗಳ ಖರೀದಿಯ ನಿಯಮಗಳನ್ನು ಪಾಲಿಸಬೇಕೆಂದು ತಾಕೀತು ಮಾಡಿದ್ದಾರೆ. ನಿಯಮ ಉಲ್ಲಂಘಿಸುವ ಅಂಗಡಿ ಮಾಲಕರ ಬಗ್ಗೆ ಸಾರ್ವಜನಿಕರು ಸಹಾಯವಾಣಿ ಸಂಖ್ಯೆ(82771 00200)ಗೆ ಕರೆ ಮಾಡಬಹುದು ಎಂದು ತಿಳಿಸಿದ್ದಾರೆ.