ವಿಧಾನ ಪರಿಷತು: ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿಕೊಳ್ಳುವ ಪೊಲೀಸ್ ಅಧಿಕಾರಿಗಳ ಮೇಲೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಎಚ್ಚರಿಕೆ ನೀಡಿದರು.
ಕರ್ನಾಟಕ ಪೊಲೀಸರ (ತಿದ್ದುಪಡಿ) ವಿಧೇಯಕ-2024 ಅನ್ನು ಮಂಡಿಸಿ ಅವರು ಮಾತನಾಡಿದರು.
ಈಗಾಗಲೇ ಕೆಲವು ಪೊಲೀಸ್ ಅಧಿಕಾರಿಗಳು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂದು ವಿರೋಧ ಪಕ್ಷಗಳ ಸದಸ್ಯರು ಪ್ರಸ್ತಾಪ ಮಾಡಿದ್ದಾರೆ. ಆದರೆ ಈ ಬಗ್ಗೆ ಇಲಾಖೆಗೆ ಯಾವುದೇ ರೀತಿಯ ಮಾಹಿತಿ ಈವರೆಗೂ ಇಲ್ಲ. ಒಂದು ವೇಳೆ ಹಿರಿಯ ಪೊಲೀಸ್ ಅಧಿಕಾರಿಗಳು ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿಕೊಂಡಿರುವುದು ಕಂಡು ಬಂದರೆ ಸರ್ಕಾರ ಅಂತಹ ಅಧಿಕಾರಿಗಳ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳಲಿದೆ ಎಂದರು.
ಹಿರಿಯ ಅಧಿಕಾರಿಗಳೊಂದಿಗಿನ ಪ್ರತಿ ಸಭೆಯಲ್ಲಿ ಈ ಬಗ್ಗೆ ಎಚ್ಚರಿಕೆ ನೀಡುವ ಕೆಲಸ ನಡೆದಿದೆ. ರಿಯಲ್ ಎಸ್ಟೇಟ್, ಸಿವಿಲ್ ವಿಚಾರಗಳಲ್ಲಿ ಮಧ್ಯಪ್ರವೇಶ ಮಾಡಬಾರದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಆಗಿ ಎಚ್ಚರಿಕೆ ನೀಡಲಾಗಿದೆ ಎಂದು ಸದನಕ್ಕೆ ಮಾಹಿತಿ ನೀಡಿದರು.
ಪೊಲೀಸ್ ಇಲಾಖೆಯ ಅಧಿನಿಯಮದಲ್ಲಿ ಹಲವು ತಿದ್ದುಪಡಿ ತರಲಾಗಿದೆ. ಜತೆಗೆ ಕೆಲವು ಪೂರಕ ಅಂಶಗಳನ್ನು ಕೂಡ ಸೇರಿಸಲಾಗಿದೆ. ಇನ್ಸ್ ಪೆಕ್ಟರ್, ಡಿವೈಎಸ್‌ಪಿ ಸೇರಿದಂತೆ (ಐಪಿಎಸ್ ಹೊರತು ಪಡಿಸಿದ ಅಧಿಕಾರಿಗಳು) ಹಿರಿಯ ಪೊಲೀಸ್ ಅಧಿಕಾರಗಳ ವರ್ಗಾವಣೆ ಅವಧಿ 1 ವರ್ಷವಿತ್ತು. ಅದನ್ನು 2 ವರ್ಷ ವಿಸ್ತರಿಸಲಾಗಿದೆ. ಅಸಮರ್ಥ ಅಧಿಕಾರಿಗಳನ್ನು 2 ವರ್ಷ ಕೂಡ ಒಂದೇ ಸ್ಥಳದಲ್ಲಿ ಇರಿಸಲಾಗದು. ಈ ಬಗ್ಗೆ ನಿಯಮಾವಳಿ ರೂಪಿಸಲಾಗುವುದು ಎಂದರು.
ಕೌನ್ಸೆಲಿಂಗ್ ಮೂಲಕ ವರ್ಗಾವಣೆಗೆ ಚಿಂತನೆ : ಈಗಾಗಲೇ ಹಲವು ಇಲಾಖೆಗಳಲ್ಲಿ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದೆ. ಆ ರೀತಿಯ ಪ್ರಕ್ರಿಯೆನ್ನು ರಾಜ್ಯ ಪೊಲೀಸ್ ಇಲಾಖೆಯಲ್ಲೂ ಕೂಡ ತರುವ ಚಿಂತನೆ ಸರ್ಕಾರದ ಮುಂದೆ ಇದೆಯಾ ಎಂಬ ಸಭಾಪತಿ ಮಾತಿಗೆ ಉತ್ತರಿಸಿದ ಸಚಿವ ಡಾ.ಜಿ.ಪರಮೇಶ್ವರ್, ಹಿರಿಯ ಅಧಿಕಾರಿಗಳನ್ನು ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಬೇಕು ಎಂಬ ಚಿಂತನೆ ಚರ್ಚೆಯ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಗಮನ ಹರಿಸುವುದಾಗಿ ತಿಳಿಸಿದರು.
ಕಮಾಂಡ್ ಸೆಂಟರ್ ಶೀಘ್ರ ಸ್ಥಾಪನೆ :
ಪೊಲೀಸ್ ಇಲಾಖೆಯಲ್ಲಿ ಹಲವು ರೀತಿಯ ಬದಲಾವಣೆಗೆ ಸರ್ಕಾರ ಮುಂದಾಗಿದೆ. ಜತೆಗೆ ಬೆಂಗಳೂರಿನಲ್ಲಿ ಕಮಾಂಡರ್ ಸೆಂಟರ್ ಸ್ಥಾಪಿಸಲು ಮುಂದಾಗಿದೆ. ರಾಜಧಾನಿಯ ಸುಮಾರು 1500 ಪೊಲೀಸ್ ಠಾಣೆಗಳಲ್ಲಿ ಪ್ರತಿ ದಿನ ನಡೆಯುವ ಆಗು ಹೋಗುಗಳನ್ನು ಈ ಕಮಾಂಡರ್ ಸೆಂಟರ್‌ಗಳ ಮೂಲಕ ವೀಕ್ಷಣೆ ಮಾಡಬಹುದಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.